ಬಿಬಿಎಂಪಿ ಕೊಡಮಾಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಬೆಂಗಳೂರು ನಗರದಲ್ಲಿ ಕನಿಷ್ಠ ಐದು ವರ್ಷ ವಾಸ ಕಡ್ಡಾಯ, ಪ್ರಶಸ್ತಿಗೆ ಅರ್ಜಿ ಸಲ್ಲಿಸಬೇಕಿಲ್ಲ ಎಂಬುದು ಸೇರಿದಂತೆ ವಿವಿಧ ಮಾನದಂಡಗಳನ್ನು ಪ್ರಶಸ್ತಿ ಆಯ್ಕೆ ಸಮಿತಿಯು ರಚಿಸಿಕೊಂಡಿದೆ.
ಬೆಂಗಳೂರು (ಜು.19): ಬಿಬಿಎಂಪಿ ಕೊಡಮಾಡುವ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಬೆಂಗಳೂರು ನಗರದಲ್ಲಿ ಕನಿಷ್ಠ ಐದು ವರ್ಷ ವಾಸ ಕಡ್ಡಾಯ, ಪ್ರಶಸ್ತಿಗೆ ಅರ್ಜಿ ಸಲ್ಲಿಸಬೇಕಿಲ್ಲ ಎಂಬುದು ಸೇರಿದಂತೆ ವಿವಿಧ ಮಾನದಂಡಗಳನ್ನು ಪ್ರಶಸ್ತಿ ಆಯ್ಕೆ ಸಮಿತಿಯು ರಚಿಸಿಕೊಂಡಿದೆ. ಬಿಬಿಎಂಪಿಯಿಂದ ಆಯೋಜಿಸುವ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರೋಪ ಸಮಾರಂಭ ಹಾಗೂ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನಕ್ಕೆ ಸಂಬಂಧಿಸಿದಂತೆ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರ ಮೊದಲ ಸಭೆ ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸಮಿತಿ ಅಧ್ಯಕ್ಷರು ಹಾಗೂ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಯಿತು.
ಒಟ್ಟು 198 ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ನೀಡುವುದು. ಪ್ರಶಸ್ತಿಗೆ ಆಯ್ಕೆಗೊಂಡವರು ಕಡ್ಡಾಯವಾಗಿ ಕನಿಷ್ಠ ಐದು ವರ್ಷ ಬೆಂಗಳೂರಿನಲ್ಲಿ ವಾಸವಿರಬೇಕು. ಯಾವುದೇ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವುದು. ಬಿಬಿಎಂಪಿಯ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಹೊರತು ಪಡಿಸಿ ಇನ್ಯಾವುದೇ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರಾಗಿದ್ದರೂ ಪ್ರಶಸ್ತಿಗೆ ಆಯ್ಕೆ ಮಾಡಬಹುದು. ಒಂದು ವೇಳೆ ಪುರಸ್ಕೃತರು ಈ ಹಿಂದೆ ಬಿಬಿಎಂಪಿಯಿಂದ ಕೆಂಪೇಗೌಡ ಪ್ರಶಸ್ತಿ ಪಡೆದುಕೊಂಡಿದ್ದರೆ, ಪ್ರಶಸ್ತಿ ಹಿಂಪಡೆಯುವ ಅಧಿಕಾರವನ್ನು ಬಿಬಿಎಂಪಿ ಹೊಂದಿರಲಿದೆ.
ರೈತರು, ಬಡವರ ಕೇಸು ಇತ್ಯರ್ಥಕ್ಕೆ ಕೋರ್ಟ್‌ಗೆ ಗಡುವು: ಸಚಿವ ಎಚ್.ಕೆ.ಪಾಟೀಲ್
ಪ್ರಶಸ್ತಿಗೆ ಅರ್ಜಿ ಸಲ್ಲಿಸಬೇಕಿಲ್ಲ. ವಾರ್ಡ್‌ಗೆ ಒಂದು ಪ್ರಶಸ್ತಿ. ಪುರಸ್ಕೃತರ ಹೆಸರು ಶಿಫಾರಸು ಮಾಡುವುದು. ಒಂದು ವಾರ್ಡ್‌ನಲ್ಲಿ ಸಾಧಕರು ದೊರೆಯದಿದ್ದರೆ, ಮತ್ತೊಂದು ವಾರ್ಡ್‌ನ ಸಾಧಕರನ್ನು ಆಯ್ಕೆ ಮಾಡಬಹುದು ಎಂಬ ಮಾನದಂಡಗಳನ್ನು ಸಮಿತಿ ಸದಸ್ಯರು ಮಂಗಳವಾರದ ಸಭೆಯಲ್ಲಿ ರಚನೆ ಮಾಡಿಕೊಂಡಿದ್ದಾರೆ.
