ಭಟ್ಕಳ[ಡಿ.31]: ಭಟ್ಕಳ ಬಸ್‌ ನಿಲ್ದಾಣದಲ್ಲಿ ಸೋಮವಾರ ಭಟ್ಕಳ-ತಿರುಪತಿ ನೂತನ ಬಸ್ಸನ್ನು ಉದ್ಘಾಟಿಸಿದ ಶಾಸಕ ಸುನೀಲ್‌ ನಾಯ್ಕ ಅದೇ ಬಸ್ಸನ್ನು ಕೆಲಕಾಲ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಶಾಸಕರು ಬಸ್ಸನ್ನು ಉದ್ಘಾಟನೆ ಮಾಡಿದ ಬಳಿಕ ಬಸ್ಸಿನೊಳಗೆ ಹೋಗಿ ಸೀದಾ ಚಾಲಕನ ಸೀಟಿನಲ್ಲಿ ಕುಳಿತು ಬಸ್ಸನ್ನು ಚಾಲೂ ಮಾಡಿಯೇಬಿಟ್ಟರು. ಬಸ್ಸನ್ನು ಚಾಲನೆ ಮಾಡುತ್ತಾ ನಿಲ್ದಾಣದಿಂದ ಪಟ್ಟಣದ ಹೃದಯ ಭಾಗವಾದ ಸಂಶುದ್ದೀನ ವೃತ್ತ ಒಯ್ದು ವಾಪಸ್‌ ನಿಲ್ದಾಣಕ್ಕೆ ತಂದು ನಿಲ್ಲಿಸಿದರು.

ಶಾಸಕರೂ ಚೆನ್ನಾಗಿಯೇ ಬಸ್‌ ಓಡಿಸುತ್ತಾರೆ ಎಂದು ಹಲವರು ಹರ್ಷ ವ್ಯಕ್ತಪಡಿಸಿದರು. ಶಾಸಕರು ಬಸ್‌ ಚಾಲನೆ ಸಂದರ್ಭದಲ್ಲಿ ಬಸ್ಸಿನೊಳಗೆ ಉದ್ಘಾಟನೆಗೆ ಬಂದಿದ್ದ ಮುಖಂಡರು, ಮತ್ತಿತರರಿದ್ದರು.