ಬೆಂಗಳೂರು (ಸೆ.08):  ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರಿದಿರುವ ನಡುವೆಯೇ ಹಂತ ಹಂತವಾಗಿ ಲಾಕ್‌ಡೌನ್‌ ಸಡಿಲಿಕೆ ಮೂಲಕ ಬಹುತೇಕ ಚಟುವಟಿಕೆಗಳ ಪುನಾರಂಭಗೊಂಡಿದ್ದು, ನಿಧಾನಗತಿಯಲ್ಲಿ ವ್ಯಾಪಾರ, ವಹಿವಾಟು ಗರಿಗೆದರುವ ಮೂಲಕ ಆರ್ಥಿಕ ಚಟುವಟುಕೆ ಚೇತರಿಕೆಗೊಳ್ಳುತ್ತಿದೆ.

ನಗರದಲ್ಲಿ ಶಾಲಾ ಕಾಲೇಜು, ಚಿತ್ರಮಂದಿರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲೂ ವ್ಯಾಪಾರ, ವಹಿವಾಟು ಆರ್ಥಿಕ ಚಟುವಟುಕೆಗಳು ಆರಂಭವಾಗಿದೆ. ಆದರೆ, ಇನ್ನೂ ಕೂಡ ಕೊರೋನಾ ಪೂರ್ವ ಕಾಲದ ಮಟ್ಟಕ್ಕೆ ವ್ಯಾಪಾರ ವಹಿವಾಟು ಪ್ರಮಾಣ ತಲುಪಿಲ್ಲ. ಆದರೆ, ಆರಂಭದ ಕೆಲ ಹಂತದ ಲಾಕ್‌ಡೌನ್‌ ಸಡಿಲಿಕೆ ವೇಳೆ ಶೇ.20ರಿಂದ 30ರಷ್ಟುಚೇತರಿಕೆ ಕಂಡಿದ್ದ ಆರ್ಥಿಕ ಚಟುವಟಿಕೆಗಳು, ಕಳೆದ ಹದಿನೈದು ದಿನಗಳಿಂದೀಚೆಗೆ ಎಲ್ಲ ಕ್ಷೇತ್ರಗಳಲ್ಲೂ ಶೇ.40ರಿಂದ 60ರ ವರೆಗೆ ಏರಿಕೆ ಕಂಡಿವೆ.

ಲಾಕ್‌ಡೌನ್‌-4 ಬಳಿಕ ನಗರದಲ್ಲಿ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಬೆಳವಣಿಗೆ ಕಂಡುಬಂದಿದೆ. ಕಳೆದ ಹದಿನೈದು ದಿನಗಳಿಂದೀಚೆಗೆ ನಗರದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮನೆಯಿಂದ ಹೊರಬರುತ್ತಿದ್ದಾರೆ. ಹೋಟೆಲ್‌, ರೆಸ್ಟೋರೆಂಟ್‌, ಉದ್ದಿಮೆ, ಮಾರುಕಟ್ಟೆ, ಶಾಪಿಂಗ್‌ ಮಾಲ್‌, ಜಿಮ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌, ಬೀದಿ ಬದಿ ವ್ಯಾಪಾರ, ಸಾರಿಗೆ ಸಂಚಾರ, ಧಾರ್ಮಿಕ ಸ್ಥಳಗಳು, ಜೊತೆಗೆ ಅಭಿವೃದ್ಧಿ ಕಾಮಗಾರಿಗಳು, ಸಾರ್ವಜನಿಕ ಕಾರ್ಯಕ್ರಮ, ಸಮಾರಂಭಗಳು ಹೀಗೆ ಎಲ್ಲ ಚಟುವಟಿಕೆಗಳು ಯಥಾಸ್ಥಿತಿಯತ್ತ ಮರಳಲಾರಂಭಿಸಿವೆ.

