ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ಮತ್ತೆ ಬಂದ್: ಸಂಕ್ರಾತಿ ಹಬ್ಬಕ್ಕೆ ಶಾಕ್ ಕೊಟ್ಟ ಪೊಲೀಸರು!
ಬೆಂಗಳೂರು ನಗರದಿಂದ ರಾಜ್ಯದ ಉತ್ತರ ಕರ್ನಾಟಕದ 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆಯನ್ನು ಪುನಃ ಬಂದ್ ಮಾಡಲಾಗುತ್ತಿದೆ.
ಬೆಂಗಳೂರು (ಜ.09): ರಾಜ್ಯದ ರಾಜಧಾನಿ ಬೆಂಗಳೂರಿನಿಂದ ತುಮಕೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಉತ್ತರ ಕರ್ನಾಟಕದ 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲು ಅನುಕೂಲ ಆಗಿರುವ ಪೀಣ್ಯ ಫ್ಲೈ ಓವರ್ (ಡಾ.ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಅನ್ನು ಜ.16ರಿಂದ ಬಂದ್ ಮಾಡಲಾಗುತ್ತದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.
ಹೌದು, ಬೆಂಗಳೂರಿನಿಂದ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ 22 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲು ಪೀಣ್ಯ ಫ್ಲೈಓವರ್ ಅನುಕೂಲಕರ ಆಗಿದೆ. ಆದರೆ, ಕಳೆದೆರಡು ವರ್ಷಗಳ ಹಿಂದೆ ಈ ಮೇಲ್ಸೇತುವೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಈ ವೇಳೆ ಹಲವು ತಿಂಗಳ ಕಾಲ ಮೇಲ್ಸೇತುವೆ ಬಂದ್ ಮಾಡಲಾಗಿತ್ತು. ನಂತರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ಸೇತುವೆ ದುರಸ್ತಿ ಕಾರ್ಯವನ್ನು ಮಾಡಿದ ನಂತರ ಲಘು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ನಂತರ ಎಲ್ಲ ವಾಹನಗಳ ಸಂಚಾರಕ್ಕೂ ಮುಕ್ತಗೊಳಿಸಲಾಗಿತ್ತು.
ಬೆಂಗಳೂರಿನ ಜನರೇ ಹುಷಾರ್, ಕಿಲ್ಲರ್ ಬಿಎಂಟಿಸಿ ನಿಮ್ಮ ಪ್ರಾಣವನ್ನೂ ಹೊತ್ತೊಯ್ಯಬಹುದು!
ಆದರೆ, ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದ ವೇಳೆ ಮೇಲ್ಸೇತುವೆ ಕೆಳಗೆ ಎಲ್ಲ ಮಾದರಿಯ ವಾಹನಗಳು ಸಂಚರಿಸಬೇಕಿದ್ದರಿಂದ ಭಾರಿ ದೊಡ್ಡಮಟ್ಟದ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ತುಮಕೂರು ರಸ್ತೆಯಲ್ಲಿ ಪೀಣ್ಯ ಫ್ಲೈ ಓವರ್ ಇರುವ ರಸ್ತೆಯನ್ನು ದಾಟಲು ಕನಿಷ್ಠ 2-3 ಗಂಟೆ ಸಮಯ ಬೇಕಾಗುತ್ತಿತ್ತು. ಜೊತೆಗೆ, ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚಾರ ಮಾಡುತ್ತಿದ್ದರಿಂದ ಅಪಘಾತ ಪ್ರಕರಣಗಳು ಹಾಗೂ ಸಾವಿನ ಪ್ರಕರಣ ಹೆಚ್ಚಾಗಿ ವರದಿ ಆಗುತ್ತಿದ್ದವು. ಇನ್ನು ಮೇಲ್ಸೇತುವೆಯಲ್ಲಿ ವಾಹನಗಳ ಮರು ಸಂಚಾರ ಆರಂಭವಾದ ನಂತರ ಸಮಸ್ಯೆ ಕಡಿಮಯಾಗಿತ್ತು.
ಈಗ ಮತ್ತೊಮ್ಮೆ ಪೀಣ್ಯಾ ಪ್ಲೈ ಓವರ್ ನಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿದೆ. ಬೆಂಗಳೂರು ಸಂಚಾರಿ ಜಂಟಿ ಆಯುಕ್ತರಿಂದ ಆದೇಶ ಹೊರಡಿಸಲಾಗಿದ್ದು, ಜ.16 ರಿಂದ ಜ.19 ವರೆಗೆ ಬಂದ್ ಮಾಡಲಾಗುತ್ತಿದೆ. ಇನ್ನು ಮೇಲ್ಸೇತುವೆಯಲ್ಲಿಯ ವಾರ್ಷಿಕ ನಿರ್ವಹಣೆ, ಸಣ್ಣ ಪುಟ್ಟ ದುರಸ್ಥಿ ಕಾಮಗಾರಿ ಹಾಗೂ ಲೋಡ್ ಟೆಸ್ಟಿಂಗ್ ಹಿನ್ನಲೆ ಬಂದ್ ಮಾಡಲಾಗುತ್ತಿದೆ. ಜ. 16ರ ಮಧ್ಯೆ ರಾತ್ರಿ 11 ಗಂಟೆಯಿಂದ ಜ.19ರ ಬೆಳಗ್ಗೆ 9 ಗಂಟೆವರೆಗೆ ಬಂದ್ ಆಗಲಿದೆ. ಈ ವೇಳೆ ವಾಹನ ಸವಾರರು ಬದಲಿ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿದೆ ವಿದೇಶಿ ಹುಡುಗಿಯರ ವೇಶ್ಯಾವಾಟಿಕೆ ದಂಧೆ!
ಪೀಣ್ಯ ಮೇಲ್ಸೇತುವೆ ಬಂದ್ ಹಿನ್ನೆಲೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ:
- ನೆಲಮಂಗಲದ ಕಡೆಯಿಂದ ಬೆಂಗಳೂರು ನಗರಕ್ಕೆ ಪ್ರೈಓವರ್ ರಸ್ತೆಯ ಮೂಲಕ ಸಾಗುವ ವಾಹನಗಳು ಕೆನ್ನಮೆಟಲ್ ವಿಡಿಯಾ ಹತ್ತಿರ ಪ್ರೈಓವರ್ ಪಕ್ಕದ ಎನ್.ಹೆಚ್.-4 ರಸ್ತೆ ಹಾಗೂ ಸರ್ವಿಸ್ ರಸ್ತೆಯ ಮೂಲಕ 8ನೇ ಮೈಲಿ. ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪ ಬಹುದಾಗಿರುತ್ತದೆ.
- ಹಾಗೂ ಸಿ.ಎಂ.ಟಿ.ಐ ಜಂಕ್ಷನ್‌ನಿಂದ ನೆಲಮಂಗಲ ಕಡೆಗೆ ಪ್ರೈಓವರ್ ರಸ್ತೆಯಲ್ಲಿ ಸಾಗುವ ವಾಹನಗಳು ಪಾರ್ಲೆ-ಜಿ ಟೋಲ್ ತಲುಪಲು ಪ್ರೈಓವರ್ ಪಕ್ಕದ ಎನ್.ಹೆಚ್-4 ರಸ್ತೆ ಹಾಗೂ ಸರ್ವಿಸ್ ರಸ್ತೆಯಲ್ಲಿ ಎಸ್.ಆರ್.ಎಸ್ ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗಿದೆ.