70 ವರ್ಷದಿಂದ ರಂಜಿಸಿದ್ದ ಭಾರತ್ ಟಾಕೀಸ್ ಬಂದ್

ಸತತ 70 ವರ್ಷಗಳಿಂದಲೂ ಪ್ರೇಕ್ಷಕರನ್ನು ರಂಜಿಸಿದ್ದ ಭಾರತ್ ಟಾಕೀಸ್ ಬಂದ್ ಆಗುತ್ತಿದೆ. 2020ರ ಜನವರಿಯಿಂದ ಚಿತ್ರಮಂದಿರ ಮುಚ್ಚಲಾಗುತ್ತಿದೆ. 

Bharat Talkies To Be Shut Down in January

ಅನಂತ ನಾಡಿಗ್‌

ತರೀಕೆರೆ [ಡಿ.28]:  ಪಟ್ಟಣದ ಪ್ರತಿಷ್ಠಿತ ಭಾರತ್‌ ಚಿತ್ರಮಂದಿರದಲ್ಲಿ 2020ರ ಜನವರಿಯಿಂದ ಚಲನಚಿತ್ರ ಪ್ರದರ್ಶನ ಇರುವುದಿಲ್ಲ. ಆದರೆ, ಈಗಿರುವ ಕಟ್ಟಡವನ್ನು ವಾಣಿಜ್ಯ ಮಳಿಗೆಗಳನ್ನಾಗಿ ಪುನರ್‌ ನಿರ್ಮಾಣಗೊಳಿಸಿ, ಚಿಕ್ಕ ಚಿತ್ರಮಂದಿರವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಹೊಂದಲಾಗಿದೆ.

ಚಿತ್ರಮಂದಿರದ ಪಾಲುದಾರರು ಈ ಬಗ್ಗೆ ತಿಳಿಸಿದ್ದು, ಸಿನಿಮಾ ಲೈಸನ್ಸ್‌ ಉಳಿಸಿಕೊಂಡು ಚಿಕ್ಕ ಚಿತ್ರಮಂದಿರವನ್ನಾಗಿ ಉಳಿಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಚಿತ್ರಮಂದಿರ ಬಂದ್‌ಗೆ ಕಾರಣ:

36 ಅಡಿ ಅಗಲ ಹಾಗೂ ಸುಮಾರು 16.5 ಅಡಿ ಅಗಲದ ವಿಸ್ತೀಣದ ಬೆಳ್ಳಿಪರದೆ ಮೇಲೆ ಒಟ್ಟು 465 ಸೀಟುಗಳನ್ನು ಭಾರತ್‌ ಚಿತ್ರಮಂದಿರ ಹೊಂದಿದ್ದು, ಕಟ್ಟಡಕ್ಕೆ 70 ವರ್ಷವಾಗಿವೆ. ಈ ಹಿಂದೆ ಹೊಸ ಚಿತ್ರಗಳು ಪ್ರದರ್ಶನದ ದಿನಗಳಲ್ಲಿ ಇಡೀ ಚಿತ್ರಮಂದಿರ ಚಿತ್ರರಸಿಕರಿಂದ ತುಂಬಿ ಭರ್ತಿಯಾಗಿ ‘ಹೌಸ್‌ ಫುಲ್‌’ ಎಂಬ ಬೋರ್ಡ್‌ ವಾರಗಟ್ಟಲೆ ಹಾಕಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಇವತ್ತು ಎಲ್ಲರ ಮನೆಗಳಲ್ಲಿ ಟಿ.ವಿ.ಗಳು ಇವೆ. ಅತ್ಯಾಧುನಿಕ ಮೊಬೈಲ್‌ಗಳು ಇವೆ. ಚಿತ್ರಮಂದಿರಕ್ಕೆ ಬಂದು ಗಂಟೆಗಟ್ಟಲೆ ಕೂತು ಸಿನಿಮಾ ವೀಕ್ಷಿಸುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ. ಎಷ್ಟೋ ದಿನಗಳು ನಿರೀಕ್ಷಿತ ಕಲೆಕ್ಷನ್‌ (ಟಿಕೆಟ್‌ ಹಣ) ಕೈ ಸೇರದೇ ಸಿನಿಮಾ ಷೋಗಳನ್ನೇ ರದ್ದುಪಡಿಸಿದ ದಿನಗಳು ಕೂಡ ಇವೆ.

