ಅಕೇಶಿಯಾ ನೆಡುತೋಪಿನ ಕತೆ ಏನು?

ಎಂಪಿಎಂ ಕಾರ್ಖಾನೆಗೆ ನೀಡಿದ ಈ ಅರಣ್ಯದ ಗುತ್ತಿಗೆ ಅವಧಿ ಇನ್ನೆರಡು ತಿಂಗಳಿಗೆ ಮುಕ್ತಾಯವಾಗಲಿದೆ. ಎಲ್ಲಾ ಒತ್ತುವರಿ ಸೇರಿ ಅಂತಿಮವಾಗಿ ಸುಮಾರು 22 ಸಾವಿರ ಹೆಕ್ಟೇರ್ ನೆಡುತೋಪು ಉಳಿದುಕೊಂಡಿದೆ. ಈ ಅರಣ್ಯ ಭೂಮಿಯ ಕತೆಯೇನು ಎಂಬ ಪ್ರಶ್ನೆ ಈಗ ಎದುರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

A Special story on Akeshiya tree future in Karnataka

ಗೋಪಾಲ್‌ ಯಡಗೆರೆ, ಕನ್ನಡಪ್ರಭ

ಶಿವಮೊಗ್ಗ(ಜೂ.01): ಇತ್ತ ಭದ್ರಾವತಿಯ ಪ್ರತಿಷ್ಟಿತ ಎಂಪಿಎಂ ಕಾರ್ಖಾನೆ ಖಾಸಗಿಕರಣಗೊಳ್ಳುವುದು ಬಹುತೇಕ ಖಚಿತವಾಗುತ್ತಿದ್ದಂತೆ, ಈ ಕಾರ್ಖಾನೆಗೆಂದು ಈ ಹಿಂದೆ ಸರ್ಕಾರ ನೀಡಿದ್ದ ಸುಮಾರು 36 ಸಾವಿರ ಹೆಕ್ಟೇರ್‌ ಪ್ರದೇಶದ ಗುತ್ತಿಗೆ ಅರಣ್ಯ ಭೂಮಿಯ ಕತೆಯೇನು ಎಂಬ ಪ್ರಶ್ನೆ ಈಗ ಎದುರಾಗಿದೆ.

ವಾಸ್ತವವಾಗಿ ಎಂಪಿಎಂ ಕಾರ್ಖಾನೆಗೆ ನೀಡಿದ ಈ ಅರಣ್ಯದ ಗುತ್ತಿಗೆ ಅವಧಿ ಇನ್ನೆರಡು ತಿಂಗಳಿಗೆ ಪೂರ್ಣಗೊಳ್ಳಲಿದೆ. ಇದನ್ನು ಸರ್ಕಾರ ಕಾರ್ಖಾನೆಯ ಜೊತೆಗೆ ಖಾಸಗಿಯವರಿಗೆ ಹಸ್ತಾಂತರಿಸುತ್ತದೆಯೋ ಅಥವಾ ಅರಣ್ಯ ಇಲಾಖೆ ಸುಪರ್ದಿಗೆ ಒಪ್ಪಿಸುತ್ತದೆಯೋ ಎಂಬ ಪ್ರಶ್ನೆ ಎದುರಿಗಿದೆ. ಇಲ್ಲಿಯೂ ಅಭಿವೃದ್ಧಿ ಮತ್ತು ಪರಿಸರದ ನಡುವಿನ ಹೋರಾಟಕ್ಕೆ ಈ ಗುತ್ತಿಗೆ ನವೀಕರಣದ ವಿಷಯ ಕಾರಣವಾಗಲಿದೆ.

30 ಸಾವಿರ ಹೆಕ್ಟೇರ್‌ ಅರಣ್ಯ ಭೂಮಿ:

