ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಮಹಿಳೆಯೊಬ್ಬಳು ರಾತ್ರಿ ವೇಳೆ ಅಂಗಡಿಯಿಂದ ಪದೇ ಪದೇ ತೆಂಗಿನಕಾಯಿಗಳನ್ನು ಕದಿಯುತ್ತಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಸುಮಾರು 15 ತೆಂಗಿನಕಾಯಿಗಳನ್ನು ಕದ್ದೊಯ್ದಿದ್ದು, ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು ನಗರದಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ವಿಭಿನ್ನ ರೂಪ ತಾಳುತ್ತಿದ್ದು, ಇದೀಗ ತೆಂಗಿನಕಾಯಿ ಕಳ್ಳತನದ ವಿಚಿತ್ರ ಘಟನೆ ಗಮನ ಸೆಳೆಯುತ್ತಿದೆ. ಮಹಾಲಕ್ಷ್ಮಿ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಥಳೀಯವಾಗಿ ಇರುವ “ಶ್ರೀ ಲಕ್ಷ್ಮೀದೇವಿ ರೈಸ್ ಕಾರ್ನರ್” ಅಂಗಡಿಯಲ್ಲಿ ಮಧ್ಯರಾತ್ರಿ ವೇಳೆ ಮಹಿಳೆಯೊಬ್ಬಳು ತೆಂಗಿನಕಾಯಿಗಳನ್ನು ಕಳ್ಳತನ ಮಾಡುತ್ತಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿ ಮುಚ್ಚಿರುವ ಸಮಯದಲ್ಲಿ ಆಗಮಿಸಿದ ಆಕೆ, ಅಲ್ಲಿ ಇಟ್ಟಿದ್ದ ತೆಂಗಿನಕಾಯಿಗಳನ್ನು ಆರಾಮವಾಗಿ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಒಂದು ವಾರದಿಂದ ಕಾದು ಕುಳಿತರೂ ಆಕೆ ಕೈಗೆ ಸಿಕ್ಕಿರಲಿಲ್ಲ

ಈ ಘಟನೆ ಒಂದೇ ಸಲ ನಡೆದದ್ದಲ್ಲ ಎಂಬುದು ಇನ್ನಷ್ಟು ಆತಂಕ ಹುಟ್ಟಿಸಿದೆ. ಇದೇ ಮಹಿಳೆ ಈ ಹಿಂದೆಯೂ ಇದೇ ರೀತಿಯಲ್ಲಿ ಕಳ್ಳತನ ಮಾಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ಬಗ್ಗೆ ಅರಿತ ಅಂಗಡಿ ಮಾಲೀಕರು, ಆಕೆಯನ್ನು ಹಿಡಿಯಲು ಒಂದು ವಾರದಿಂದ ಕಾದು ಕುಳಿತರೂ ಆಕೆ ಕೈಗೆ ಸಿಕ್ಕಿರಲಿಲ್ಲ.

ಆದರೆ, ನಿನ್ನೆ ಬೆಳಗಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಮತ್ತೆ ಅದೇ ಸ್ಥಳಕ್ಕೆ ಬಂದ ಮಹಿಳೆ, ಮತ್ತೊಮ್ಮೆ ತೆಂಗಿನಕಾಯಿ ಕಳ್ಳತನಕ್ಕೆ ಮುಂದಾಗಿದ್ದಾಳೆ. ಈ ಬಾರಿ ಸುಮಾರು 15 ತೆಂಗಿನಕಾಯಿಗಳನ್ನು ಕದ್ದೊಯ್ದಿರುವುದಾಗಿ ತಿಳಿದುಬಂದಿದೆ.

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆ ಪತ್ತೆ

ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಮಹಿಳೆಯನ್ನು ಪತ್ತೆಹಚ್ಚಲು ಪೊಲೀಸರು ಕ್ರಮ ಕೈಗೊಂಡಿದ್ದು, ಈ ಕುರಿತು ಮಹಾಲಕ್ಷ್ಮೀ ಲೇಔಟ್‌ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಒಟ್ಟಾರೆ, ನಗರದ ಮಧ್ಯ ಭಾಗದಲ್ಲೇ ಇಂತಹ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ಸ್ಥಳೀಯ ವ್ಯಾಪಾರಿಗಳಿಗೆ ಆತಂಕ ಉಂಟುಮಾಡಿದ್ದು, ರಾತ್ರಿ ಪಾಳಿಯಲ್ಲಿ ಪೊಲೀಸ್ ಪಹರೆ ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.