ದೇಶಕ್ಕೆ ಸ್ವಾತಂತ್ರ್ಯ ದೊರಕಿದ ವರ್ಷದ ಆಜುಬಾಜಿನಲ್ಲೇ ಅಸ್ವಿತ್ವಕ್ಕೆ ಬಂದ ಭಾರತ್‌ ಚಿತ್ರಮಂದಿರ ಕೀರ್ತಿ ಪಟ್ಟಣ ಮತ್ತು ತಾಲೂಕಿನ ಸಮಸ್ತ ಜನತೆಯ ಜೊತೆ ಜೊತೆಗೆ ಬೆಳೆದುಬಂದಿದೆ. ಅನೇಕರಿಗೆ ಬದುಕು ಕಟ್ಟಿಕೊಟ್ಟಿದೆ. ಒಂದು ಚಿತ್ರಮಂದಿರವಾಗಷ್ಟೇ ಅಲ್ಲದೇ, ತಾಲೂಕಿನ ಜನರ ಸಾರ್ವಜನಿಕರ ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದು, ಆರ್ಥಿಕ ಕ್ಷೇತ್ರದ ವ್ಯಾಪಾರ ವಹಿವಾಟಿನಲ್ಲಿ, ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಆಗುಹೋಗುಗಳಲ್ಲಿ ಇಡೀ ತಾಲೂಕಿಗೇ ಈ ಚಿತ್ರಮಂದಿರದ ಕೊಡುಗೆ ಬಹಳ ಪ್ರಮುಖವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎಲ್ಲರಿಗೂ ಎಟುಕುವ ದರ:  ಬಡವರಿಗೆ, ಕಡುಬಡುವರಿಗೆ, ಮಧ್ಯಮ ವರ್ಗದವರಿಗೆ, ಕೂಲಿ ಕಾರ್ಮಿಕರಿಗೆ, ಅನುಕೂಲಸ್ಥರಿಗೆ, ಸಮಾಜದ ಶ್ರೀಸಾಮಾನ್ಯನ ತನಕ ಮನಸ್ಸಿನ ತುಂಬಾ ಮನರಂಜನೆ ತುಂಬಿ, ಖುಷಿ ಖುಷಿಯಾಗಿಡುತ್ತಿದ್ದ ದಿನಗಳನ್ನು ಚಿತ್ರರಸಿಕರು ಮರೆಯುವಂತಿಲ್ಲ. ನಾಲ್ಕಾಣೆ, ಎಂಟಾಣೆ, ಹನ್ನೆರಡಾಣೆ ಮತ್ತು ಬಾಲ್ಕನಿ ಒಂದೂವರೆ ರೂಪಾಯಿ ಹೀಗೆ ಎಲ್ಲರಿಗೂ ಎಟುಕುವ ಬಹಳ ಸರಳವಾದ ದರಗಳು ನೀಡಿ ಚಿತ್ರಗಳನ್ನು ವೀಕ್ಷಿಸಿದ ಕಾಲಗಳು ತರೀಕೆರೆ ತಾಲೂಕಿನ ಜನರಿಗೆ ಎಂದಿಗೂ ಮರೆಯದ ಸವಿನೆನಪುಗಳಾಗಿವೆ. ಮುಖ್ಯ ಸಿನಿಮಾ ಶುರುವಾಗುವ ಮುನ್ನ ಇಂಡಿಯನ್‌ ನ್ಯೂಸ್‌ ರಿವ್ಯೂ (ಭಾರತೀಯ ಚಿತ್ರ ಸಮಾಚಾರ್‌) ಸ್ಯಾಂಪಲ್‌ ಅನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಕ್ಯೂನಲ್ಲಿ ನಿಂತು ಟಿಕೇಟು ಪಡೆದು ಸಿನಿಮಾಕ್ಕೆ ಹೋಗಿ ಬರುವುದೆಂದರೆ ನಿಜಕ್ಕೂ ಒಂದು ದೊಡ್ಡ ಹಬ್ಬವೇ ಸರಿ ಎನ್ನುವುದು ಈ ಟಾಕೀಸಿನಲ್ಲಿ ಚಿತ್ರ ವೀಕ್ಷಿಸಿದ ರಸಿಕರ ಅಭಿಪ್ರಾಯ.

