Asianet Suvarna News Asianet Suvarna News

ಕೊರೋನಾ ಆತಂಕದ ಮಧ್ಯೆ ದಸರಾ ಸಂಭ್ರಮಕ್ಕೆ ಸಿಲಿಕಾನ್‌ ಸಿಟಿ ಸಜ್ಜು

ಕಳೆಗಟ್ಟಿದ ಆಯುಧಪೂಜೆ, ವಿಜಯದಶಮಿ ಸಂಭ್ರಮ| ಬಾಳೆಕಂಬ, ನಿಂಬೆ, ಬೂದುಗುಂಬಳಕ್ಕೆ ಬೇಡಿಕೆ| ಮಾರುಕಟ್ಟೆಗಳಲ್ಲಿ ಜನ ಜಾತ್ರೆ| ವಾಹನ, ಅಂಗಡಿಗಳ ಪೂಜೆಗೆ ಸಿದ್ಧತೆ| ದೇಗುಲಗಳಲ್ಲಿ ವಿಶೇಷ ಪೂಜೆಗೆ ಸಿದ್ಧತೆ| 

Bengaluru Ready to Celebration of Dasara Festival grg
Author
Bengaluru, First Published Oct 25, 2020, 8:20 AM IST

ಬೆಂಗಳೂರು(ಅ. 25): ಕೊರೋನಾ ಭೀತಿ ನಡುವೆಯೂ ನಗರದಾದ್ಯಂತ ನಾಡಹಬ್ಬ ದಸರಾ ಭಾಗವಾಗಿರುವ ಆಯುಧಪೂಜೆ ಹಾಗೂ ವಿಜಯದಶಮಿ ಆಚರಣೆಗೆ ಭರ್ಜರಿ ಸಿದ್ಧತೆ ನಡೆದಿದೆ. ಹಬ್ಬದ ಮುನ್ನಾ ದಿನವಾದ ಶನಿವಾರ ಮಾರುಕಟ್ಟೆಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿತ್ತು. ಜನರು ರೋಗವನ್ನು ಲೆಕ್ಕಿಸದೆ ಖರೀದಿಯಲ್ಲಿ ನಿರತರಾಗಿದ್ದರು.

"

ಕೋವಿಡ್‌ನಿಂದಾಗಿ ಈ ಬಾರಿ ಕೆಲವರು ಸರಳ ಮತ್ತು ಸಾಂಪ್ರದಾಯಿಕವಾಗಿ ನಾಡಹಬ್ಬ ಆಚರಣೆಗೆ ಸಿದ್ಧತೆ ನಡೆಸಿದ್ದಾರೆ. ಭಾನುವಾರ ಆಯುಧಪೂಜೆ ಹಿನ್ನೆಲೆಯಲ್ಲಿ ವಾಹನ, ಮಳಿಗೆ, ಯಂತ್ರಗಳ ಪೂಜೆಗಾಗಿ ಸ್ವಚ್ಛಗೊಳಿಸಿ ತಯಾರಿ ನಡೆಸಿದರು. ಸೋಮವಾರ ವಿಜಯದಶಮಿ ಆಚರಿಸಲು ಸಿದ್ಧತೆಗಳು ಮುಂದುವರಿದಿವೆ. ಹಲವೆಡೆ ವರ್ಚುಯಲ್‌ ದುರ್ಗಾ ಪೂಜೆ ಹಾಗೂ ಸಂಗೀತೋತ್ಸವಗಳು ಕೂಡ ಆಯೋಜನೆಗೊಂಡಿವೆ.