5 ತಿಂಗ್ಳು ನಂತ್ರ ಆರಂಭವಾದ ಮೆಟ್ರೋದಲ್ಲಿ ಸಂಚರಿಸಿ ಪ್ರಯಾಣಿಕರಿಗೆ ಮಹತ್ವದ ಕರೆ ಕೊಟ್ಟ ಶ್ರೀರಾಮುಲು

ನಿಧಾನಗತಿಯಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿರುವುದು ಉದ್ದಿಮೆದಾರರು, ವ್ಯಾಪಾರಿಗಳು, ಉದ್ಯೋಗಸ್ಥರು, ಕಾರ್ಮಿಕರು, ರೈತರು, ಚಾಲಕರು ಹೀಗೆ ಎಲ್ಲ ವರ್ಗದ ಜನರ ಮುಖದಲ್ಲೂ ಮಂದಹಾಸ ಮೂಡಿಸುತ್ತಿದೆ. ಆದರೆ, ಈ ಆರ್ಥಿಕ ಚೇತರಿಕೆ ಇನ್ನೂ ಲಾಭಾಂಶ ತಂದುಕೊಡುವ ಮಟ್ಟಕ್ಕೆ ಹೋಗಿಲ್ಲ. ಬಹುಶಃ 2020ರ ಮಾಸಾಂತ್ಯದ ವೇಳೆಗೆ ಇನ್ನಷ್ಟುಚೇತರಿಕೆ ಮೂಲಕ ಸಮಾಧಾನಕರ ಮಟ್ಟಕ್ಕೆ ತಲುಪಬಹುದು.

ರಿಯಾಲಿಟಿ ಚೆಕ್‌ನಲ್ಲಿ ಯಾವ್ಯಾವ ಕ್ಷೇತ್ರದ ಜನರು ಏನು ಹೇಳಿದ್ದಾರೆ ಇಲ್ಲಿದೆ ನೋಡಿ ಮಾಹಿತಿ....

*ಹೋಟೆಲ್‌ ಉದ್ಯಮ

ಬೆಂಗಳೂರಲ್ಲಿ ಎರಡನೇ ಬಾರಿಗೆ ಒಂದು ವಾರ ಲಾಕ್‌ಡೌನ್‌ ಮಾಡಿ ತೆರವುಗೊಳಿಸಿದ ಬಳಿಕ ಅಡಿಗಾಸ್‌, ಸುಖಸಾಗರ್‌, ಸವಿರುಚಿ, ಕಾಮತ್‌, ನಮ್ಮೂರ ತಿಂಡಿ, ದ್ವಾರಕಾ ಸೇರಿದಂತೆ ಹೆಸರಾಂತ ಹೋಟೆಲ್‌ಗಳಿಗೆ 15 ದಿನಗಳಿಂದ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವ್ಯಾಪಾರದಲ್ಲಿ ಶೇ.50ರಷ್ಟುಚೇತರಿಕೆ ಕಂಡುಬಂದಿದೆ ಎನ್ನುತ್ತಾರೆ ಹಲವು ಹೋಟೆಲ್‌ಗಳ ಮಾಲಿಕರು, ಮ್ಯಾನೇಜರ್‌ಗಳು.

ಹೋಟೆಲ್‌ ಉದ್ಯಮ ಅರ್ಧದಷ್ಟುಚೇತರಿಸಿ ಕೊಂಡಿರುವುದು ನಿಜ. ನಿತ್ಯ ಒಂದು ಲಕ್ಷ ವ್ಯಾಪಾರದ ಜಾಗದಲ್ಲಿ ಈಗ 50 ಸಾವಿರ ಆಗುತ್ತಿದೆ. ಆದರೆ, ಇದು ಬಾಡಿಗೆ, ನೀರಿನ ಬಿಲ್‌, ವಿದ್ಯುತ್‌ ಬಿಲ್‌ ಎಲ್ಲವನ್ನೂ ಕಳೆದರೆ ಲಾಭಾಂಶದ ಮಟ್ಟಕ್ಕೆ ತಲುಪಿಲ್ಲ. ವರ್ಷಾಂತ್ಯದ ವರೆಗೆ ಇದೇ ಸ್ಥಿತಿ ಇರಬಹುದೆಂದು ನಿರೀಕ್ಷಿಸಿದ್ದೇವೆ ಎನ್ನುತ್ತಾರೆ ಬೆಂಗಳೂರು ಹೋಟೆಲ್‌ ಮಾಲಿಕರ ಸಂಘದ ಕಾರ್ಯದರ್ಶಿ ಪಿ.ಸಿ.ರಾವ್‌ ಅವರು.

