ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಗುಡ್ಡೆಕೊಪ್ಪಲುವಿನಲ್ಲಿ ಸ್ಥಾಪಿಸಿರುವ ಹಡಗು ಕಟ್ಟೆಯಲ್ಲಿ 2019ರಿಂದ ನಿಂತಿರುವ ಹೂಳೆತ್ತುವ ನೌಕೆ ‘ಭಗವತಿ ಪ್ರೇಮ…’ ನ್ನು ಒಡೆಯುವ ಕೆಲಸ ಸದ್ದಿಲ್ಲದ ಆರಂಭವಾಗಿದೆ.

ಮಂಗಳೂರು (ಜ.18) : ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಗುಡ್ಡೆಕೊಪ್ಪಲುವಿನಲ್ಲಿ ಸ್ಥಾಪಿಸಿರುವ ಹಡಗು ಕಟ್ಟೆಯಲ್ಲಿ 2019ರಿಂದ ನಿಂತಿರುವ ಹೂಳೆತ್ತುವ ನೌಕೆ ‘ಭಗವತಿ ಪ್ರೇಮ…’ ನ್ನು ಒಡೆಯುವ ಕೆಲಸ ಸದ್ದಿಲ್ಲದ ಆರಂಭವಾಗಿದೆ.

ಎನ್‌ಎಂಪಿಎಯು(NMPAU) 2019ರಲ್ಲಿ ಇಲ್ಲಿಯ ಹೂಳೆತ್ತುವ ಕಾಮಗಾರಿಯನ್ನು ಮರ್ಕೆಟೆಲ್‌ ಲಿಮಿಟೆಡ್‌(Marketel Limited) (ಎಂಎಲ…) ಸಂಸ್ಥೆಯ ಮಾಲೀಕತ್ವದ ಈ ಹಡಗಿಗೆ ವಹಿಸಿತ್ತು. 2019ರ ಅಕ್ಟೋಬರ್‌ 18ರಂದು ಹಡಗಿನ ಎಂಜಿನ್‌ ರೂಮ್‌ ಒಳಗೆ ಸಮುದ್ರದ ನೀರು ನುಗ್ಗಿದ್ದರಿಂದ ಹಡಗು ನಿಷ್ಕಿ್ರಯವಾಗಿ, ಅದನ್ನು ಅಲ್ಲಿಯೇ ಬಿಟ್ಟು ಹೋಗಲಾಗಿತ್ತು.

ಬಳಿಕ ಹಡಗನ್ನು ಎನ್‌ಎಂಪಿಎಯವರು ಎಳೆದು ಗುಡ್ಡೆ ಕೊಪ್ಪಲ ಬಳಿ ಇರಿಸಿದ್ದರು. ಜತೆಗೆ ಪ್ರಾಧಿಕಾರದ ಜೊತೆಗೆ ಮಾಡಿದ ಒಪ್ಪಂದ ಮುರಿದಿದ್ದಕ್ಕಾಗಿ ಮರ್ಕೆಟೆಲ್‌ ಲಿಮಿಟೆಡ್‌ ಸಂಸ್ಥೆಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿ, 5.55 ಕೋಟಿ ರು. ನೀಡುವಂತೆ ನೋಟಿಸ್‌ ನೀಡಿತ್ತು.

ಸೈಂಟ್ ಮೇರಿಸ್ ದ್ವೀಪ: ಸಿಬ್ಬಂದಿ ಉದ್ಧಟತನ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಎನ್‌ಎಂಪಿಎ ನೀಡಿದ ನೋಟಿಸ್‌ಗೆ ಎಂಎಲ್‌ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ 1908ರ ಭಾರತೀಯ ಬಂದರು ಕಾಯ್ದೆಯ ಸೆಕ್ಷನ್‌ 42ರ ಅಡಿಯಲ್ಲಿ ಭಗವತಿ ಪ್ರೇಮ್‌ ಹಡಗನ್ನು ಒಡೆದು ಗುಜರಿಗೆ ಹಾಕಿ, ಹಣವನ್ನು ವಸೂಲಿ ಮಾಡಲು ನಿರ್ಧರಿಸಿತು. ಮೆಟಲ್‌ ಸ್ಕ್ರಾಪ್‌ ಟ್ರೇಡ್‌ ಕಾರ್ಪೊರೇಷನ್‌ ಲಿ. (ಎಂಎಸ್ಟಿಸಿ) ಸಂಸ್ಥೆಯ ಮೂಲಕ ಹಡಗು ಒಡೆಯುವ ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲಾಗಿತ್ತು.

114 ಮೀಟರ್‌ ಉದ್ದ, 21 ಮೀಟರ್‌ ಅಗಲ ಹಾಗೂ 9,492 ಟನ್‌ ತೂಕದ ಈ ಹಡಗನ್ನು ಒಡೆಯಲು ಮುಂದಾಗುತ್ತಿದ್ದಂತೆಯೇ ಗುಡ್ಡೆಕೊಪ್ಪಲು ಹಾಗೂ ದೊಡ್ಡಕೊಪ್ಪಲು ಭಾಗದ ಮೀನುಗಾರರು ಪ್ರತಿಭಟನೆ ಆರಂಭಿಸಿದರು. ಕಡಲ ಕಿನಾರೆಯಲ್ಲಿ ಹಡಗು ಒಡೆಯುವುದನ್ನು ತೀವ್ರವಾಗಿ ವಿರೋಧಿಸಿದ್ದ ಮೀನುಗಾರರು, ಅಂದಿನ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹಾಗೂ ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿಅವರನ್ನು ಭೇಟಿ ಮಾಡಿ ಮನವಿಯನ್ನೂ ಸಲ್ಲಿಸಿದ್ದರು.

ಈ ಹಡಗನ್ನು ಅಲ್ಲಿ ನಿಲ್ಲಿಸಿದ್ದರಿಂದಲೇ ಅಲ್ಲಿ ಲಭಿಸುವ ಮೀನುಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದೇ ಜಾಗದಲ್ಲಿ ಹಡಗು ಒಡೆಯುವ ಕೆಲಸವನ್ನೂ ಮಾಡಿದರೆ ಇನ್ನಷ್ಟುಜಲಮಾಲಿನ್ಯವಾಗಿ, ಮೀನುಗಳೇ ಲಭಿಸಲಾರವು. ಇದರಿಂದ ನಮ್ಮ ಬದುಕೇ ಕಷ್ಟವಾಗಲಿದೆಎಂದು ಗುಡ್ಡೆಕೊಪ್ಪಲು ಹಾಗೂ ದೊಡ್ಡಕೊಪ್ಪಲು ಭಾಗದ ಸಾಂಪ್ರದಾಯಿಕ ಮೀನುಗಾರರು ವಿರೋಧಿಸಿದ್ದರು.

ಟೆಂಡರ್‌ನಲ್ಲಿ 4.5 ಕೋಟಿ ರು ಬಿಡ್‌ ಮಾಡುವ ಮೂಲಕ ಹಡಗು ಒಡೆಯುವ ಗುತ್ತಿಗೆ ಪಡೆದ ಸೋನಾರ್‌ ಇಂಪೆಕ್ಸ್‌ ಸಂಸ್ಥೆಯ ಅರ್ಜುನ್‌ ಜೆ. ಮೊರೇಸ್‌ ಅವರೊಂದಿಗೆ ಶಾಸಕ ಡಾ.ಭರತ್‌ ಶೆಟ್ಟಿಅವರು 2022ರಲ್ಲಿ ಸ್ಥಳೀಯ ಮೀನುಗಾರರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಎರಡು ಕಂತುಗಳಲ್ಲಿ ಪರಿಹಾರ ನೀಡುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ ಬಳಿಕ ಮೀನುಗಾರರು ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು.

ಕಡಲ ತಡಿಯಲ್ಲಿ ಗಾಂಜಾ ಘಾಟು: ಇದು ಮಂಗಳೂರು 'ಗಾಂಜಾ' ಕೇಸ್'ನ ಕಂಪ್ಲೀಟ್ ಕಹಾನಿ

ಹಡಗಿನಲ್ಲಿದ್ದ 5,000 ಕಿಲೊ ಲೀಟರ್ನಷ್ಟುಫರ್ನೇಸ್‌ ಆಯಿಲ್‌ನ್ನು ಹಿಂದೆಯೇ ಖಾಲಿ ಮಾಡಲಾಗಿತ್ತು. ಹಡಗು ಒಡೆಯುವ ಯೋಜನೆಗೆ ಕರಾವಳಿ ನಿಯಂತ್ರಣ ವಲಯದಿಂದ (ಸಿಆರ್‌ಜೆಡ್‌) ಆರು ತಿಂಗಳ ಹಿಂದೆಯೇ ಅನುಮತಿ ಪಡೆಯಲಾಗಿತ್ತು. ಮೀನುಗಾರರಿಗೆ ಪರಿಹಾರದ ಮೊದಲ ಕಂತು ಪಾವತಿಸಿದ ಬಳಿಕ ಕಾಮಗಾರಿ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.