ಸಾಮಾಜಿಕ ಕಾಳಜಿ:  ‘ಕಿತ್ತೂರು ಚೆನ್ಮಮ್ಮ’, ‘ವೀರಪಾಂಡ್ಯ ಕಟ್ಟಾಬೊಮ್ಮನ್‌’, ‘ಷಹೀದ್‌’, ‘ಸಂಗೊಳ್ಳಿ ರಾಯಣ್ಣ’ನಂತಹ ದೇಶಭಕ್ತಿ ಸಾರುವ ಚಿತ್ರಗಳು, ‘ಬೇಡರ ಕಣ್ಣಪ್ಪ’, ‘ಹರಿಭಕ್ತ’, ‘ಭಕ್ತಕನಕದಾಸ’, ‘ಭಕ್ತಚೇತ’, ‘ಕೈವಾರ ಮಹಾತ್ಮೆ’ಯಂತಹ ಭಕ್ತಿಪ್ರಧಾನ ಚಿತ್ರಗಳು, ‘ರಣಧೀರ ಕಂಠೀರವ’, ‘ಇಮ್ಮಡಿ ಪುಲಿಕೇಶಿ’ಯಂತಹ ಐತಿಹಾಸಿಕ ಚಾರಿತ್ರಿಕ ಚಿತ್ರಗಳು, ‘ಕರುಣೆಯೇ ಕುಟುಂಬದ ಕಣ್ಣು’, ‘ಕೊಂಜುಂ ಸಲಂಗೈ’, ‘ಅಡಿಮೈಪೆಣ್‌’, ‘ಪಣಕ್ಕಾರ ಕುಟುಂಬಂ’, ‘ಪಣಮಾ ಪಾಸಾಮ’, ‘ದೇವದಾಸಿ’ ಮುಂತಾದ ಹೆಸರಾಂತ ಸಾಮಾಜಿಕ ಚಿತ್ರಗಳು, ‘ನಾಗರಹಾವು’, ‘ಭೂದಾನ’, ‘ಸಂಸ್ಕಾರ’, ‘ಜೀವನಚೈತ್ರ’ ದಂತಹ ಸಾಮಾಜಿಕ ಬದಲಾವಣೆ, ಕುಟುಂಬಿಕ ಭಾವನೆಗಳನ್ನು ಬೆಳೆಸುವ ಸಿನಿಮಾಗಳನ್ನು ಭಾರತ್‌ ಚಿತ್ರಮಂದಿರ ಪ್ರದರ್ಶಿಸಿದ ಹೆಗ್ಗಳಿಕೆ ಹೊಂದಿದೆ. ಕಾಲಕಾಲಕ್ಕೆ ತನಗಿರುವ ಸಾಮಾಜಿಕ ಕಾಳಜಿಗೂ ಸಾಕ್ಷಿಯಾಗಿದೆ.

ಈ ಟಾಕೀಸಿನಲ್ಲಿ ಸಿನಿಮಾ ನಡೆಯುತ್ತಿರುವಾಗ ಕಡ್ಲೆಕಾಯಿ ಮಾರುವವರಿಂದ ಹಿಡಿದು, ಮಾರ್ನಿಂಗ್‌, ಮ್ಯಾಟ್ನಿ ಮತ್ತು ಸಂಜೆಯ ಫಸ್ಟ್‌ ಶೋ ಸಿನಿಮಾ ಬಿಡ್ತು ಅಂದರೆ ಟಾಕೀಸಿನ ಆಜೂಬಾಜಿನ ಅಂಗಡಿ ಮುಂಗಟ್ಟು, ಹೋಟೆಲ್‌ಗಳಿಗೆ ಮತ್ತಿತರ ಸಣ್ಣಪುಟ್ಟಅಂಗಡಿಗಳಿಗೆ ವ್ಯಾಪಾರವೋ ವ್ಯಾಪಾರ. ಸಿನಿಮಾ ಆಟ ಮುಗಿದ ಸಮಯದಲ್ಲಿ ತರೀಕೆಗೆ ರಸ್ತೆಯಲ್ಲಿ ಅಪಾರ ಜನಜಂಗುಳಿಯಿಂದ ಟ್ರಾಫಿಕ್‌ ಜಾಂ ಕೂಡ ಆಗುತ್ತಿದ್ದುದು ವಿಶೇಷ.