*ಸಣ್ಣ ಪುಟ್ಟಕ್ಯಾಂಟೀನಲ್ಲಿ ವ್ಯಾಪಾರ ಕಡಿಮೆ

ಸಣ್ಣ ಪುಟ್ಟದರ್ಶಿನಿಗಳು, ಕ್ಯಾಂಟೀನ್‌ಗಳು ಇನ್ನೂ ದೊಡ್ಡ ಮಟ್ಟದ ಹೋಟೆಲ್‌ಗಳ ಮಟ್ಟಕ್ಕೆ ಚೇತರಿಸಿಕೊಂಡಿಲ್ಲ. ಇವುಗಳ ಮಾಲಿಕರು ಹೇಳುವ ಪ್ರಕಾರ ಸಾಮಾನ್ಯ ಕಾರ್ಮಿಕರು, ದಿನಗೂಲಿ ನೌಕರು ಹಾಗೂ ಹೋಟೆಲ್‌ ಸುತ್ತಮುತ್ತಲ ಜನರೇ ನಮ್ಮ ಗ್ರಾಹಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಕೊರೋನಾ ಆತಂಕದಿಂದ ಅವರಲ್ಲಿ ಸಾಕಷ್ಟುಜನ ಈಗ ಮನೆಯಿಂದ ಊಟ ತರುತ್ತಿದ್ದಾರೆ. ಇನ್ನು ಕೆಲವರು ಸ್ವಚ್ಛತೆ, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿ ಊಟ ಮಾಡಲು ಹಿಂಜರಿಯುತ್ತಿದ್ದಾರೆ. ಕೆಲವರು ಹಣ ಹೆಚ್ಚಾದರೂ ದೊಡ್ಡ ಹೋಟೆಲ್‌ಗಳಿಗೆ ಹೋಗುತ್ತಿದ್ದಾರೆ. ಹಾಗಾಗಿ ನಮ್ಮಲ್ಲಿ ನಿತ್ಯ 10 ಸಾವಿರ ವ್ಯಾಪಾರವಾಗಬೇಕಿದ್ದ ಕಡೆ ಈಗ 3ರಿಂದ 4 ಸಾವಿರ ಆಗುತ್ತಿದೆ. ಕೈಯಿಂದ ಬಾಡಿಗೆ ಕಟ್ಟುತ್ತಿದ್ದೇವೆ. ಇದೇ ರೀತಿ ಕೆಲ ತಿಂಗಳು ಮುಂದುವರಿದರೆ ಹೋಟೆಲ್‌ ನಡೆಸುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಅರಮನೆ ರಸ್ತೆಯ ಶ್ರೀರಾಮ ಕ್ಯಾಂಟೀನ್‌ ಮಾಲಿಕ.