ಸಿಎಂ, ಡಿಸಿಎಂ ನಿರ್ಧಾರ: ಆಯ್ಕೆ ಸಮಿತಿ ಶಿಫಾರಸ್ಸು ಮಾಡಿ ಪುರಸ್ಕೃತ ಪಟ್ಟಿಯನ್ನು ಬದಲಾವಣೆ ಮಾಡುವುದು. ಪ್ರಶಸ್ತಿ ಸಂಖ್ಯೆಯನ್ನು 198ಕ್ಕಿಂತ ಅಧಿಕಗೊಳಿಸುವ ಮತ್ತು ಕಡಿಮೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರು ಹೊಂದಿರಲಿದ್ದಾರೆ. ಜುಲೈ 25ಕ್ಕೆ ಪ್ರಶಸ್ತಿ ಪುರಸ್ಕೃತ ಆಯ್ಕೆ ಸಭೆ ನಡೆಸುವುದಕ್ಕೆ ಸಭೆ ತೀರ್ಮಾನಿಸಿದೆ.
ಪುರಸ್ಕಾರ ಮೊತ್ತ 50 ಸಾವಿರ+?: 198 ಪ್ರಶಸ್ತಿ ನೀಡಲಾಗುತ್ತಿದ್ದು, ಪ್ರತಿ ಪುರಸ್ಕೃತರಿಗೆ ಈ ಬಾರಿ 50 ಸಾವಿರಕ್ಕೂ ಅಧಿಕ ಮೊತ್ತದ ನಗದು ಪುರಸ್ಕಾರ ನೀಡುವ ಬಗ್ಗೆ ಸಮಿತಿ ಸದಸ್ಯರು ಚರ್ಚೆ ನಡೆಸಿದ್ದಾರೆ. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಜುಲೈ 28ರಂದು ಸಮಾರಂಭ ನಡೆಸುವ ಬಗ್ಗೆ ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ. ಅದರಂತೆ ಜುಲೈ 25ರಂದು ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಭೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ. ಮಾನದಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೆಂಪೇಗೌಡ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಬಿಬಿಎಂಪಿ ಅಧಿಕಾರಿಗಳು ಉಪಸ್ಥಿತರಿದ್ದರು.
ಪರಿಷತ್‌ನಲ್ಲಿ ಪಾಸಾಗದ ಎಪಿಎಂಸಿ ವಿಧೇಯಕ ಸದನ ಸಮಿತಿ ಹೆಗಲಿಗೆ: ಮಸೂದೆಗೆ ಬ್ರೇಕ್
ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು ಇವರು: ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಮಿತಿಯ ಸದಸ್ಯರಾಗಿ ವಿಧಾನಪರಿಷತ್ ಸದಸ್ಯ ಗೋವಿಂದ ರಾಜು, ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಕಲಾವಿದರಾದ ಸಾಧು ಕೋಕಿಲಾ, ಸಿಹಿ-ಕಹಿ ಚಂದ್ರು, ಸಾಹಿತಿ ಮುಂಕುಂದರಾಜ್, ರಂಗಕರ್ಮಿ ಕೆ.ವಿ.ನಾಗರಾಜಮೂರ್ತಿ, ಸಂಗೀತಗಾರ್ತಿ ಸುಮಾ ಸುಧೀಂದ್ರ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್ ಅವರಿದ್ದಾರೆ. ಇನ್ನು ಸಮಿತಿ ಸದಸ್ಯ ಕಾರ್ಯದರ್ಶಿಯಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ನೇಮಿಸಲಾಗಿದೆ.
