ಶಂಕರ್‌ ಪರಂಗಿ

ಬೆಂಗಳೂರು(ಫೆ.22): ಪ್ರತಿ ಬಾರಿ ಬೇಸಿಗೆಯಲ್ಲಿ ನೀರಿನ ಹಾಹಾಕಾರ ಎದುರಿಸುತ್ತಿದ್ದ ರಾಜಧಾನಿ ಬೆಂಗಳೂರಿಗೆ ಈ ಬಾರಿ ಕುಡಿಯುವ ನೀರಿನ ಸಮಸ್ಯೆಯಿಂದ ಕೊಂಚ ರಿಲೀಫ್‌ ಸಿಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಬೆಂಗಳೂರಿನ ಜಲಮೂಲಗಳಾದ ಕೆಆರ್‌ಎಸ್‌ನಲ್ಲಿ 36 ಟಿಎಂಸಿ ಮತ್ತು ಕಬಿನಿಯಲ್ಲಿ 16 ಟಿಎಂಸಿ ನೀರಿನ ಸಂಗ್ರಹವಿದೆ. ಈ ಲಭ್ಯ ನೀರನ್ನು ಬೇಸಿಗೆಯಲ್ಲಿ ಸಮರ್ಪಕವಾಗಿ ಪೂರೈಸುವ ಮೂಲಕ ನಗರದಲ್ಲಿ ನೀರಿನ ಅಭಾವ ಉಂಟಾಗಂದತೆ ನೋಡಿಕೊಳ್ಳುವುದಾಗಿ ಬೆಂಗಳೂರು ಜಲಮಂಡಳಿ ಭರವಸೆ ನೀಡಿದೆ.

ಬೆಂಗಳೂರಿನ ಜನತೆಗೆ ನಿತ್ಯ 1,440 ದಶಲಕ್ಷ ಲೀಟರ್‌ ನೀರಿನ ಅಗತ್ಯತೆ ಇದ್ದು, ಒಂದು ತಿಂಗಳಿಗೆ ಅಗತ್ಯವಿರುವ ಒಟ್ಟು 1.6 ಟಿಎಂಸಿ ನೀರು ಜಲಮಂಡಳಿಯಿಂದ ಸರಬರಾಜು ಆಗುತ್ತದೆ. ಇಷ್ಟುಅಗತ್ಯ ನೀರನ್ನು ತಾಪಮಾನ ಹೆಚ್ಚಿರುವ ಬೇಸಿಗೆಯಲ್ಲಿ ಸಮರ್ಪಕವಾಗಿ ಪೂರೈಸುವುದು ಸವಾಲಾಗಿರುತ್ತದೆ. ಅಲ್ಲದೇ ಜಲಮೂಲಗಳಲ್ಲಿ ನೀರಿನ ಸಂಗ್ರಹದಲ್ಲಿ ಕೊರತೆ ಎದುರಾದರೆ ನೀರಿನ ಸಮಸ್ಯೆ ಮತ್ತಷ್ಟುಬಿಗಡಾಯಿಸುತ್ತದೆ. ಆದರೆ ಸಾಮಾನ್ಯ ದಿನಗಳಷ್ಟೇ ಬೇಸಿಗೆಯಲ್ಲೂ ನೀರಿಗೆ ಬೇಡಿಕೆ ಇರುವುದರಿಂದ ಹಾಗೂ ಈ ಬಾರಿ ನೀರಿನ ಸಂಗ್ರಹ ಸಮರ್ಪಕವಾಗಿರುವುದರಿಂದ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅದರಂತೆ ಮಾಚ್‌ರ್‍, ಏಪ್ರಿಲ್‌, ಮೇ, ಜೂನ್‌ ಅಂತ್ಯದವರೆಗಿನ ಬೇಸಿಗೆಯ ನಾಲ್ಕು ತಿಂಗಳ ಅವಧಿಗೆ ಒಟ್ಟು ಸುಮಾರು 6.5ರಿಂದ 7 ಟಿಎಂಸಿ ನೀರು ಸಾಕಾಗಲಿದೆ. ತಿಂಗಳಿಗೆ ತಲಾ 1.6 ಟಿಎಂಸಿ ಎಂದರೂ ಬೇಸಿಗೆಯ ಒಟ್ಟು ನಾಲ್ಕು ತಿಂಗಳಿಗೆ 6.5ರಿಂದ 7 ಟಿಎಂಸಿ ಜಲಾಶಯಗಳಲ್ಲಿ ಲಭ್ಯವಿದೆ. ಅಷ್ಟೂನೀರನ್ನು ಸಮರ್ಪಕವಾಗಿ ಪೂರೈಸಲು ಜಲಮಂಡಳಿ ಈಗಾಗಲೇ ವಾರ್ಡ್‌ ಮಟ್ಟದಲ್ಲಿ ಒಟ್ಟು 35 ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ಅವರೆಲ್ಲರೂ ಈಗಾಗಲೇ ಕಾರ್ಯ ನಿರತರಾಗಿದ್ದಾರೆ.

ಬೆಂಗಳೂರಿನಲ್ಲಿ ಹೆಚ್ಚಾಗುತ್ತಾ ನೀರಿನ ದರ ..?