ಡಾ.ರಾಜ್‌ಕುಮಾರ್‌, ಉದಯಕುಮಾರ್‌, ಜಿ.ವಿ.ಐಯ್ಯರ್‌, ಪಂಡರಿಬಾಯಿ, ಲೀಲಾವತಿ, ಬಾಲಕೃಷ್ಣ, ನರಸಿಂಹರಾಜು, ಕೆ.ಎಸ್‌. ಅಶ್ವತ್‌, ಎಂ.ಪಿ. ಶಂಕರ್‌ ಮುಂತಾದ ಹೆಸರಾಂದ, ಮನೋಜ್ಞ ಕಲಾವಿದರು ಈ ಚಿತ್ರಮಂದಿರಕ್ಕೆ ಭೇಟಿ ನೀಡಿರುವುದು, ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿರುವುದು ಈ ಟಾಕೀಸಿನ ಸೇವೆ ಸಂದ ಫಲವಾಗಿದೆ. ತರೀಕೆರೆ ಪಟ್ಟಣದ ಹೃದಯ ಭಾಗದಲ್ಲಿರುವ ಭಾರತ್‌ ಚಿತ್ರಮಂದಿರ ಚಿತ್ರರಸಿಕರ ಹೃದಯದಲ್ಲೂ ಶಾಶ್ವತ ಸ್ಥಾನ ಪಡೆದಿತ್ತು ಎನ್ನುವುದರಲ್ಲಿ ಎರಡನೆ ಮಾತೇ ಇಲ್ಲ. ಇದರ ಕುರುಹಾಗಿ ಮುಂದಿನ ದಿನಗಳಲ್ಲಿ ಚಿಕ್ಕ ಪ್ರಮಾಣದಲ್ಲಾದರೂ ಚಿತ್ರಮಂದಿರ ಉಳಿದುಕೊಳ್ಳಲಿ ಎಂಬುದು ಸ್ಥಳೀಯ ಚಿತ್ರರಸಿಕರ ಅಭಿಪ್ರಾಯ.

ಜನತೆಗೆ ಮನರಂಜನೆ ಒದಗಿಸುವ ದೃಷ್ಠಿಯಿಂದ 70 ವರ್ಷಗಳ ಹಿಂದೆ ಭಾರತ್‌ ಟಾಕೀಸ್‌ ಅನ್ನು ಪ್ರಾರಂಭಿಸಲಾಗಿತ್ತು. ಇದೀಗ ಕಟ್ಟಡಕ್ಕೂ ಸುದೀರ್ಘ ಸಮಯವಾಗಿದೆ. ಇಡೀ ಕಟ್ಟಡವನ್ನು ವಾಣಿಜ್ಯ ಮಳಿಗೆಯನ್ನಾಗಿ ಪುನರ್‌ ನಿರ್ಮಾಣ ಮಾಡಿ, ಚಿಕ್ಕ ಚಿತ್ರಮಂದಿರವನ್ನಾಗಿಯೂ ಉಳಿಸಿಕೊಳ್ಳಲು ಪ್ರಯತ್ನಿಸಲಾಗುವುದು.

-ಟಿ.ವಿ. ಶಿವಶಂಕರಪ್ಪ, ಪಾಲುದಾರರು, ಭಾರತ್‌ ಟಾಕೀಸ್‌

Latest Videos
Follow Us:
Download App:
  • android
  • ios