ಎಂಪಿಎಂ ಕಾರ್ಖಾನೆ ಆರಂಭವಾದ ಬಳಿಕ 1976 ರಲ್ಲಿ ಇದಕ್ಕೆ ಬೇಕಾದ ಕಚ್ಚಾ ವಸ್ತುವಿಗಾಗಿ ಆಗಿನ ಸರ್ಕಾರ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ ಭೂಮಿಯನ್ನು ಲೀಸ್‌ ಆಧಾರದ ಮೇಲೆ ಕಾರ್ಖಾನೆಗೆ ನೀಡಿತು. ಇಲ್ಲಿ ಅಕೇಶಿಯಾ ಬೆಳೆದು ಅದರ ತಿರುಳನ್ನು ಕಾಗದ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುವಾಗಿ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು. 1980ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಅರಣ್ಯ ಸಂರಕ್ಷಣಾ ಕಾಯಿದೆಯಿಂದಾಗಿ ಎಎಂಪಿ ತನ್ನ ವಶದಲ್ಲಿದ್ದ ಸುಮಾರು 3200 ಹೆ. ಅರಣ್ಯ ಪ್ರದೇಶವನ್ನು ಮರಳಿ ಅರಣ್ಯ ಇಲಾಖೆಗೆ ವಾಪಸ್ಸು ನೀಡಿತು. ಇದರ ನಡುವೆ ನಡೆದ ಒತ್ತುವರಿ ಎಲ್ಲ ಕಳೆದು ಅಂತಿಮವಾಗಿ ಸುಮಾರು 22 ಸಾವಿರ ಹೆ. ನೆಡುತೋಪು ಉಳಿದುಕೊಂಡಿದೆ.

ಇದೀಗ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಲು ತೆರೆಮರೆಯ ಯತ್ನ ನಡೆದಿದ್ದು, ಇದರ ಬೆನ್ನಲ್ಲೇ ಈ ನೆಡುತೋಪಿನ ಕತೆಯೇನು ಎಂಬ ಪ್ರಶ್ನೆ ಎದುರಾಗಿದೆ. ಇಷ್ಟೊಂದು ಭೂಮಿಯನ್ನು ಖಾಸಗಿಯವರಿಗೆ ಲೀಸ್‌ಗೆ ಕೊಡಲು ಮತ್ತು ಅಲ್ಲಿ ಅಕೇಶಿಯಾ ಬೆಳೆಸಲು ಪರಿಸರ ಹೋರಾಟಗಾರರು ಒಪ್ಪುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಅಕೇಶಿಯಾ ಬೆಳೆಯೇ ನಿಷೇಧಿಸಲ್ಪಟ್ಟಿದೆ. ಹೀಗಿರುವಾಗ ಮುಂದೇನು ಎಂಬ ಪ್ರಶ್ನೆ ಸಹಜವಾಗಿಯೇ ಎದ್ದಿದೆ. ಈ ನಡುವೆ ಈ ನೆಡುತೋಪಿನಲ್ಲಿ ಇರುವ ಅಕೇಶಿಯಾ, ಅದರ ಮೌಲ್ಯ, ಸದ್ಯದ ಪರಿಸ್ಥಿತಿ ಇತ್ಯಾದಿ ಕುರಿತು ಅರಣ್ಯ ಇಲಾಖೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವರದಿಯೊಂದನ್ನು ನೀಡಿದೆ.

ಕೋಟ್ಯಂತರ ರುಪಾಯಿ ಮೌಲ್ಯದ ಅಕೇಶಿಯಾ:

ಸದ್ಯ ನೆಡುತೋಪಿನಲ್ಲಿ ಕೋಟ್ಯಂತರ ರು. ಮೌಲ್ಯದ ಅಕೇಶಿಯಾ ಕಟಾವಿಗೆ ಸಿದ್ಧವಾಗಿದೆ. ಒಂದು ಅಂದಾಜಿನ ಪ್ರಕಾರ ಇದರ ಮೌಲ್ಯ ಸುಮಾರು 300 ಕೋಟಿ ಎನ್ನಲಾಗಿದೆ. ಇದನ್ನು ಇಲಾಖೆ ಕಟಾವ್‌ ಮಾಡಿ ತನ್ನ ಖಾತೆಗೆ ಹಣ ಜಮಾ ಮಾಡಿಕೊಳ್ಳುತ್ತದೆಯೋ ಅಥವಾ ಕಾರ್ಖಾನೆಯನ್ನು ಪಡೆದ ಖಾಸಗಿ ಕಂಪನಿ ಕಟಾವ್‌ ಮಾಡುವ ಹಕ್ಕನ್ನು ತನ್ನದಾಗಿಸಿ ಕೊಳ್ಳುತ್ತದೆಯೋ ಗೊತ್ತಿಲ್ಲ.