ಎಲ್ಲೆಡೆ ದಸರಾ ಹಬ್ಬ ಕಳೆಗಟ್ಟಿದ್ದು, ಭಾನುವಾರ ಆಯುಧ ಪೂಜೆ, ನಾಡಿದ್ದು ವಿಜಯ ದಶಮಿ ಇರುವ ಹಿನ್ನೆಲೆ ಜನರು ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದ ದೃಶ್ಯ ಶನಿವಾರ ಕಂಡು ಬಂತು. ಕೊರೋನಾ ಮರೆತು ಮುಂಜಾನೆಯಿಂದಲೇ ಗ್ರಾಹಕರು ಖರೀದಿಗಾಗಿ ಮಾರುಕಟ್ಟೆಗೆ ಲಗ್ಗೆ ಹಾಕಿದ್ದರು. ಶನಿವಾರ ತಡರಾತ್ರಿಯವರೆಗೂ ವ್ಯಾಪಾರ ವಹಿವಾಟು ಬಿರುಸಿನಿಂದ ಸಾಗಿತು. ನಗರದ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ಆಯುಧ ಪೂಜೆ ಸಾಮಗ್ರಿಗಳನ್ನು ಮಾರಾಟ ಮಾಡಲೆಂದೇ ಅನೇಕರು ತಾತ್ಕಾಲಿಕ ಅಂಗಡಿ ತೆರೆದು ವ್ಯಾಪಾರ ನಡೆಸಿದರು.

ಆಯುಧಪೂಜೆಗೆ ರಂಗೇರಿದ ಮಾರುಕಟ್ಟೆ: ಕೊರೋನಾ ಭೀತಿ ನಡುವೆಯೂ ಹಬ್ಬಕ್ಕೆ ಸಿದ್ಧತೆ ಜೋರು

ಕೆ.ಆರ್‌.ಮಾರುಕಟ್ಟೆಯಲ್ಲಿ ಕಬ್ಬು ಒಂದಕ್ಕೆ 100 ರು., ಜೋಡಿ ಕಬ್ಬು 150-200 ರು., ಬೂದಕುಂಬಳ ಗಾತ್ರಕ್ಕೆ ಆಧರಿಸಿ 30ರಿಂದ 50 ರು., ಬಾಳೆಕಂಬ 150-200 ರು.ಗೆ ಮಾರಾಟವಾಯಿತು. ಕೆ.ಆರ್‌.ಮಾರುಕಟ್ಟೆ, ಚಿಕ್ಕಪೇಟೆ, ಗಾಂಧಿಬಜಾರ್‌, ಯಶವಂತಪುರ, ಅವೆನ್ಯೂ ರಸ್ತೆ, ಜಯನಗರ, ಮಲ್ಲೇಶ್ವರಂ ಸೇರಿದಂತೆ ಎಲ್ಲಾ ಮಾರುಕಟ್ಟೆಗಳು ಜನರಿಂದ ತುಂಬಿ ಹೋಗಿದ್ದವು. ಕೋವಿಡ್‌ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ವರ್ತಕರು, ಗ್ರಾಹಕರು ವ್ಯಾಪಾರದಲ್ಲಿ ಬ್ಯುಸಿಯಾಗಿದ್ದರು.

ವಿಶೇಷ ಪೂಜೆ:

ಆಯುಧಪೂಜೆ, ವಿಜಯದಶಮಿ ಅಂಗವಾಗಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಲಿದೆ. ಈಗಾಗಲೇ ನಾನಾ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆದಿದ್ದು, ಭಾನುವಾರ ಮುಂಜಾನೆಯಿಂದಲೇ ನಾನಾ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಮಹಾಲಕ್ಷ್ಮೀಪುರಂನ ಅವನಿ ಶೃಂಗೇರಿ ಶಾರದಾ ದೇವಾಲಯ, ಮಲ್ಲೇಶ್ವರಂನ ಗಂಗಮ್ಮ ದೇವಿ ದೇವಸ್ಥಾನ, ರಾಜ ರಾಜೇಶ್ವರಿನಗರದ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನ, ಗವಿ ಗಂಗಾಧರೇಶ್ವರ, ಬನಶಂಕರಿಯ ಬನಶಂಕರಿ ಅಮ್ಮನವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ನವರಾತ್ರಿ ಅಂಗವಾಗಿ ವಿಶೇಷ ಪೂಜೆ ಮತ್ತು ಅಲಂಕಾರ ನಡೆಯಲಿವೆ.

