ಬೆಂಗಳೂರು ನಗರದ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. ನಗರದ ರಾಜಾಜಿನಗರ 5ನೇ ಬ್ಲಾಕ್‌ನಲ್ಲಿರುವ ಎನ್‌ಪಿಎಸ್ ಶಾಲೆಗೆ ಅನಾಮಧೇಯ ವ್ಯಕ್ತಿಯಿಂದ ಶಾಲೆ ಆಡಳಿತ ಮಂಡಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ.

ಬೆಂಗಳೂರು (ಜ.06): ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದರಿಂದ ಶಿಕ್ಷಕರು, ಪೋಷಕರು, ಮಕ್ಕಳು ಆತಂಕಕ್ಕೆ ಒಳಗಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಪರಿಶೀಲನೆ ವೇಳೆ ಅವೆಲ್ಲ ಹುಸಿ ಬಾಂಬ್ ಕರೆ ಎನ್ನುವುದು ಸಾಬೀತಾಗಿತ್ತು. ಇದೀಗ ಬೆಂಗಳೂರು ನಗರದ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಬಂದಿದೆ. 

ಹೌದು! ನಗರದ ರಾಜಾಜಿನಗರ 5ನೇ ಬ್ಲಾಕ್‌ನಲ್ಲಿರುವ ಎನ್‌ಪಿಎಸ್ ಶಾಲೆಗೆ ಅನಾಮಧೇಯ ವ್ಯಕ್ತಿಯಿಂದ ಶಾಲೆ ಆಡಳಿತ ಮಂಡಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಶಾಲಾ ಮಂಡಳಿ ಮೇಲ್‌ ಬಂದ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಬಸವೇಶ್ವರ ನಗರ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿ, ಮಕ್ಕಳನ್ನ ಹೊರಗೆ ಕಳುಹಿಸಿ ‌ಪರಿಶೀಲನೆ ನಡೆಸಿದ್ದಾರೆ. ಇಂದು 10ನೇ ತರಗತಿಯ ಪೂರ್ವಭಾವಿ ಪರೀಕ್ಷೆ‌ ನಡೆಯುತ್ತಿತ್ತು. 

Bengaluru: ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಬೆದರಿಕೆ ಹಾಕಿದ್ದ ವಿದ್ಯಾರ್ಥಿ ಜೈಲು ಪಾಲು

ಆದರೆ ಬಾಂಬ್ ಬೆದರಿಕೆ ಬಂದಿದ್ದರಿಂದ ಡಾಗ್ ಸ್ಕ್ವಾಡ್ ಹಾಗೂ ಬಾಂಬ್ ನಿಷ್ಕ್ರಿಯ ದಳದ ಜೊತೆ ತಕ್ಷಣ ಪೊಲೀಸರು ಶಾಲೆಗೆ ತೆರಳಿದ್ದು, ಮಕ್ಕಳನ್ನ ಶಾಲೆಯಿಂದ‌ ಹೊರಗೆ ಕಳುಹಿಸಿದ್ದಾರೆ. ವಿಜಯನಗರ ಎಸಿಪಿ ರವಿ ನೇತೃತ್ವದ ತಂಡ ಶಾಲೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ವಿಷಯ ತಿಳಿದ ಮಕ್ಕಳ ಪೋಷಕರು ಶಾಲೆ ಬಳಿ ಆಗಮಿಸುತ್ತಿದ್ದಾರೆ.