2020ರ ಆಗಸ್ಟ್‌ಗೆ ಲೀಸ್‌ ಅವಧಿ ಮುಗಿಯಲಿದ್ದು, ಇದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಅಲ್ಲಿ ಸಹಜ ಅರಣ್ಯ ಬೆಳವಣಿಗೆಗೆ ಅವಕಾಶ ಮಾಡಿಕೊಡುವಂತೆ ಹೋರಾಟವೊಂದನ್ನು ರೂಪಿಸಲು ಕೆಲ ಪರಿಸರ ಹೋರಾಟಗಾರರು ಈಗಾಗಲೇ ವೇದಿಕೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಸದ್ಯ ಸರ್ಕಾರ ಕೂಡಾ ಇದನ್ನು ಅರಣ್ಯ ಇಲಾಖೆಗೆ ವಹಿಸಲು ಮನಸ್ಸು ಮಾಡಿದೆ ಎಂಬ ವರದಿ ಬಂದಿದೆ. ಒಟ್ಟಾರೆ ಮಲೆನಾಡಿನ ಪರಿಸರ, ಜೀವ ವೈವಿದ್ಯತೆಯ ಮೇಲೆ ಗಾಢ ಪರಿಣಾಮ ಬೀರಿದ ಎಂಪಿಎಂ ಅಕೇಶಿಯಾ ತೋಪು ಕೊನೆಗೂ ದಟ್ಟಾರಣ್ಯವಾಗಿ ಪರಿವರ್ತನೆಯಾದೀತೆ ಎಂದು ಕಾದು ನೋಡಬೇಕಾಗಿದೆ.

ಎಂಪಿಎಂಗೆ ಅಕೇಶಿಯಾ ನೆಡುತೋಪುಗಳೇ ಜೀವಾಳ

ದಶಕಗಳಲ್ಲಿ ಅಕೇಶಿಯಾದಿಂದ ಪರಿಸರದ ಮೇಲೆ ಆಗುತ್ತಿದ್ದ ಪರಿಣಾಮ ಕಂಡು ಪರಿಸರವಾದಿಗಳು ತಮ್ಮ ತಕರಾರು ಆರಂಭಿಸಿದರು. ಅಕೇಶಿಯಾ ವಿರುದ್ಧ ಹೋರಾಟ ರೂಪಿಸಿದರು. ಅತ್ತ ಹೋರಾಟ ನಡೆಯುತ್ತಿದ್ದರೂ, ಇತ್ತ ಎಂಪಿಎಂ ಆಡಳಿತ ಮಂಡಳಿ ಸಹಜ ಅರಣ್ಯವನ್ನು ಬರಿದು ಮಾಡಿ, ಬೋಳು ಗುಡ್ಡಗಳ ಮೇಲೆಲ್ಲ ಅಕೇಶಿಯಾ ನೆಡುತ್ತಲೇ ಹೋಯಿತು. ಹಕ್ಕಿಯೂ ಕೂರದ, ತನ್ನ ನೆರಳಲ್ಲಿ ಇತರೆ ಸಸ್ಯಗಳಿಗೂ ಅವಕಾಶ ಮಾಡಿಕೊಡದ, ಬಂಜರು ಭೂಮಿಯನ್ನು ಸೃಷ್ಟಿಸುವ ಈ ಅಕೇಶಿಯಾ ವಿರುದ್ಧ ಹೋರಾಟ ಹೆಚ್ಚಾದಂತೆ ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯ ಸರ್ಕಾರ ಅಕೇಶಿಯಾ ಬೆಳೆಯನ್ನೇ ನಿಷೇಧಿಸಿತು. ಹೊಸದಾಗಿ ಅಕೇಶಿಯಾ ನೆಡಲು ಅವಕಾಶ ನಿರಾಕರಿಸಿತು. ಇತ್ತ ಎಂಪಿಎಂ ಕಾರ್ಖಾನೆ ಮುಚ್ಚುವತ್ತ ಸಾಗಿದ್ದರಿಂದ ಈ ನೆಡುತೋಪುಗಳು ಕಂಡವರ ಪಾಲಾಗತೊಡಗಿತು. ಇಲ್ಲಿಂದ ಲಕ್ಷಾಂತರ ರು. ಮೌಲ್ಯದ ಅಕೇಶಿಯಾ ರಾತ್ರೋರಾತ್ರಿ ಕಟಾವ್‌ ಆಯಿತು. ಕಾರ್ಖಾನೆಯೇ ಮುಳುಗುತ್ತಿರುವ ಹೊತ್ತಿನಲ್ಲಿ ಈ ನೆಡುತೋಪಿನ ಕುರಿತು ಯಾರಿಗೂ ಆಸಕ್ತಿ ಉಳಿದಿರಲಿಲ್ಲ.
 

Latest Videos
Follow Us:
Download App:
  • android
  • ios