ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯಕಾಶಿ ಪಾರ್ಕ್‌ನಲ್ಲಿ ಮಕ್ಕಳು ಆಟವಾಡಲು ಹಣ ನೀಡಬೇಕು. ಅರಣ್ಯ ಇಲಾಖೆ ಮತ್ತು ಪಂಚಾಯತಿ ಸಹಯೋಗದಲ್ಲಿ ನಿರ್ಮಾಣವಾದ ಈ ಪಾರ್ಕ್‌ನಲ್ಲಿ ಇಂತಹ ನಿಯಮ ಇರುವುದು ಅಚ್ಚರಿಯ ಸಂಗತಿ.
ಭಟ್ಕಳ (ಮಾ.3): ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಯ ಪಕ್ಕದಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದಾಕೆ ಸಾಲು ಮರದ ತಿಮ್ಮಕ್ಕ. ಹುಲಿಕಲ್-ಕುದೂರು ನಡುವಿನ ಹೆದ್ದಾರಿಯಲ್ಲಿ ತಣ್ಣಗೆ ಹೋಗುವಾಗ ಎಲ್ಲಿರಿಗೂ ನೆನಪಾಗೋದು ತಿಮ್ಮಕ್ಕನ ನಿಸ್ವಾರ್ಥ ಸೇವೆ. ಆದರೆ, ಇದಕ್ಕೆ ವಿರುದ್ಧ ಎನ್ನುವಂತೆ ಆಕೆಯ ಹೆಸರನ್ನು ಇರಿಸಿಕೊಂಡಿರುವ ಅರಣ್ಯ ಇಲಾಖೆ ಹಾಗೂ ಪಂಚಾಯತಿಯ ಸಹಯೋಗದಲ್ಲಿ ಕಟ್ಟಿದ ಪಾರ್ಕ್‌ನಲ್ಲಿ ಮಕ್ಕಳು ಮನಬಿಚ್ಚಿ ಆಟವಾಡಲು ಕೂಡ ಹಣ ನೀಡಬೇಕಿದೆ. ಪ್ರತಿದಿನ ಈ ಪಾರ್ಕ್‌ಗೆ ಬರುವ ನೂರಾರು ಮಕ್ಕಳಿಂದ ಹಣ ಕಟ್ಟಿಸಿಕೊಂಡು ಇಲ್ಲಿ ಆಟವಾಡೋದಕ್ಕೆ ಬಿಡುತ್ತಾರೆ. ಈ ಪಾರ್ಕ್ ಇರೋದು ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಸಾಗರ ರಸ್ತೆಯಲ್ಲಿ. ವಿಶೇಷ ಅಂದರೆ ಮೀನುಗಾರಿಕೆ ಸಚಿವರಾಗಿರುವ ಮಂಕಾಳು ವೈದ್ಯ ಅವರ ಸ್ವಂತ ಕ್ಷೇತ್ರದಲ್ಲಿನ ಪಾರ್ಕ್‌ನಲ್ಲಿ ಇಡೀ ರಾಜ್ಯದಲ್ಲೇ ಇಲ್ಲದೇ ಇರುವಂಥ ರೂಲ್ಸ್ ಇರೋದು ಅಚ್ಚರಿಯ ವಿಚಾರ.
9 ವರ್ಷಗಳ ಹಿಂದೆ ಈ ಪಾರ್ಕ್‌ಅನ್ನು ನಿರ್ಮಾಣ ಮಾಡಿ ಅದಕ್ಕೆ ಸಾಲುಮರದ ತಿಮ್ಮಕ್ಕ ಸಸ್ಯಕಾಶಿ ಎಂದು ಹೆಸರು ನೀಡಲಾಗಿತ್ತು. ಅರಣ್ಯ ಇಲಾಖೆಯ ಜಾಗದಲ್ಲಿ ಜಾಲಿ ಪಂಚಾಯತಿ ಈ ಪಾರ್ಕ್‌ಅನ್ನು ನಿರ್ಮಾಣ ಮಾಡಿತ್ತು. ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿ ಹೋಗಿದ್ದ ಪಾರ್ಕ್‌ಅನ್ನು ಖಾಸಗಿ ಸೊಸೈಟಿಯರ ಸಹಾಯದಿಂದ ಕಳೆದ ವರ್ಷ ಮರು ನಿರ್ಮಾಣ ಮಾಡಲಾಗಿತ್ತು. ಆಟಿಕೆ ಸಾಮಾನುಗಳು ಕಿತ್ತು ಹೋಗಿ, ಸಿಸಿ ಕ್ಯಾಮೆರಾಗಳು ಹಾಳಾಗಿ ಹೋಗಿದ್ದವು. ಇದರಿಂದ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೂ ದಿನದಿಂದ ದಿನಕ್ಕೆ ಕಡಿಮೆಯಾಗಿತ್ತು. ಅನಿವಾಸಿ ಭಾರತೀಯರ ಸೇವಾ ಸಂಸ್ಥೆ ರಬಿತಾ ಸೊಸೈಟಿ ಇದರ ಪುನರ್ ನಿರ್ಮಾಣಕ್ಕೆ ಅಂದಾಜು 10 ಲಕ್ಷ ರೂಪಾಯಿ ನೀಡಿತ್ತು.
