ಬೆಂಗಳೂರಲ್ಲಿ ದೆಹಲಿ ಮೂಲದ ಮಹಿಳೆ ಮನೆಯಲ್ಲಿ ಸ್ಪೋಟ: ಐದು ಮನೆಗಳಿಗೆ ಹಾನಿ, ಆರು ಜನರ ಸ್ಥಿತಿ ಗಂಭೀರ
ಬೆಂಗಳೂರಿನ ಯಲಹಂಕ ಮನೆಯಲ್ಲಿ ಭಾರಿ ಸ್ಫೋಟವಾಗಿದ್ದು, ಒಟ್ಟು ಐದು ಮನೆಗಳಿಗೆ ಹಾನಿಯಾದರೆ ಆರು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರು (ಜ.16): ಬೆಂಗಳೂರಿನ ಯಲಹಂಕದಲ್ಲಿ ಬೆಳ್ಳಂಬೆಳಗ್ಗೆ ದೆಹಲಿ ಮೂಲದ ಮಹಿಳೆ ವಾಸವಾಗಿದ್ದ ಮನೆಯಲ್ಲಿ ಭಾರಿ ಸ್ಪೋಟ ಸಂಭವಿಸಿದೆ. ಈ ಸ್ಪೋಟದಿಂದ ಅಕ್ಕಪಕ್ಕದ ಮನೆಗಳು ಸೇರಿ ಒಟ್ಟು ಐದು ಮನೆಗಳಿಗೆ ಹಾನಿಯಾಗಿವೆ. ಜೊತೆಗೆ, ಮನೆಯಲ್ಲಿದ್ದ ಒಟ್ಟು ಆರು ಮಂದಿಗೆ ಗಂಭೀರ ಹಾನಿಯಾಗಿದ್ದು, ಎಲ್ಲ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ಯಲಹಂಕ ಎಲ್ ಬಿ ಎಸ್ ಲೇಔಟ್ ನಲ್ಲಿ ನಡೆದಿದೆ. ಮೊದಲು ಸಿಲಿಂಡರ್ ಸ್ಪೋಟದಿಂದಲೇ ಈ ಹಾನಿ ಸಂಭವಿಸಿದೆ ಎಂದು ಹೇಳಲಾಗಿತ್ತು. ಇದರಿಂದ ಸ್ಫೋಟದ ಬೆನ್ನಲ್ಲಿಯೇ ಸ್ಥಳೀಯ ಜನರು ನೆರವಿಗೆ ಧಾವಿಸಿ 6 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವುದಕ್ಕೆ ನೆರವಾಗಿದ್ದರು. ಎಲ್ಲ ಗಾಯಾಳುಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ಸಿಲಿಂಡರ್ ಬ್ಲಾಸ್ಟ್ ಕೇಸ್‌ಗೆ ಮತ್ತೆ ಟ್ವಿಸ್ಟ್ ಸಿಕ್ಕಿತ್ತು. ಮನೆಯಲ್ಲಿದ್ದ ಸಿಲಿಂಡರ್ ಗಳು ಹಾಗೆ ಇದೆ. ಆದ್ರೆ ಸ್ಪೋಟದ ತೀವ್ರತೆಗೆ ಐದಾರು ಮನೆಗಳಿಗೆ ಹಾನಿಯಾಗಿವೆ. ಸ್ಫೊಟಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ಗೊಂದಲವಾಗಿತ್ತು.
