Asianet Suvarna News Asianet Suvarna News

ಬೆಂ.ಗ್ರಾ. ವನ್ಯ ಜೀವಿಗಳ ನೀರಿನ ದಾಹ ನೀಗಿಸುತ್ತಿರುವ ಪ್ರಾಣಿಪ್ರಿಯರು

ರಣ ಬಿಸಿಲಿಗೆ ಕಾಡಿನೊಳಗೆ ಕೆರೆಕಟ್ಟೆ, ಕುಂಟೆಗಳು ಬತ್ತಿ ಹೋಗಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪ್ರಾಣಿ ಪ್ರಿಯರ ತಂಡವೊಂದು ಪ್ರಾಣಿ- ಪಕ್ಷಿಗಳ ದಾಹ ನೀಗಿಸುವ ಕಾರ್ಯಕ್ಕೆ ಮುಂದಾಗಿದೆ.

Bengaluru rural  Animal lovers quenching the thirst of wildlife snr
Author
First Published May 6, 2024, 2:39 PM IST

 ಎಚ್ .ಆರ್ .ಮಾದೇಶ್

 ಮಾಗಡಿ :  ರಣ ಬಿಸಿಲಿಗೆ ಕಾಡಿನೊಳಗೆ ಕೆರೆಕಟ್ಟೆ, ಕುಂಟೆಗಳು ಬತ್ತಿ ಹೋಗಿವೆ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಪ್ರಾಣಿ ಪ್ರಿಯರ ತಂಡವೊಂದು ಪ್ರಾಣಿ- ಪಕ್ಷಿಗಳ ದಾಹ ನೀಗಿಸುವ ಕಾರ್ಯಕ್ಕೆ ಮುಂದಾಗಿದೆ.

ಕಾಡಿನಲ್ಲಿ ಆಹಾರ, ಕುಡಿಯಲು ನೀರಿಲ್ಲದ ಕಾರಣ ವನ್ಯಜೀವಿಗಳು ಪಟ್ಟಣ ಮತ್ತು ನಗರ ಪ್ರದೇಶಗಳತ್ತ ಆಗಮಿಸುತ್ತಿವೆ. ಹೀಗಾಗಿ ಪ್ರಾಣಿ- ಪ್ರಿಯರ ತಂಡ ಕಾಡಿನಲ್ಲಿಯೇ ವನ್ಯಜೀವಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಗಮನ ಸೆಳೆದಿದೆ.

ಮಾಗಡಿ ಪಟ್ಟಣದ ಜ್ಯೋತಿ ನಗರದ ಧನಂಜಯ ಮತ್ತು ಸ್ನೇಹಿತರು ಪ್ರಾಣಿ ಪ್ರಿಯರು. ಇವರೆಲ್ಲರೂ ಮಣ್ಣಿನ ಮಡಿಕೆ,ಕುಡಿಕೆಗಳನ್ನು ಖರೀದಿಸಿ ಅವುಗಳನ್ನು ಅಲ್ಲಲ್ಲಿ ಕಾಡಿನೊಳಗೆ ಇಟ್ಟು, ನೀರು ಸಿಗುವ ಕಡೆ ಬಿಂದಿಗೆ, ಕ್ಯಾನ್‌ಗಳನ್ನು ತುಂಬಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತಂದು ನೀರು ತುಂಬಿಸಿ ಪ್ರಾಣಿ, ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.

ಅಲ್ಲದೇ, ಮಾರುಕಟ್ಟೆಗೆ ತೆರಳಿ ವ್ಯಾಪಾರಿಗಳೊಂದಿಗೆ ಸಮಾಲೋಚಿಸಿ ಅಲ್ಲಿ ಸಿಗುವ ಹಣ್ಣು, ತರಕಾರಿಗಳನ್ನು ತಂದು ಪ್ರಾಣಿಗಳಿಗೆ ಹಾಕುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೇ ಅರಣ್ಯ ಸಿಬ್ಬಂದಿಯ ಜೊತೆಗೂಡಿ ಪ್ರಾಣಿ, ಪಕ್ಷಿಗಳ ಸಂಕುಲವನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ದಿನೇ ದಿನೇ ಬಿಸಿಲಿನ ತಾಪಮಾನ ಏರುತ್ತಿದೆ. ಬಿಸಿಲಿನ ತಾಪಮಾನಕ್ಕೆ ಪ್ರಾಣಿ,ಪಕ್ಷಿಗಳು ಸಾವನ್ನಪ್ಪಬಾರದೆಂದು ಪ್ರಾಣಿಪ್ರಿಯ ಧನಂಜಯ, ಕಾಡಂಚಿನಲ್ಲಿ ತೆರಳಿ ಗಿಡ, ರಂಬೆ, ಕೊಂಬೆಗಳಿಗೆ ಪ್ಲಾಸ್ಟಿಕ್ ಬಕೆಟ್‌ಗಳನ್ನು ಕಟ್ಟಿ ಪ್ರಾಣಿ, ಪಕ್ಷಿಗಳ ನೀರಿನ ದಾಹ ಇಂಗಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಕಾಡಿನೊಳಗೆ ವಿವಿಧ ಜಾತಿಯ ಪ್ರಾಣಿ, ಪಕ್ಷಿಗಳು ವಾಸಿಸುತ್ತಿವೆ. ಮರಕುಟುಕ, ಗೊರವಂಕ, ಗುಬ್ಬಿ, ಕಾಗೆ, ಅಳಿಲು, ಕೋತಿಗಳು, ನರಿ, ಕರಡಿ, ಚಿರತೆ ಹೀಗೆ ನಾನಾ ತರಹದ ಪ್ರಾಣಿ,ಪಕ್ಷಿಗಳು ವಾಸಿಸುತ್ತಿವೆ. ಗಿಡ, ಮರಕ್ಕೆ, ಕಟ್ಟಿರುವ ಮಡಿಕೆ,ಕುಡಿಕೆ, ಡಬ್ಬಗಳಲ್ಲಿ ಶೇಖರಿಸುವ ನೀರನ್ನು ಕುಡಿದು, ಹಣ್ಣುಗಳನ್ನು ತಿಂದು ಬಾಯಾರಿಕೆ ದಾಹ, ಹಸಿವು ಇಂಗಿಸಿಕೊಳ್ಳುತ್ತಿವೆ. ಎಲ್ಲೆಲ್ಲಿ ಹೆಚ್ಚು ಪ್ರಾಣಿಗಳು ಸಂಚರಿಸುತ್ತಿವೆ ಎಂಬ ಮಾಹಿತಿಯನ್ನು ಕಾಡಿನ ವಾಚರ್‌ಗಳಿಂದ ಪಡೆದು ಅಲ್ಲಲ್ಲಿ ನೀರಿನ ಮಡಿಕೆ, ಕುಡಿಕೆ,ಪಾಟ್‌ಗಳನ್ನು ಇಡಲಾಗುತ್ತಿದೆ. ಕೆಲವು ಕಡೆ ಮರಗಿಡಗಳ ಟೊಂಗೆಗಳಿಗೆ ಕಟ್ಟಲಾಗಿದೆ. ಇಲ್ಲಿಗೆ ಹತ್ತಾರು ಪ್ರಾಣಿ,ಪಕ್ಷಿಗಳು ನೀರನ್ನು ಹುಡುಕಿಕೊಂಡು ಬರುತ್ತಿವೆ.

