Asianet Suvarna News Asianet Suvarna News

ಮುಂದುವರಿದ ಮಳೆ: ಭಾಗಮಂಡಲದಲ್ಲಿ ಪ್ರವಾಹ

ಮಡಿಕೇರಿಯಲ್ಲಿ ಮಳೆ ಮುಂದುವರಿದಿದ್ದು, ಭಾಗಮಂಡಲ ಪ್ರದೇಶ ಸೇರಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದ್ದು, ಜಿಲ್ಲೆಯಾದ್ಯಂತ ಬೆಳಗಿನವರೆಗೆ ಧಾರಾಕಾರ ಮಳೆಯಾಗಿದೆ. ಭಾಗಮಂಡಲ ಸಮೀಪದ ಬ್ರಹ್ಮಗಿರಿ ಸುತ್ತಮುತ್ತ ಭಾನುವಾರ ರಾತ್ರಿ ಧಾರಾಕಾರ ಮಳೆಯಾದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದೆ.

 

bhagamandala flood due heavy rain lashes in kodagu
Author
Bangalore, First Published Sep 10, 2019, 2:09 PM IST

ಮಡಿಕೇರಿ(ಸೆ.10): ಕೊಡಗು ಜಿಲ್ಲೆಯಲ್ಲಿ ಸೋಮವಾರವೂ ಮಳೆ ಮುಂದುವರಿದಿದ್ದು, ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವೆಡೆ ಬಿಡುವು ನೀಡಿ ಮಳೆ ಸುರಿಯಿತು.

ಭಾನುವಾರ ರಾತ್ರಿ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದ್ದು, ಜಿಲ್ಲೆಯಾದ್ಯಂತ ಬೆಳಗಿನವರೆಗೆ ಧಾರಾಕಾರ ಮಳೆಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ 48.22 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ. ಮಡಿಕೇರಿ ತಾಲೂಕಿನಲ್ಲಿ 66.05 ಮಿ.ಮೀ. ಸರಾಸರಿ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ 46.28 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 32.33 ಮಿ.ಮೀ. ಸರಾಸರಿ ಮಳೆಯಾಗಿದೆ.

ತ್ರಿವೇಣಿ ಸಂಗಮ ಜಲಾವೃತ:

ಭಾಗಮಂಡಲ ಸಮೀಪದ ಬ್ರಹ್ಮಗಿರಿ ಸುತ್ತಮುತ್ತ ಭಾನುವಾರ ರಾತ್ರಿ ಧಾರಾಕಾರ ಮಳೆಯಾದ ಪರಿಣಾಮ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತವಾಗಿದ್ದು, ನಾಪೋಕ್ಲು-ಭಾಗಮಂಡಲ, ತಲಕಾವೇರಿ-ಭಾಗಮಂಡಲ ರಸ್ತೆ ಸಂಪರ್ಕ ಬೆಳಗಿನ ವೇಳೆಗೆ ಕಡಿತಗೊಂಡಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಜಿಲ್ಲಾಡಳಿತ ಸ್ಥಳೀಯರ ಸಂಚಾರಕ್ಕೆ ಬೋಟ್‌ ವ್ಯವಸ್ಥೆ ಕಲ್ಪಿಸಿತ್ತು. ಸ್ಥಳದಲ್ಲಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೀಡುಬಿಟ್ಟಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸುತ್ತಿದ್ದಾರೆ.

ಬಂಡೆ ಕಲ್ಲು ಕುಸಿತ:

ನಾಪೋಕ್ಲು, ಸಂಪಾಜೆ ವ್ಯಾಪ್ತಿಯಲ್ಲಿ 90 ಮಿ.ಮೀ.ಗೂ ಅಧಿಕ ಮಳೆಯಾಗಿದೆ. ಭಾರಿ ಮಳೆಗೆ ಪೆರಾಜೆಯ ಬಳಿ ಬಂಡೆ ಕಲ್ಲುಗಳು ಬೆಟ್ಟದಿಂದ ಉರುಳಿ ಬರುತ್ತಿದ್ದು, ಗ್ರಾಮಸ್ಥರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಜಿಲ್ಲೆಯ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಜನರು ಆತಂಕದಲ್ಲಿ ದಿನಕಳೆಯುವಂತಾಗಿದೆ.

6 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌ : ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ

ದಕ್ಷಿಣ ಕೊಡಗಿನ ಶ್ರೀಮಂಗಲ, ಪೊನ್ನಂಪೇಟೆ ವ್ಯಾಪ್ತಿಯಲ್ಲಿ ನಿರಂತರವಾಗಿ ವರುಣ ಅಬ್ಬರಿಸುತ್ತಿದ್ದು, ಲಕ್ಷ್ಮಣತೀರ್ಥ ನದಿ ಅಪಾಯ ಮಟ್ಟಮೀರಿ ಹರಿಯುತ್ತಿದೆ. ಈಗಾಗಲೇ ಬಲ್ಯಮಂಡೂರು, ಕಾನೂರು ಮತ್ತಿತರ ಕಡೆಗಳಲ್ಲಿ ನದಿಪಾತ್ರದ ಗದ್ದೆಗಳು ಜಲಾವೃತವಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಒಳಹರಿವು ಹೆಚ್ಚಳ:

ಹಾರಂಗಿ ಜಲಾಶಯಕ್ಕೆ ಒಳಹರಿವು ಕೂಡ ಹೆಚ್ಚಾಗಿದೆ. ಸುಮಾರು 8 ಸಾವಿರ ಕ್ಯೂಸೆಕ್‌ನಷ್ಟುನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು, ಸುಮಾರು 6,000 ಕ್ಯೂಸೆಕ್‌ನಷ್ಟುನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ. ಪರಿಸ್ಥಿತಿಗೆ ಅನುಗುಣವಾಗಿ ಹೊರಹರಿವನ್ನು ನಿಯಂತ್ರಿಸಲಾಗುತ್ತಿದೆ.

ಇಂದಿನಿಂದ ಮಳೆ ಕಡಿಮೆ:

ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನತೆ ತತ್ತರಿಸಿಹೋಗಿದ್ದಾರೆ. ಕಡೆಗೂ ಮಳೆ ಕಡಿಮೆಯಾಗುವ ಲಕ್ಷಣ ಕಂಡು ಬಂದಿದ್ದು, ಮಂಗಳವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆ ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

Follow Us:
Download App:
  • android
  • ios