ಬೆಂಗಳೂರಿನಲ್ಲಿ ಪ್ರೇಮ ವಿವಾಹದ ವೈಮನಸ್ಸಿನಿಂದ ಉಂಟಾದ ಜಗಳದಲ್ಲಿ ಯುವಕನೊಬ್ಬ ರೈಲಿಗೆ ಬಲಿಯಾದ ಘಟನೆ ನಡೆದಿದೆ. ಸ್ನೇಹಿತನ ಗೆಳತಿಯೊಂದಿಗೆ ಮಾತನಾಡುತ್ತಿದ್ದಕ್ಕೆ ಆರಂಭವಾದ ಗಲಾಟೆ ದುರಂತ ಅಂತ್ಯ ಕಂಡಿದೆ.  ಈ ಘಟನೆಯಲ್ಲಿ ಯುವಕನನ್ನು ರೈಲಿಗೆ ತಳ್ಳಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಬೆಂಗಳೂರು: ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನೆಕ್ಕುಂದಿ ರೈಲ್ವೆ ಟ್ರ್ಯಾಕ್ ಬಳಿ ಪ್ರೇಮ ವಿವಾಹದಿಂದ ಉಂಟಾದ ವೈಮನಸ್ಸು ಕೊಲೆಗೆ ದಾರಿ ಮಾಡಿಕೊಟ್ಟ ಘಟನೆ ನಡೆದಿದೆ. ಈ ಘಟನೆದಲ್ಲಿ ಬಿಜಾಪುರ ಮೂಲದ ಇಸ್ಮಾಯಿಲ್ (26) ಎಂಬ ಯುವಕ ಕೊಲೆಯಾದರೆ, ಆರೋಪಿ ಚಿತ್ರದುರ್ಗ ಮೂಲದ ಪ್ರತಾಪ ಎಂದು ಗುರುತಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಇಸ್ಮಾಯಿಲ್ ಹಾಗೂ ಪ್ರತಾಪ ಇಬ್ಬರೂ ಪುನೀತ ಎಂಬ ಸ್ನೇಹಿತನ ಜೊತೆ ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಪುನೀತ, ಬಿಜಾಪುರದಿಂದ ತನ್ನ ಸ್ನೇಹಿತ ಇಸ್ಮಾಯಿಲ್‌ನ್ನು ಬೆಂಗಳೂರಿಗೆ ಕರೆತಂದಿದ್ದನು. ಇಸ್ಮಾಯಿಲ್ ದಿನಗೂಲಿ ಬದುಕು ಸಾಗಿಸಲು ಆಟೋ ರಿಕ್ಷಾ ಓಡಿಸುತ್ತಿದ್ದನು.

ಈ ವೇಳೆಯಲ್ಲಿ ಪುನೀತನ ಗೆಳತಿಯೊಂದಿಗೆ ಇಸ್ಮಾಯಿಲ್ ಪದೇ ಪದೇ ಮೊಬೈಲ್‌ ಮೂಲಕ ಮಾತನಾಡುತ್ತಿದ್ದ. ಇದರಿಂದ ಪ್ರತಾಪನಿಗೆ ತೀವ್ರ ಕೋಪ ಬಂದು, “ನನ್ನ ಸ್ನೇಹಿತನ ಲವ್ವರ್ ಜೊತೆಗೆ ಯಾಕೆ ಮಾತನಾಡ್ತೀಯ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದ. ಈ ವಿಚಾರಕ್ಕೆ ರೂಮಿನಲ್ಲೇ ವಾಗ್ವಾದ ಮತ್ತು ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲೇ ಇಸ್ಮಾಯಿಲ್, “ನಿನ್ನನ್ನ ಮುಗಿಸಿಬಿಡ್ತೀನಿ” ಎಂದು ಪ್ರತಾಪನಿಗೆ ಬೆದರಿಕೆ ಹಾಕಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

ಮೊನ್ನೆ ತಡರಾತ್ರಿ ಪುನೀತ ಹಾಗೂ ಪ್ರತಾಪ ದೊಡ್ಡನೆಕ್ಕುಂದಿ ರೈಲ್ವೆ ಟ್ರ್ಯಾಕ್ ಬಳಿ ಕುಡೀತಾ ಕೂತಿದ್ದರು. ಈ ವೇಳೆ ಅಲ್ಲಿಗೆ ಇಸ್ಮಾಯಿಲ್ ಬಂದು ಪ್ರತಾಪನೊಂದಿಗೆ ಮತ್ತೆ ಗಲಾಟೆ ಆರಂಭಿಸಿದ. ರೈಲು ಬರುತ್ತಿದ್ದ ಹೊತ್ತಿಗೆ ಇಸ್ಮಾಯಿಲ್ ಪ್ರತಾಪನನ್ನು ರೈಲಿನತ್ತ ತಳ್ಳಲು ಮುಂದಾಗಿದ್ದಾನೆ. ಆದರೆ ಪ್ರತಾಪ ತಪ್ಪಿಸಿಕೊಂಡು ಬಿಟ್ಟಿದ್ದರಿಂದ, ಆ ವೇಳೆ ರೈಲು ಇಸ್ಮಾಯಿಲ್‌ಗೆ ಡಿಕ್ಕಿ ಹೊಡೆದು ಅವನು ತಕ್ಷಣವೇ ಮೃತಪಟ್ಟನು.

