ಬೆಂಗಳೂರು[ಮೇ.21]: ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರೇ ನಿದ್ರೆಗೆ ಜಾರುವ ಮುನ್ನಾ ಎಚ್ಚರ. ನಿದ್ದೆಗೆ ಜಾರಿ ಕಾಮುಕರ ಟಾರ್ಗೆಟ್ ಆಗದಿರಿ. ಅಬ್ಬಾ ಇದೇನಿದು ಅಂತೀರಾ? ಇಲ್ಲಿದೆ ನೋಡಿ ಬೆಚ್ಚಿ ಬೀಳಿಸುವ ಮಾಹಿತಿ.

ಮೇ 18 ರ ಸಂಜೆ ಕಾಡುಗೋಡಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡುವ ಕಾಮುಕನೊಬ್ಬ ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿಯ ಹಿಂಭಾಗ ಮುಟ್ಟಿದ್ದಲ್ಲದೇ, ತನ್ನ ಮರ್ಮಾಂಗವನ್ನ ತೋರಿಸಿ ವಿಕೃತಿ ಮೆರೆದಿದ್ದಾನೆ. ಸಂಜೆ ಕೆಲ್ಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿ ರೈಲಿನಲ್ಲಿ ನಿದ್ರೆಗೆ ಜಾರಿದ್ದಾಳೆ. 

ಯುವತಿ ನಿದ್ರೆಗೆ ಜಾರುತ್ತಿದ್ದಂತೆಯೇ ಆಕೆಯ ಹಿಂಭಾಗವನ್ನ ಮುಟ್ಟಿದ 55 ವರ್ಷದ ವ್ಯಕ್ತಿ ಯುವತಿಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಸಾಲದೆಂಬಂತೆ ಯುವತಿಗೆ ಎಚ್ಚರ ಆಗ್ತಿದ್ದಂತೆ ಆಕೆಯ ಕಡೆಗೆ ತನ್ನ ಮರ್ಮಾಂಗ ಪ್ರದರ್ಶನ ಮಾಡಿದ್ದಾನೆ. ಈತನ ವರ್ತನೆ ಕಂಡು ಕೆರಳಿದ ಯುವತಿ ಪಕ್ಕದ ಕೋಚ್ ನಲ್ಲಿದ್ದ ತನ್ನ ಗೆಳತಿಯರನ್ನ ಕರೆದಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ.

ಪೊಲೀಸರಿಂದ ಉಡಾಫೆಯ ಉತ್ತರ:

ಕೂಡಲೇ ಮಹಿಳೆ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಳೆ. ಈ ವೇಳೆ ಘಟನೆ ನಡೆದಿದ್ದು ಕಾಡುಗೋಡಿ ಲಿಮಿಟ್ಸ್ ನಲ್ಲಿ ನಡೆದಿದ್ದು, ಅಲ್ಲೇ ದೂರು ನೀಡಿ ಎಂದು ಕಳುಹಿಸಿದ್ದಾರೆ. ಕಾಡುಗೋಡಿಗೆ ಬಂದು ದೂರು ನೀಡಲು ಮುಂದಾದಾಗ ರೈಲ್ವೆ ಪೊಲೀಸ್ ಬಳಿ ಕಳಿಸಿದ್ದಾರೆ. ಆದರೆ ರೈಲ್ವೆ ಪೊಲೀಸರ ಬಳಿ ದೂರು ನೀಡಲು ತೆರಳಿದಾಗ ಆತನ ಹೆಸರೇನು..? ನಿನ್ನ ಬಳಿ ಫೋಟೊ ಅಡ್ರೆಸ್ ಇದೆಯಾ ಅಂತ ಉಡಾಫೆ ತೋರಿದ್ದಾರೆ. 

ಇದರಿಂದ ಬೇಸತ್ತ ಯುವತಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಫೇಸ್ಬುಕ್ ನಲ್ಲಿ ಬರೆದು ರೈಲ್ವೆ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಟ್ಯಾಗ್ ಮಾಡಿ ಅಳಲು ತೋಡಿಕೊಂಡಿದ್ದಾಳೆ.