*ಕೆ.ಆರ್‌.ಮಾರುಕಟ್ಟೆವಾರದಲ್ಲೇ 60ರಷ್ಟುವ್ಯವಹಾರ ಚೇತರಿಕೆ

ನಗರದ ತರಕಾರಿ, ಹಣ್ಣು, ಹೂ ವ್ಯಾಪಾರದ ಹೃದಯ ಭಾಗವಾದ ಕೆ.ಆರ್‌.ಮಾರುಕಟ್ಟೆಆರಂಭವಾದ ಒಂದೇ ವಾರದಲ್ಲಿ ವ್ಯಾಪಾರ, ವಹಿವಾಟು ಶೇ.60ರಷ್ಟುಚೇತರಿಕೆ ಕಂಡು ಬಂದಿದೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿಗಳು. ನಗರದ ಗಲ್ಲಿ ಗಲ್ಲಿಗೂ ಈ ಮಾರುಕಟ್ಟೆಯಿಂದಲೇ ಬಿಡಿ ವ್ಯಾಪಾರಿಗಳು ಹೂವು, ಹಣ್ಣು, ತರಕಾರಿ ಖರೀದಿಸಿಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಬಿಬಿಎಂಪಿ ಮಾರುಕಟ್ಟೆಯ ಒತ್ತುವರಿಯನ್ನೆಲ್ಲಾ ತೆರವು ಮಾಡಿರುವುದರಿಂದ ವ್ಯಾಪಾರಕ್ಕೆ ತೊಂದರೆಯಾಗುತ್ತಿಲ್ಲ. ದೀಪಾವಳಿ, ದಸರಾ ವೇಳೆಗೆ ಮಾರುಕಟ್ಟೆಬಹುತೇಕ ಈ ಹಿಂದಿನಂತೆ ವ್ಯಾಪಾರ ವಹಿವಾಟಿಗೆ ಮರಳುವ ನಿರೀಕ್ಷೆ ಇದೆ ಎನ್ನುತ್ತಾರೆ ಇಲ್ಲಿನ ತರಿಕಾರಿ ವ್ಯಾಪಾರಿಗಳ ಸಂಘದ ಗೋಪಿ ಅವರು.

*ಬೀದಿ ಬದಿ ವ್ಯಾಪಾರ ಹೇಳಿಕೊಳ್ಳುವಂತಿಲ್ಲ

ಬೀದಿ ಬದಿ ವ್ಯಾಪಾರ ಇನ್ನೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲವಾದರೂ ತಕ್ಕಮಟ್ಟಿಗೆ ಪರವಾಗಿಲ್ಲ. ಕಳೆದ ಒಂದು ತಿಂಗಳಿಂದ ಅಲ್ಪಸ್ವಲ್ಪ ವ್ಯಾಪಾರದಿಂದ ಜೀವನ ನಡೆಸುತ್ತಿದ್ದೇವೆ. ಆದರೆ, ಸದ್ಯಕ್ಕೆ ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳ ಕಾಟ ಇಲ್ಲ. ಅದು ಶುರುವಾದರೆ ನಾವು ವ್ಯಾಪಾರ ನಡೆಸಲಾಗಲ್ಲ ಬಾಗಿಲು ಹಾಕಬೇಕಾಗುತ್ತದೆ. ಸದ್ಯ ಕೋವಿಡ್‌ ಪೂರ್ವ ಕಾಲಕ್ಕೆ ಹೋಲಿಸಿದರೆ ಅರ್ಧದಷ್ಟುವ್ಯಾಪಾರ ಮಾಡುತ್ತಿದ್ದೇವೆ. ನಿತ್ಯ 1 ಸಾವಿರ ವ್ಯಾಪಾರ ಮಾಡುವವರು ಈಗ ಕೇವಲ .500 ಮಾಡುತ್ತಿದ್ದಾರೆ. ಇನ್ನೂ ಕೆಲ ತಿಂಗಳು ಹೋದರೆ ವ್ಯಾಪಾರ ಇನ್ನಷ್ಟುಸುಧಾರಿಸಬಹುದು ಎಂದು ಬಿಬಿಎಂಪಿ ಬೀದಿ ವ್ಯಾಪಾರಿಗಳ ಸಂಘದ ಬಾಬು ನಿರೀಕ್ಷಿಸಿದ್ದಾರೆ.