ಸರಳವಾಗಿ ಆಚರಣೆ...

ಕೋವಿಡ್‌ ಹಿನ್ನೆಲೆ ಬಹುತೇಕರು ಸರಳವಾಗಿ ಸಾಂಪ್ರದಾಯಿಕ ಹಬ್ಬ ಆಚರಿಸಲು ಸಜ್ಜಾಗಿದ್ದಾರೆ. ಹತ್ತಾರು ವರ್ಷಗಳಿಂದ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದ ಹಲವು ಸಂಘ ಸಂಸ್ಥೆಗಳು ಈ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಬದಿಗೊತ್ತಿ ಸರಳವಾಗಿ ಆಚರಿಸುತ್ತಿವೆ. ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೆತ್ರದ ನಂದಿನಿ ಲೇಔಟ್‌ನಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾದೇವಿ ಪ್ರತಿಷ್ಠಾಪಿಸಿ, ಹೋಮ, ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜೆ.ಸಿ. ನಗರದ ದಸರಾ ಉತ್ಸವ ಸಮಿತಿ ವತಿಯಿಂದ ಹೂವಿನ ಪಲ್ಲಕ್ಕಿ ಉತ್ಸವವೂ ಸರಳವಾಗಿ ನಡೆಯಲಿದೆ. ಸೋಮವಾರ ಬನ್ನಿ ಮರ ಕಡಿಯುವ ಆಚರಣೆ ಸಾಂಪ್ರದಾಯಿಕವಾಗಿ ನೆರವೇರಲಿದೆ. ಜೆ.ಸಿ.ನಗರದ ಮೈಸೂರು ಅರಸರ ಕಾಲದ ಮಹೇಶ್ವರಮ್ಮ ದೇವಸ್ಥಾನದಲ್ಲಿಯೂ ಸರಳವಾಗಿ ವಿಜಯದಶಮಿ ಆಚರಣೆಗೆ ಸಿದ್ಧತೆಯಾಗಿದೆ.

ಬೆಂಗಳೂರು ದುರ್ಗಾ ಪೂಜಾ ಕಮಿಟಿ, ಬೆಂಗಾಲಿ ಅಸೋಸಿಯೇಷನ್‌ಗಳು ದುರ್ಗಾ ಪೂಜೆಯನ್ನು ಪರಿಸರ ಸ್ನೇಹಿಯಾಗಿ ಸಂಭ್ರಮದಿಂದ ನಡೆಸುತ್ತಿದ್ದಾರೆ. ಕೋರಮಂಗಲ, ಆರ್‌.ಟಿ. ನಗರ, ಸಂಜಯನಗರ, ಹೆಬ್ಬಳ, ಹಲಸೂರು ಸೇರಿದಂತೆ ನಗರದ 120 ಕಡೆ ಬೆಂಗಾಲಿ ಸಮುದಾಯದವರು ನವರಾತ್ರಿ ಆಚರಿಸುತ್ತಿದ್ದಾರೆ. ನಾವು ಪ್ರತಿಷ್ಠಾಪಿಸಿರುವ ದುರ್ಗಾ ಮೂರ್ತಿ, ಮರ, ಪೇಪರ್‌, ಬೇಬಿ ಆಯಿಲ್‌ ಇತ್ಯಾದಿಗಳನ್ನು ಬಳಸಿ ನಿರ್ಮಿಸಿದ್ದೇವೆ. ಹೀಗಾಗಿ ಈ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸದೆ ಚಿತ್ರಕಲಾ ಪರಿಷತ್‌ನಲ್ಲಿ ಪ್ರದರ್ಶನಕ್ಕಿಡುತ್ತೇವೆ ಎಂದು ಬೆಂಗಳೂರು ದುರ್ಗಾ ಪೂಜಾ ಕಮಿಟಿಯ ಮುಖ್ಯಸ್ಥೆ ರುನೊ ರಾಯ್‌ ತಿಳಿಸಿದರು.
 

Follow Us:
Download App:
  • android
  • ios