ಈ ಪಾರ್ಕ್‌ಗೆ ಆಟವಾಡಲು ಬರುವ ಮಕ್ಕಳಿಗೆ ಒಮ್ಮೊಮ್ಮೆ 5 ರೂಪಾಯಿ ಇಲ್ಲವೇ 10 ರೂಪಾಯಿ ಚಾರ್ಜ್ ಮಾಡಿದರೆ, ವಯಸ್ಕರರಿಗೆ 20 ರೂಪಾಯಿ ಚಾರ್ಜ್ ಮಾಡುತ್ತಾರೆ. ಬಸ್ ಟಿಕೆಟ್ ರೀತಿಯಲ್ಲಿ ನೀಡುವ ಸ್ಲಿಪ್ ಕೊಟ್ಟ ಬಳಿಕ ಪಕ್ಕದಲ್ಲಿಯೇ ಇರುವ ಅಂಗಡಿಯಲ್ಲಿ ಆ ಸ್ಲಿಪ್ ನೀಡಿ ಹಣ ಪಾವತಿ ಮಾಡಬೇಕು. ಇದ್ಯಾಕೆ ಹೀಗೆ ಅಂತೆಲ್ಲಾ ಅಲ್ಲಿ ಕೇಳುವ ಹಾಗೆಯೇ ಇಲ್ಲ. ಇದು ಇಲ್ಲಿನ ರೂಲ್ಸ್ ಅನ್ನೋ ಉತ್ತರ ಸಿಬ್ಬಂದಿಯಿಂದ ಬರುತ್ತದೆ.
ಭಟ್ಕಳ ಪಟ್ಟಣ ಪ್ರದೇಶದಲ್ಲಿ ವಾಸ ಮಾಡುವವರಿಗೆ ಮುಂಜಾನೆ ಹಾಗೂ ಸಂಜೆಯ ವಾಯುವಿಹಾರಕ್ಕೆ ಇರುವ ಅತಿದೊಡ್ಡ ಹಾಗೂ ತಕ್ಕಮಟ್ಟಿಗೆ ವ್ಯವಸ್ಥೆ ಇರುವ ಪಾರ್ಕ್ ಇದೊಂದೆ. ಆದರೆ, ಈ ಪಾರ್ಕ್‌ನ ಒಳಹೊಕ್ಕಲು ಹಣ ನೀಡಬೇಕಿರುವ ರೂಲ್ಸ್ ಕೇಳಿ ಹೆಚ್ಚಿನ ಜನರು ಇಲ್ಲಿಗೆ ಬರಲು ನಿರಾಸಕ್ತಿ ತೋರಿದ್ದಾರೆ.
ಜಾಲಿ ಪಟ್ಟಣ ಪಂಚಾಯ್ತಿ 75 ಲಕ್ಷ ಅನುದಾನ ನೀಡಿ ಈ ಪಾರ್ಕ್‌ಗೆ ನಿರಂತರ ನೀರಿನ ಸಂಪರ್ಕ, ರಾಂಪ್ ಹಾಗೂ ಹೊಸ ಆಟಿಕೆಗಳನ್ನು ಹಾಕಿದೆ. ಇಲ್ಲ ಮೂರು ಜನ ಸಿಬ್ಬಂದಿಯನ್ನು ಪಾರ್ಕ್ ನೋಡಿಕೊಳ್ಳಲು ಇರಿಸಲಾಗಿದ್ದರೂ, ಇವರ ಹೆಚ್ಚಿನ ಸಮಯ ಪಾರ್ಕ್‌ನಲ್ಲಿ ಬರುವ ಜನರಿಂದ ಶುಲ್ಕ ವಸೂಲಿ ಮಾಡುವುದೇ ಆಗಿದೆ.
Bhatkal: ಕಳ್ಳತನ ಮಾಡಿದ ದನದ ಮಾಂಸವನ್ನು ಇಸ್ಲಾಂನಲ್ಲಿ ಸೇವಿಸೋದಿಲ್ಲ: ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ



