ಬೆಂಗಳೂರು : ಅಪಘಾತ ಮಾಡಿದ್ದ ಆರ್‌ಟಿಒ ಇನ್ಸ್‌ಪೆಕ್ಟರ್ ಸಾವು
ಆಟೋ ಚಾಲಕನಿಗೆ ಅಪಘಾತ ಮಾಡಿ ಆತನ ಕೈ ಮುರಿಯಲು ಕಾರಣವಾಗಿದ್ದ ಆರ್.ಟಿ. ಇನ್ಸ್ ಪೆಕ್ಟರ್ ಶುಕ್ರವಾರ ಮೃತಪಟ್ಟಿದ್ದಾರೆ.
ಬೆಂಗಳೂರು [ಸೆ.14]: ರಕ್ತದೊತ್ತಡ ಕಡಿಮೆಯಾಗಿ ನಿಂತಿದ್ದ ಆಟೋಗೆ ಕಾರು ಡಿಕ್ಕಿ ಹೊಡೆಸಿದ್ದ ಸಾರಿಗೆ ಇನ್ಸ್‌ಪೆಕ್ಟರ್ ಅನಾರೋಗ್ಯದಿಂದ ಶುಕ್ರವಾರ ಮೃತಪಟ್ಟಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿಯಾಗಿರುವ ಆರ್‌ಟಿಒ ಇನ್ಸ್‌ಪೆಕ್ಟರ್ ಮಂಜುನಾಥ್ (52) ಮೃತರು.
ಎಲೆಕ್ಟ್ರಾನಿಕ್ ಸಿಟಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (ಆರ್‌ಟಿಒ) ಮಂಜುನಾಥ್ ಟ್ರಾಫಿಕ್ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗುರುವಾರ ಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ 2ನೇ ಹಂತದ ಟಿಸಿಎಸ್ ಕಂಪನಿ ಕಚೇರಿ ಬಳಿ ನಿಂತಿದ್ದ ಆಟೋಗೆ ಅಧಿಕಾರಿ ಕಾರು ಡಿಕ್ಕಿ ಹೊಡೆಸಿದಿದ್ದರು.
ಘಟನೆಯಲ್ಲಿ ಆಟೋ ಗಾಜು ಮುರಿದು ಚಾಲಕ ನೂರ್ ಷರೀಫ್ ಎಂಬುವರ ಕೈ ಮುರಿದಿತ್ತು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸೇರಿದ ಆಟೋ ಚಾಲಕರು ರಸ್ತೆಯಲ್ಲಿ ಕುಳಿತು, ಅಪಘಾತ ಮಾಡಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಘೋಷಣೆ ಕೂಗಿದರು. ಅಧಿಕಾರಿ ಮಂಜುನಾಥ ಅವರ ಸುತ್ತುವರೆದ ಚಾಲಕರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.
ಆರ್‌ಟಿಒ ಇನ್ಸ್‌ಪೆಕ್ಟರ್ ಮಂಜುನಾಥ್ ಮದ್ಯಪಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮದ್ಯಪಾನ ಮಾಡಿಲ್ಲ ಎಂಬುದು ಖಾತ್ರಿಯಾಗಿತ್ತು. ವೈದ್ಯಕೀಯ ತಪಾಸಣೆ ಯಲ್ಲಿ ರಕ್ತದೊತ್ತಡ ಕಡಿಮೆಯಾಗಿರುವುದು ತಿಳಿದು ಬಂದಿತ್ತು.
ಮಂಜುನಾಥ್ ಅವರು ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸರಿಯಾಗಿ ಊಟ ಕೂಡ ಮಾಡುತ್ತಿರಲಿಲ್ಲ. ಗುರುವಾರ ಅಸ್ವಸ್ಥರಾದ ಕಾರಣ ಆಟೋಗೆ ಡಿಕ್ಕಿ ಮಾಡಿದ್ದರು. ಅಷ್ಟಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕುಡಿದು ಟ್ರಾಫಿಕ್ ಇನ್ಸ್‌ಪೆಕ್ಟರ್ ಅಪಘಾತ ಎಸಗಿದರು ಎಂದು ಸುದ್ದಿ ಮಾಡಲಾಗಿತ್ತು. ಇದೆಲ್ಲದರಿಂದ ಮಂಜುನಾಥ್ ಬೇಸರಗೊಂಡಿದ್ದರು. ಶುಕ್ರವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.