ಬೆಂಗಳೂರು [ಮಾ.13]:  ರೌಡಿಗಳು ಸೇರಿದಂತೆ ಕ್ರಿಮಿನಲ್‌ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಸ್ನೇಹ ಹೊಂದಿರುವ ಪೊಲೀಸರ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಭಾಸ್ಕರ್‌ರಾವ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆಯುಕ್ತರು, ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ಪೊಲೀಸರು ಹೊಂದಿರುವ ಸ್ನೇಹದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಭೂಗತ ಪಾತಕಿ ರವಿ ಪೂಜಾರಿ ಜತೆ ನಂಟು ಹೊಂದಿದ್ದ ಸಿಸಿಬಿ ಎಸಿಪಿಗೆ ಕ್ಷಮೆ ಇಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ ಆಯುಕ್ತರು, ಆ ಅಧಿಕಾರಿ ವಿರುದ್ಧ ಕಾನೂನು ಕ್ರಮಕ್ಕೆ ಡಿಜಿಪಿ ಪ್ರವೀಣ್‌ ಸೂದ್‌ ಅವರಿಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಐನಾತಿ ರೌಡಿಶೀಟರ್ ಸ್ಲಂ ಭರತನನ್ನ ಎಸ್ಕೇಪ್ ಮಾಡಿಸಿದ್ದ ಆರೋಪಿಗಳು ಲಾಕ್.

ಆರೋಪಿ ರವಿ ಪೂಜಾರಿಯನ್ನು ಸಿಸಿಬಿ ವಿಚಾರಣೆ ವೇಳೆ ಸಾಕಷ್ಟುಮಾಹಿತಿ ನೀಡಿದ್ದಾನೆ. ಆತನ ವಿರುದ್ಧ ತನಿಖೆಯಲ್ಲಿ ಪಾರದರ್ಶಕತೆ ಉಳಿಸಿಕೊಳ್ಳುವ ಸಲುವಾಗಿ ಆರೋಪ ಹೊತ್ತಿರುವ ಎಸಿಪಿಯನ್ನು ಸಿಸಿಬಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ರೌಡಿಗಳು ಹಾಗೂ ಭೂ ಮಾಫಿಯಾ ಸೇರಿದಂತೆ ಕ್ರಿಮಿನಲ್‌ಗಳೊಂದಿಗೆ ಸ್ನೇಹ ಹೊಂದಿರುವ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ವಿವಾದಿತ ಭೂ ದಾಖಲೆಗಳ ವ್ಯವಹಾರದಲ್ಲಿ ರಿಯಲ್‌ ಎಸ್ಟೇಟ್‌ ದಂಧೆಕೋರರಿಗೆ ಅನುಕೂಲ ಕಲ್ಪಿಸುವ ಪೊಲೀಸರ ಬಗ್ಗೆ ದೂರುಗಳು ಬಂದಿವೆ ಎಂದು ಆಯುಕ್ತರು ತಿಳಿಸಿದರು.

ಕ್ರಿಮಿನಲ್‌ಗಳ ಜೊತೆ ಹುಟ್ಟು ಹಬ್ಬ ಆಚರಿಸಿಕೊಳ್ಳುವುದು, ಅಂತಹ ವ್ಯಕ್ತಿಗಳೊಂದಿಗೆ ವ್ಯವಹರಿಸುವುದನ್ನು ಸಹಿಸುವುದಿಲ್ಲ ಎಂದು ಭಾಸ್ಕರ್‌ರಾವ್‌ ಎಚ್ಚರಿಸಿದರು.