Asianet Suvarna News Asianet Suvarna News

ಬಸವನಬಾಗೇವಾಡಿ: ಐಇಎಸ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಗ್ರಾಮೀಣ ಪ್ರತಿಭೆ

ಶಿಕ್ಷಕ ದಂಪತಿ ಸುರೇಶ ಹಾಗೂ ಭಾರತಿ ವಾಲೀಕಾರ ಅವರ ಪುತ್ರಿ ಭಾಗ್ಯಶ್ರೀ| ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದದ ಯುವತಿ| ಐಇಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ 39ನೇ ರ‍್ಯಾಂಕ್ ಪಡೆದ ಭಾಗ್ಯಶ್ರೀ ಸುರೇಶ ವಾಲೀಕಾರ| 

Bhagyashri Suresh Walikar Got 39th Rank in IES Exam grg
Author
Bengaluru, First Published Apr 23, 2021, 8:59 AM IST

ಆಲಮಟ್ಟಿ(ಏ.23): ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಇಂಡಿಯನ್‌ ಎಂಜಿನಿಯರಿಂಗ್‌ ಸರ್ವಿಸ್‌ (ಐಇಎಸ್‌) ಪರೀಕ್ಷೆಯಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಯೊಬ್ಬಳು ಆಯ್ಕೆಯಾಗಿದ್ದಾಳೆ.

ಮೂಲತಃ ಬಸವನಬಾಗೇವಾಡಿ ತಾಲೂಕಿನ ಮುತ್ತಗಿ ಗ್ರಾಮದ, ಆಲಮಟ್ಟಿ ಆರ್‌ಎಸ್‌ ನಿವಾಸಿ ಶಿಕ್ಷಕ ದಂಪತಿ ಸುರೇಶ ವಾಲೀಕಾರ ಹಾಗೂ ಭಾರತಿ ವಾಲೀಕಾರ ಅವರ ಪುತ್ರಿ ಭಾಗ್ಯಶ್ರೀ ಸುರೇಶ ವಾಲೀಕಾರ ಐಇಎಸ್‌ ಪರೀಕ್ಷೆಯಲ್ಲಿ ದೇಶಕ್ಕೆ 39ನೇ ರ‍್ಯಾಂಕ್‌ ಪಡೆದಿದ್ದಾರೆ. ಏಪ್ರಿಲ್‌ 12ರಂದು ಯುಪಿಎಸ್‌ಸಿ ಪ್ರಕಟಿಸಿರುವ ನೇಮಕಾತಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾಗಿರುವ ಭಾಗ್ಯಶ್ರೀ, ಪರೀಕ್ಷೆ ಕಟ್ಟಿದ ಮೊದಲ ಪ್ರಯತ್ನದಲ್ಲಿಯೇ ಪಾಸಾಗಿದ್ದು ವಿಶೇಷ. 1 ರಿಂದ 5ನೇ ತರಗತಿವರೆಗೆ ಇಲ್ಲಿನ ಕನ್ನಡ ಶಾಲೆಯಲ್ಲಿ ಕಲಿತು, 6ರಿಂದ 12ನೇ ತರಗತಿವರೆಗೆ ಆಲಮಟ್ಟಿಯ ಜವಾಹರ ನವೋದಯ ಶಾಲೆಯಲ್ಲಿ ಕಲಿತಿದ್ದಾಳೆ. ಎಸ್‌ಎಸ್‌ಎಲ್‌ಸಿಯಲ್ಲಿ 10ಕ್ಕೆ 10 (ಸಿಜಿಪಿಎ) ಅಂಕ ಪಡೆದು ಶಾಲೆಗೆ ಪ್ರಥಮ, ಪಿಯುಸಿ ದ್ವಿತೀಯ ತರಗತಿಯಲ್ಲಿ ಶೇ. 91 ಅಂಕ ಪಡೆದಿದ್ದಳು.

ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್‌ ಕಾಲೇಜ್‌ನಲ್ಲಿ ಬಿಇ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ ವಿಭಾಗದಲ್ಲಿ ಉನ್ನತ ದರ್ಜೆಯಲ್ಲಿ 2018ರಲ್ಲಿ ಪಾಸಾಗಿ, ಸತತ ಒಂದು ವರ್ಷ ಕಾಲ ಐಇಎಸ್‌ಗಾಗಿ ಸಿದ್ಧತೆ ನಡೆಸಿದ್ದಳು. ಅದಕ್ಕಾಗಿ ಹೈದರಾಬಾದ್‌ನಲ್ಲಿ ತರಬೇತಿ ಕೂಡಾ ಪಡೆದಿದ್ದಾರೆ. ಪ್ರಿಲಿಮ್ಸ್‌, ಮುಖ್ಯ ಪರೀಕ್ಷೆ ಪಾಸಾಗಿ, ನವದೆಹಲಿಯಲ್ಲಿ ಯುಪಿಎಸ್‌ಸಿ ನಡೆಸುವ ಸಂದರ್ಶನದಲ್ಲಿ ಉತ್ತಮ ಅಂಕ ಗಳಿಸಿ ಆಯ್ಕೆಯಾಗಿದ್ದಾಳೆ. ಐಐಟಿಯಲ್ಲಿ ಎಂಟೆಕ್‌ ಪ್ರವೇಶಕ್ಕಾಗಿ ನಡೆಯುವ ಗೇಟ್‌ ಪರೀಕ್ಷೆಯಲ್ಲಿಯೂ ದೇಶಕ್ಕೆ 610ನೇ ರ‍್ಯಾಂಕ್ ಕೂಡಾ ಪಡೆದಿದ್ದಾಳೆ.

ಐಎಎಸ್‌ ಮಾಡುವ ಆಸೆ:

ಐಇಎಸ್‌ಗೆ ನೇಮಕ ಹೊಂದಿ, ಮುಂದೆ ಐಎಎಸ್‌ ಪರೀಕ್ಷೆ ಪಾಸ್‌ ಮಾಡುವ ಕನಸಿದೆ. ಆ ಕನಸಿಗೆ ತಕ್ಕಂತೆ ಅಧ್ಯಯನ ಈಗಿನಿಂದಲೇ ನಡೆಸುತ್ತಿರುವೆ ಎಂದು ಭಾಗ್ಯಶ್ರೀ ಹೇಳಿದರು.

ಶಿಕ್ಷಕ ದಂಪತಿಯ ಪುತ್ರಿ ಭಾಗ್ಯಶ್ರೀಯ ಐಇಎಸ್‌ ಸಾಧನೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು. ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ನೇತೃತ್ವದಲ್ಲಿ ನಿಡಗುಂದಿ ತಾಲೂಕಿನ ಹಲವಾರು ಶಿಕ್ಷಕರು ಸೇರಿ ಸನ್ಮಾನಿಸಿದರು. ಶಿಕ್ಷಕ ಸಂಘಟನೆಯ ಮುಖಂಡರಾದ ಎಂ.ಎಸ್‌. ಮುಕಾರ್ತಿಹಾಳ, ಸಲೀಂ ದಡೆದ, ಎಚ್‌.ಎಚ್‌. ದೊಡಮನಿ, ಆರ್‌.ಎಸ್‌. ಕಮತ, ಎಸ್‌.ಎಸ್‌. ಪಾಟೀಲ, ಎಂ.ಎಂ. ಮುಲ್ಲಾ, ಎಸ್‌.ಎಚ್‌. ದಾಸರ, ಸಿ.ಎಸ್‌. ಭಾವಿಕಟ್ಟಿ, ವಿ.ಎಸ್‌. ಮಂಕಣಿ, ಸುರೇಶ ಹುರಕಡ್ಲಿ, ದಸ್ತಗೀರ್‌ ಸಾಬ್‌ ಬಾಗೇವಾಡಿ ಸೇರಿದಂತೆ ಹಲವರು ಇದ್ದರು.
 

Follow Us:
Download App:
  • android
  • ios