ಇನ್ನು ಘಟನೆಯ ಭೀಕರತೆ ಗಾಯಾಳು ಅಫ್ರೋಜ್ ಮಾತನಾಡಿದ್ದು, ಬೆಳಗ್ಗೆ 7.10 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಾವು ಮತ್ತೆ ನಮ್ಮ ತಂದೆ ಕೆಳಗೆ ಇದ್ದೆವು. ನಮ್ಮ ಅಮ್ಮ ಮೊದಲ ಮಹಡಿಯಲ್ಲಿ ಇದ್ದರು. ಆದರೆ, ಪಕ್ಕದಲ್ಲಿ ದೆಹಲಿ ಮೂಲದ ಮಹಿಳೆ ವಾಸವಿದ್ದ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ. ನನಗೆ ಕರೆಂಟ್ ಹೊಡೆದು ಬಿದ್ದುಹೋಗಿದ್ದೆ. ಆಸ್ಪತ್ರೆಗೆ ಸೇರಿಸಲು ನನ್ನನ್ನು ಕರೆತಂದಿದ್ದಾರೆ. ಒಟ್ಟು ಐದು ಮನೆಗೆ ಹಾನಿ ಆಗಿದೆ. ಏಳು ಜನರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಸ್ಫೋಟ ಸಾಧ್ಯತೆ: ಇನ್ನು ಮನೆಯಲ್ಲಿನ ಸಿಲಿಂಡರ್ ಹಾಗೇ ಇದ್ದರೂ ಐದು ಮನೆಗಳಿಗೆ ಹಾನಿಯಾಗುವ ರೀತಿಯಲ್ಲಿ ಸ್ಫೋಟಕ್ಕೆ ಕಾರಣವೇನು ಎಂದು ಪರಿಶೀಲನೆ ಮಾಡಿದಾಗ ಬಹುತೇಕ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿರೋ ಸಾಧ್ಯತೆಯಿದೆ ಎಂದು ಸ್ಥಳೀಯರು ಹೇಳಿದ್ದಾರೆ. ರಾತ್ರಿ ಗ್ಯಾಸ್ ಸೋರಿಕೆಯಾಗಿದ್ದು, ಮನೆಯ ಎಲ್ಲ ಕಿಕಿ ಬಾಗಿಲುಗಳು ಬಂದ್ ಮಾಡಿದ್ದರಿಂದ ಸೋರಿಕೆಯಾದ ಗ್ಯಾಸ್ ಹೊರಗಡೆ ಬರೋಕೆ ಆಗಿಲ್ಲ. ಮನೆಗಳು ಚಿಕ್ಕ ಚಿಕ್ಕದಾಗಿರೋ ಕಾರಣಕ್ಕೆ ಎಲ್ಲೆಡೆ ಗ್ಯಾಸ್ ಅನಿಲ ಸೇರಿಕೊಂಡಿದೆ. ಎಲ್ಲಾ ಕಿಟಕಿಗಳು ಕ್ಲೋಸ್ ಆಗಿದ್ದರಿಂದ ಬೆಳಿಗ್ಗೆ ಎದ್ದಾಗ ಮಹಿಳೆ ಮನೆಯಲ್ಲಿ ಲೈಟ್ ಹಾಕಲು ಸ್ವಿಚ್ ಹಾಕಿದಾಗ ಲೈಟ್ ಬಂದಿದ್ದರಿಂದ ತಕ್ಷಣವೇ ಇಡೀ ಮನೆ ಸ್ಪೋಟಗೊಂಡಿರಬಹುದು. ಆದರೆ, ಮನೆಯಲ್ಲಿದ್ದ ಸಿಲಿಂಡರ್ ಸ್ಪೋಟ ಆಗಿಲ್ಲ.
ಇನ್ನು ಮನೆಗಳ ಗೋಡೆಗಳು ಒಂದಕ್ಕೊಂದು ಅಟ್ಯಾಚ್ ಆಗಿರೋದ್ರಿಂದ ಹಾನಿಯ ಪ್ರಮಾಣ ಐದು ಮನೆಗಳಿಗೆ ಹರಡಿದೆ. ಇದೇ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ. ಒಟ್ಟು ಐದು ಮನೆಗಳು ಡ್ಯಾಮೇಜ್ ಆಗಿವೆ. ಒಟ್ಟು ಆ6 ಜನರ ಪೈಕಿ ನಾಲ್ವರಿಗೆ ಗಾಯಗಳಾಗಿದ್ದು, ಇಬ್ಬರು ಸೀರಿಯಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಇಬ್ಬರ ದೇಹದ ಭಾಗಗಳು ಬಹುತೇಕ ಸುಟ್ಟ ರೀತಿಯಾಗಿದ್ದು, ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.