ಅರಣ್ಯಾಧಿಕಾರಿಗಳು ಕಾರ್ಯಪ್ರವೃತ್ತರಾಗಲಿ: ಸಾವನದುರ್ಗ ಕಾಯ್ದಿಟ್ಟ ಅರಣ್ಯ ಪ್ರದೇಶದವಾಗಿದ್ದು, ಸುಮಾರು 7 ಸಾವಿರ ಎಕರೆಯಷ್ಟು ಕಾಡಿದೆ. ಈ ಕಾಡಿನಲ್ಲಿರುವ ಪ್ರಾಣಿ,ಪಕ್ಷಿಗಳ ನೀರನ ದಾಹ ಇಂಗಿಸಲು ಅರಣ್ಯ ಇಲಾಖೆಯೂ ಸಹ ಕಾರ್ಯಪ್ರವೃತ್ತರಾಗಬೇಕಿದೆ. ಕಾಡಿನೊಳಗೆ ಅಲ್ಲಲ್ಲಿ ನೀರಿನ ತೊಟ್ಟಿಗಳನ್ನು ಇಟ್ಟು ನೀರು ತುಂಬಿಸುವ ಮೂಲಕ ಮೂಖಪ್ರಾಣಿಗಳ ದಾಹ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಎಚ್ .ಎನ್ .ಶಿವಲಿಂಗಯ್ಯ, ಅಧ್ಯಕ್ಷರು, ನಿಸರ್ಗ ಪರಿಚರಣ ಟ್ರಸ್ಟ್ .

ಈ ಬಾರಿ ಮಳೆ ಕೊರತೆಯಿಂದ ಸುಡು ಬಿಸಿಲು ಹೆಚ್ಚಾಗಿದೆ. ಕೆರೆಕಟ್ಟೆ,ಕುಂಟೆಗಳು ನೀರಿಲ್ಲದೇ ಬತ್ತಿ ಹೋಗಿವೆ. ಪ್ರಸ್ತುತ ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ಕಾಡಿನಲ್ಲಿ, ಕಾಡಂಚಿನಲ್ಲಿ ನೀರು, ಆಹಾರ ಸಿಗುತ್ತಿಲ್ಲ. ನಾನೇ ಸ್ವತಃ ಮಡಿಕೆ, ಕುಡಿಕೆಗಳನ್ನು,ಪಾಟ್, ಬಕೆಟ್‌ಗಳನ್ನು ಖರೀದಿಸಿ, ಅರಣ್ಯ ಇಲಾಖೆ ಸಹಕಾರ ಪಡೆದು ಅಲ್ಲಲ್ಲಿ ಮರ,ಗಿಡ,ರಂಬೆ, ಕೊಂಬೆಗಳಿಗೆ ಪಾಟ್‌ಗಳನ್ನು ಕಟ್ಟಿ, ಮಡಿಕೆ, ಕುಡಿಕೆಗಳನ್ನಿಟ್ಟು ದೂರದಿಂದ ನೀರು ತಂದು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಹಣ್ಣುಗಳನ್ನು ಉಚಿತವಾಗಿ ಕೆಲವೆಡೆ ಖರೀದಿಸಿ ತಂದು ಪ್ರಾಣಿಗಳಿಗೆ ನೀಡಲಾಗುತ್ತಿದೆ. ಈ ಮೂಲಕ ಪ್ರಾಣಿ,ಪಕ್ಷಿಗಳಿಗೆ ಅನುಕೂಲ ಕಲ್ಪಿಸಿ ಅವುಗಳ ಸ್ವಚ್ಛಂದ ಬದುಕಿಗೆ ಆಸರೆಯಾಗಿದ್ದೇವೆ. ನಿರಂತರವಾಗಿ ನಾನು ಹಲವು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ.

- ಧನಂಜಯ್ಯ , ಪ್ರಾಣಿಪ್ರಿಯ

Follow Us:
Download App:
  • android
  • ios