ಭದ್ರಾವತಿ ಕಾಗದ ಕಾರ್ಖಾನೆ ಶಾಶ್ವತವಾಗಿ ಬಂದ್!
- ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಭದ್ರಾವತಿ ಕಾಗದ ಕಾರ್ಖಾನೆ ಬಂದ್
- ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಬ್ರಾಂಡ್ ಆಗಿ ಗುರುತಿಸಿಕೊಂಡಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆ
ಭದ್ರಾವತಿ(ಅ.12): ಒಂದು ಕಾಲದಲ್ಲಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ದೇಶೀಯ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲೂ ಬ್ರಾಂಡ್ ಆಗಿ ಗುರುತಿಸಿಕೊಂಡಿದ್ದ ರಾಜ್ಯ ಸರ್ಕಾರಿ ಸ್ವಾಮ್ಯದ ಪ್ರತಿಷ್ಠಿತ ಮೈಸೂರು ಕಾಗದ ಕಾರ್ಖಾನೆ(mpm) ಇದೀಗ ಇತಿಹಾಸದ ಗರ್ಭದೊಳಗೆ ಮುಚ್ಚಿ ಹೋಗಿದೆ.
10 ಜೂನ್ 2019ರಂದು ಕಾರ್ಖಾನೆ ಆಡಳಿತ ಮಂಡಳಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ಅಂತಿಮ ಆದೇಶವನ್ನು ಕಾರ್ಮಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಜಿ.ಕಲ್ಪನಾ ಅ.7ರಂದು ಹೊರಡಿಸಿದ್ದಾರೆ.
ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಎದುರುದಾರರಾದ ದಿ ಮೈಸೂರು ಪೇಪರ್ ಮಿಲ್ಸ್ (MPM) ಎಂಪ್ಲಾಯೀಸ್ ಅಸೋಸಿಯೇಷನ್ ಮತ್ತು ಶ್ರೀ ಮೈಸೂರು ಕಾಗದ ಕಾರ್ಖಾನೆ ನೌಕರರ ಸಂಘ ಇವುಗಳು ಸಲ್ಲಿಸಿದ್ದ ಅರ್ಜಿಗಳನ್ನು ರಾಜ್ಯ ಹೈಕೋರ್ಟಿನ (High Court) ತೀರ್ಪಿನ ಆದೇಶದಂತೆ ಸುದೀರ್ಘ ವಿಚಾರಣೆ ನಡೆಸಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು 13 ಪುಟಗಳ ಅಂತಿಮ ಆದೇಶ ಹೊರಡಿಸಿದ್ದಾರೆ.
ಮೈಸೂರು (Mysuru) ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಮತ್ತು ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಪರಿಶ್ರಮದ ಫಲವಾಗಿ ಆರಂಭಗೊಂಡ ಕಾರ್ಖಾನೆಯನ್ನು ಕೊನೆಗೂ ಉಳಿಸಿಕೊಳ್ಳಲಾಗದಿರುವುದು ಕ್ಷೇತ್ರದ ಕಾರ್ಮಿಕರು,ನಾಗರಿಕರಲ್ಲಿ ನೋವುಂಟು ಮಾಡಿದೆ.
ಕಾಯಕಲ್ಪದ ಯೋಚನೆ ಮಾಡಿದ್ದರು ಬಿಎಸ್‌ವೈ
ಜಿಲ್ಲೆಯ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾಗಿದ್ದ ಭದ್ರಾವತಿ ನಗರದ ಮೈಸೂರು ಕಾಗದ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯ ಸಭೆಯಲ್ಲಿ ಶನಿವಾರ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.
ಈ ಸಂಬಂಧ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಅರಣ್ಯ ಮತ್ತು ಕೈಗಾರಿಕಾ ಇಲಾಖೆ ಸೇರಿದಂತೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸ್ಥಗಿತಗೊಂಡಿದ್ದ ಎಂಪಿಎಂ ಕಾಗದ ಕಾರ್ಖಾನೆಯನ್ನು ಪುನರಾರಂಭಿಸಲು ರೂಪುರೇಷೆಗಳನ್ನು ಸಿದ್ಧಪಡಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಇರುವ ಅರಣ್ಯ ಸಂಪತ್ತನ್ನು ಬಳಸಿಕೊಂಡು ಕಾರ್ಖಾನೆಯನ್ನು ಸುಸ್ಥಿತಿಯಲ್ಲಿ ಮುಂದುವರೆಸಿಕೊಂಡು ಹೋಗುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಮಹತ್ವದ ನಿರ್ಣಯದಿಂದಾಗಿ ಜಿಲ್ಲೆಯ ಜನರಲ್ಲಿ ಹರ್ಷೋತ್ಸಾಹ ಮೂಡಿದೆ. ಇತ್ತೀಚಿನ ಕೆಲವು ವರ್ಷಗಳಿಂದ ಹಲವು ಸಮಸ್ಯೆಗಳಿಂದ ರೋಗಗ್ರಸ್ಥವಾಗಿದ್ದ ಕಾರ್ಖಾನೆಯ ಸ್ಥಗಿತಗೊಂಡಿದ್ದರಿಂದ ಸಹಸ್ರಾರು ನೌಕರರ ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಅಸಂಖ್ಯಾತ ನೌಕರರು ಕುಟುಂಬದ ನಿರ್ವಹಣೆಗಾಗಿ ಉದ್ಯೋಗ ಅರಸಿ ಪಟ್ಟಣ ತೊರೆದಿದ್ದರು. ಮತ್ತೆ ಕೆಲವರು ಸರ್ಕಾರ ವಿವಿಧ ಇಲಾಖೆಗಳಲ್ಲಿ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಖಾನೆಯ ಯಂತ್ರಗಳು ತುಕ್ಕು ಹಿಡಿಯುವಂತಾಗಿತ್ತು. ಈ ಕಾರ್ಖಾನೆಯನ್ನು ಪುನರಾರಂಭಿಸುವ ಸಂಬಂಧ ಸಂಸದ ಬಿ.ವೈ.ರಾಘವೇಂದ್ರ ಮುಖ್ಯಮಂತ್ರಿಗಳ ಗಮನಸೆಳೆದು ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.