ಬೆಂಗಳೂರು, [ಆ.28]: ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ರಾಜ್ಯದ ಕೆಲ ಇಲಾಖೆಗೆ ಮೇಜರ್ ಸರ್ಜರಿ ಮಾಡಿದೆ. ಇದಕ್ಕೆ ಪೂರಕವೆಂಬಂತೆ 2016ರಿಂದ ಬೃಹತ್ ನಗರ ಪಾಲಿಕೆ [BBMP] ಆಯುಕ್ತರಾಗಿದ್ದ ಎಂ ಮಂಜುನಾಥ್ ಪ್ರಸಾದ್ ಪ್ರಸಾದ್ ಅವರನ್ನು ಎತ್ತಂಗಡಿ ಮಾಡಿ ಹೊಸ ಆಯುಕ್ತರನ್ನು ನೇಮಿಸಿದೆ.

ಬಿಬಿಎಂಪಿ ನೂತನ ಆಯುಕ್ತರಾಗಿ ಬಿ ಎಚ್ ಅನಿಲ್ ಕುಮಾರ್ ಇಂದು [ಬುಧವಾರ] ಅಧಿಕಾರ ಸ್ವೀಕರಿಸಿದರು. ಬಿಬಿಎಂಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಆಯುಕ್ತ ಎಂ ಮಂಜುನಾಥ್ ಪ್ರಸಾದ್, ಬೆಳ್ಳಿ‌ ಬ್ಯಾಟನ್ ನೀಡುವ ಮೂಲಕ ಅನಿಲ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಮಂಜುನಾಥ್ ಪ್ರಸಾದ್ ಅವರನ್ನು ನಾಲ್ಕು ದಿನಗಳ ಹಿಂದೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಇನ್ನು ಆಯುಕ್ತರ ಹುದ್ದೆಗೆ ಅನಿಲ್ ಕುಮಾರ್ ಅವರನ್ನು ಈ ಹುದ್ದೆಗೆ ನಿಯೋಜಿಸಿತ್ತು. 

ಅನಿಲ್ ಕುಮಾರ್ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದರು. 2016ರಲ್ಲಿ ಬಿಬಿಎಂಪಿ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರನ್ನು ಈಗ ವರ್ಗಾವಣೆ ಮಾಡಿದ್ದರೂ, ಇದುವರೆಗೆ ಯಾವುದೇ ಹುದ್ದೆ ತೋರಿಸಿಲ್ಲ.