ಘಟನೆಯ ನಂತರ ಪ್ರತಾಪ, ಶವವನ್ನು ರೈಲ್ವೆ ಟ್ರ್ಯಾಕ್ ಮೇಲೆ ಎಸೆದು, “ರೀಲ್‌ ಮಾಡೋಕೆ ಹೋಗಿ ಅವನು ಮೃತಪಟ್ಟ” ಎಂಬ ಸುಳ್ಳು ಕಥೆ ಸಿದ್ಧಪಡಿಸಿದ್ದ. ಆದರೆ ರೈಲ್ವೆ ಪೊಲೀಸರು ಶಂಕೆಗೊಂಡು ವಿಚಾರಣೆ ನಡೆಸಿ, ಕೊನೆಗೆ ನಿಜಾಂಶವನ್ನು ಪತ್ತೆಹಚ್ಚಿದ್ದಾರೆ. ಈ ಘಟನೆಯ ಸಂಬಂಧ ಆರೋಪಿಗಳಾದ ಪ್ರತಾಪ ಮತ್ತು ಪುನೀತನನ್ನು ರೈಲ್ವೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣವನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆಯವರು ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಬೈಯಪ್ಪನಹಳ್ಳಿ ರೈಲ್ವೇ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ರೈಲ್ವೆ ಎಸ್ಪಿ ಯತೀಶ್ ಹೇಳಿಕೆ ನೀಡಿ ನಿನ್ನೆ ಬೈಯಪ್ಪನಹಳ್ಳಿ ರಾಣಾ ಠಾಣಾ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿದೆ. ದೊಡ್ಡನೆಕುಂದಿ ರೈಲ್ವೇ ಟ್ರ್ಯಾಕ್ ಬಳಿ ಕೊಲೆ ಬಗ್ಗೆ ಮಾಹಿತಿ ಇತ್ತು. ಇಸ್ಮಾಯಿಲ್ ಎಂಬ ಗೂಡ್ಸ್ ವಾಹನ ಚಾಲಕನ ಕೊಲೆ ಆಗಿತ್ತು. ವಿಜಯಪುರ ಮೂಲದ ಈತ ಸ್ನೇಹಿತರ ಜೊತೆ ಪಿಜಿಯಲ್ಲಿ ವಾಸ ಇರ್ತಾನೆ. ಪಿಜಿಯಲ್ಲಿ ತನ್ನ ಸ್ನೇಹಿತರ ಜೊತೆ ಆಗಾಗ ಜಗಳ ಮಾಡ್ತಿರ್ತಾನೆ. ಮೂವರೂ ಒಂದೇ ಕಡೆ ಕೆಲಸ ಮಾಡ್ತಿದ್ರು. ಶನಿವಾರ ರೈಲ್ವೇ ಟ್ರ್ಯಾಕ್ ಬಳಿ ಜಗಳ ಆಗುತ್ತೆ. ಜಗಳದ ಸಂದರ್ಭದಲ್ಲಿ ಇಸ್ಮಾಯಿಲ್ ನ ತಳ್ಳಿರ್ತಾರೆ. ಈಗಾಗಲೇ ಓರ್ವನನ್ನ ಬಂಧಿಸಲಾಗಿದೆ ಮತ್ತೋರ್ವನಿಗೆ ಹುಡುಕಾಟ ನಡೆಸಲಾಗ್ತಿದೆ. ಇಬ್ಬರು ಆರೋಪಿಗಳಲ್ಲಿ ಓರ್ವ ಆರೋಪಿ ಯುವತಿಯೋರ್ವಳನ್ನ ಲವ್ ಮಾಡ್ತಿರ್ತಾನೆ. ಕೊಲೆಯಾಗಿದ್ದ ವ್ಯಕ್ತಿ ಆ ಯುವತಿಯ ವಿಚಾರದಲ್ಲಿ ತಲೆ ಹಾಕಿದ್ದ. ಅದೇ ಕಾರಣಕ್ಕೆ ಕೊಲೆ ಆಗಿರಬಹುದು ಅಂತಾ ಶಂಕಿಸಲಾಗಿದೆ. ಸದ್ಯ ತನಿಖೆ ಮುಂದುವರೆಸಲಾಗಿದೆ ಎಂದಿದ್ದಾರೆ.