ಬೆಂಗಳೂರಿನ ಸಂಜಯನಗರದಲ್ಲಿ ಪತಿಯೊಂದಿಗಿನ ಜಗಳದಿಂದ ಮನನೊಂದ ನೇಪಾಳ ಮೂಲದ ಮಹಿಳೆಯೊಬ್ಬರು, ತಮ್ಮ 4 ವರ್ಷದ ಮಗುವಿನೊಂದಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ. ಈ ದುರಂತದಲ್ಲಿ ತಾಯಿ ಸೀತಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಗು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಬೆಂಗಳೂರು (ಜ.16): ಕ್ಷುಲ್ಲಕ ಕಾರಣಕ್ಕೆ ಪತಿ-ಪತ್ನಿಯ ನಡುವೆ ನಡೆದ ಜಗಳವೊಂದು ಭೀಕರ ದುರಂತದಲ್ಲಿ ಅಂತ್ಯಗೊಂಡಿದೆ. ಮನನೊಂದ ತಾಯಿಯೊಬ್ಬಳು ತನ್ನ 4 ವರ್ಷದ ಮಗುವಿನೊಂದಿಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದು, ತಾಯಿ ಸಾವನ್ನಪ್ಪಿದ್ದು, ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ಸಂಜಯನಗರದ ಕೃಷ್ಣಪ್ಪ ಲೇಔಟ್‌ನಲ್ಲಿ ನಡೆದಿದೆ.

ಘಟನೆಯ ವಿವರ

ಮೃತ ಮಹಿಳೆಯನ್ನು ನೇಪಾಳ ಮೂಲದ ಸೀತಾ (29) ಎಂದು ಗುರುತಿಸಲಾಗಿದೆ. ಆಕೆಯ 4 ವರ್ಷದ ಪುತ್ರಿ ಸೃಷ್ಟಿ ತೀವ್ರವಾಗಿ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸೀತಾ ಮತ್ತು ಆಕೆಯ ಪತಿ ಗೋವಿಂದ್ ಬಹದ್ದೂರ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಮನೆಗೆಲಸ ಮಾಡಿಕೊಂಡಿದ್ದರು. ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲೇ ಮಾಲೀಕರು ನೀಡಿದ್ದ ಸಣ್ಣ ಮನೆಯಲ್ಲಿ ವಾಸವಿದ್ದರು.

ಜಗಳಕ್ಕೆ ಕಾರಣವಾದ ಪತಿಯ ನಿರ್ಲಕ್ಷ್ಯ

ಗೋವಿಂದ್ ಮತ್ತು ಸೀತಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಗೋವಿಂದ್ ಕೆಲಸದ ನಿಮಿತ್ತ ಒಮ್ಮೆ ನೇಪಾಳಕ್ಕೆ ಹೋದರೆ ಐದಾರು ತಿಂಗಳು ವಾಪಸ್ ಬರುತ್ತಿರಲಿಲ್ಲ. ಇದರಿಂದ ಸೀತಾ ತೀವ್ರ ಮಾನಸಿಕವಾಗಿ ನೊಂದಿದ್ದರು. ನಿನ್ನೆ ಸಂಜೆ ಕೂಡ ಮೊಬೈಲ್ ಫೋನ್‌ನಲ್ಲಿ ಇಬ್ಬರ ನಡುವೆ ಜೋರಾಗಿ ಜಗಳ ನಡೆದಿತ್ತು. ಸಂಜೆ 7.30ರ ಸುಮಾರಿಗೆ ಹಾಲು ಮತ್ತು ಮೊಸರು ತಂದಿದ್ದ ಸೀತಾ, ಪತಿಯ ಮೇಲಿನ ಸಿಟ್ಟಿನಿಂದ ಮತ್ತು ಜೀವನದ ಮೇಲಿನ ಜಿಗುಪ್ಸೆಯಿಂದ ಮಗುವಿನೊಂದಿಗೆ ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ

ಈ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸಂಜಯನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ತಾಯಿ ಸೀತಾ ಮೃತಪಟ್ಟಿದ್ದು, ಗಾಯಾಳು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರಿಂದ ದೂರವಿದ್ದ ಈ ದಂಪತಿಗಳ ನಡುವಿನ ಕಲಹವೇ ಈ ದುರಂತಕ್ಕೆ ಮೂಲ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.