ಜಲಮಂಡಳಿಯ ಸಿದ್ಧತೆಗಳು

ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ವಿಶೇಷವಾಗಿ ಬೇಸಿಗೆಗೆಂದೇ ನಗರಾದ್ಯಂತ 35 ನೋಡಲ್‌ ಅಧಿಕಾರಿಗಳು ನೇಮಕಗೊಂಡಿದ್ದಾರೆ. ಈ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್‌ ಮಾರ್ಗಗಳಲ್ಲಿ ನೀರು ಸೋರಿಕೆ ಕಂಡು ಬಂದರೆ ತಡೆಯಲು ಹಾಗೂ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದ್ದರೆ ಕೂಡಲೇ ದುರಸ್ತಿಗೆ ಕ್ರಮ ವಹಿಸುತ್ತಿದ್ದಾರೆ. ಪಂಪ್‌ಹೌಸ್‌ಗಳಲ್ಲಿ ಸಿಬ್ಬಂದಿ ಕೆಲಸ ನಿರ್ವಹಣೆ, ನೀರಿನ ಪೈಪ್‌ಗಳಲ್ಲಿ ತ್ಯಾಜ ನೀರು ಸೇರದಂತೆ ನಿಗಾ ವಹಿಸುತ್ತಿದ್ದಾರೆ. ಬೇಸಿಗೆಯಿಡೀ ಪೂರೈಕೆಯಾಗುವ ನೀರಿನ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡಲಿದ್ದಾರೆ.

ಜನರ ಕುಂದುಕೊರತೆ ಕುರಿತ ದೂರುಗಳನ್ನು ತಕ್ಷಣವೇ ಮೇಲ್ವಿಚಾರಕರ ವ್ಯಾಪ್ತಿಗೆ ತಂದು ಪರಿಹಾರ ಒದಗಿಸುವ ಮೂಲಕ ಬೇಸಿಗೆ ಪೂರ್ತಿ ನಗರದ ಯಾವ ಭಾಗದಲ್ಲಿಯೂ ನೀರಿನ ಹಾಹಾಕಾರ ಉಂಟಾಗದಂತೆ ಗಮನವಹಿಸಲಿದ್ದಾರೆ. ಇನ್ನು ನಗರದ ಯಾವುದೇ ಪ್ರದೇಶದಲ್ಲಿ ನೀರಿನ ಕೊರತೆ ಎದುರಾದರೆ ತಕ್ಷಣವೇ ಹಾಲಿ 65 ಟ್ಯಾಂಕರ್‌ಗಳ ಮೂಲಕ ಆಯಾ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.

ಸೇರ್ಪಡೆ ಹಳ್ಳಿಗಳಿಗೆ ನೀರು ಪೂರೈಕೆ

ಜಲಮಂಡಳಿ ವ್ಯಾಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳ ಪೈಕಿ 53 ಹಳ್ಳಿಗಳ ಸುಮಾರು 10-15 ಸಾವಿರ ಕಟ್ಟಡಗಳು ಅಧಿಕೃತವಾಗಿ ನೀರಿನ ಸಂಪರ್ಕ ಪಡೆದಿವೆ. ಅವೆಲ್ಲವುಗಳಿಗೆ ಅಗತ್ಯದಷ್ಟುನೀರು ಪೂರೈಸಲಾಗುತ್ತಿದೆ. 2023-2024ರ ವೇಳೆಗೆ ಪೂರ್ಣಗೊಳ್ಳಲಿರುವ ಕಾವೇರಿ ನೀರು ಸರಬರಾಜು 5ನೇ ಹಂತದಡಿ ಸೇರ್ಪಡೆಯಾದ ಈ ಎಲ್ಲ 110 ಹಳ್ಳಿಗಳಿಗೂ ನೀರು ಒದಗಿಸಲು ಸಾಧ್ಯವಾಗಲಿದೆ.

ಬೇಸಿಗೆಯಲ್ಲೂ ಅಗತ್ಯ ನೀರು ಪೂರೈಸಲು ಬೆಂಗಳೂರು ಜಲಮಂಡಳಿ ಸಮರ್ಥವಾಗಿದೆ. ಅದಕ್ಕಾಗಿ ವಾರ್ಡ್‌ವಾರು 35 ಅಧಿಕಾರಿ ನೇಮಿಸಲಾಗಿದ್ದು, ಅವರೆಲ್ಲರೂ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಏನೇ ಸಮಸ್ಯೆ ಎದುರಾದರೂ ಕೂಡಲೇ ಪರಿಹಾರ ಒದಗಿಸಿ ನಗರದಲ್ಲಿ ನೀರಿನ ಹಾಹಾಕಾರ ಉಂಟಾಗದಂತೆ ನೋಡಿಕೊಳ್ಳಲಿದ್ದಾರೆ ಎಂದು ಬೆಂಗಳೂರು ಜಲಮಂಡಳಿ ಮುಖ್ಯಅಭಿಯಂತರರು (ಪೂರ್ವ) ಬಿ.ಎಂ.ಸೋಮಶೇಖರ್‌ ತಿಳಿಸಿದ್ದಾರೆ.