*ಓಲಾ-ಊಬರ್‌, ಆಟೋಗೆ ಜನರಿಲ್ಲ

ಇನ್ನು ಖಾಸಗಿ ಬಸ್ಸು, ಓಲಾ, ಊಬರ್‌, ಆಟೋ ಸೇರಿದಂತೆ ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ಕೇವಲ ಶೇ.20ರಷ್ಟುಮಾತ್ರ ಆರ್ಥಿಕ ಚಟುವಟಿಕೆ ಸುಧಾರಣೆ ಕಂಡಿದೆ. ಈಗಷ್ಟೇ ಸುಧಾರಣೆ ಆರಂಭವಾಗಿದ್ದು ಚಾಲನೆಯನ್ನೇ ಜೀವನಾಧಾರವಾಗಿಸಿ ಕೊಂಡಿರುವ ನಮ್ಮ ಕಷ್ಟಕೇಳುವವರಿಲ್ಲ. ಸರ್ಕಾರ ನಾಮಕಾವಸ್ತೆಗೆ ಷರತ್ತುಗಳನ್ನು ವಿಧಿಸಿ ಕೆಲವರಿಗೆ ಮಾತ್ರ ಪರಿಹಾರ ನೀಡಿತು. ಇಂದಿಗೂ ದಿನವೆಲ್ಲಾ ಸುತ್ತಿದರೂ ನೂರಿನ್ನೂರು ರುಪಾಯಿ ಸಂಪಾದಿಸಲಾಗುತ್ತಿಲ್ಲ. ಈಗ ಪೊಲೀಸರೂ ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಬ್ಯಾಂಕುಗಳು ಇಎಂಐ ಕಟ್ಟುವಂತೆ ಒತ್ತಾಯಿಸುತ್ತಿವೆ. ಏನು ಮಾಡಬೇಕೆಂದು ದಾರಿ ತೋರುತ್ತಿಲ್ಲ ಎನ್ನುತ್ತಾರೆ ಓಲಾ, ಊಬರ್‌ ಟ್ಯಾಕ್ಸಿ ಹಾಗೂ ಆಟೋ ಚಾಲಕರು. ಇನ್ನು ಕೆಲಸ ಕಳೆದುಕೊಂಡಿರುವ ಹಲವರು ಊರಿಗೆ ಹೋದವರು ಬಂದೇ ಇಲ್ಲ ಎನ್ನುತ್ತಾರೆ ಈ ಚಾಲಕರ ಸಂಘದ ಚಂದ್ರು ಅವರು.

*ಶಾಪಿಂಗ್‌ ಮಾಲ್‌ಗಳತ್ತ ಜನರು ಮುಖ ಮಾಡುತ್ತಿಲ್ಲ

ನಗರದ ಶಾಪಿಂಗ್‌ ಮಾಲುಗಳಿಗೆ ಇನ್ನೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಕಳೆದ ಒಂದು ವಾರದಿಂದ ಕೊಂಚ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೂ ಮೊದಲು ತೀರಾ ಕಡಿಮೆ ಇತ್ತು. ನಮ್ಮ ಮಾಲ್‌ನಲ್ಲಿ ಎಲ್ಲ ರೀತಿಯ ಕೋವಿಡ್‌ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ, ಆತಂಕದಿಂದಲೋ ಏನೋ ಜನರು ಬರುತ್ತಿಲ್ಲ. ಅಲ್ಲದೆ, ಐಟಿ ಬಿಟಿ ಕಂಪನಿ ಉದ್ಯೋಗಿಗಳು ನಮಗೆ ಹೆಚ್ಚಿನ ಗ್ರಾಹಕರಾಗಿದ್ದಾರೆ. ಅವರಿಗೆ ಇನ್ನೂ ವರ್ಕ್ ಫ್ರಂ ಹೋಂ ಇರುವುದರಿಂದ ಗ್ರಾಹಕರು ಕಡಿಮೆ ಇರಬಹುದು ಎನ್ನುತ್ತಾರೆ ಫೋರಂ ಮಾಲ್‌ ಉದ್ಯೋಗಿ ಸುರಕ್ಷಾ.