* ಬೆಂಗಳೂರಿಗೆ ಬಂದವರು ಇಲ್ಲೇ ನೆಲೆಸುತ್ತಿದ್ದಾರೆ * ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುವ ನಗರವಾಗಿ ಬೆಂಗಳೂರು ರೂಪುಗೊಂಡಿದೆ* ಪರಿಸರಕ್ಕೆ ಹಾನಿ ಉಂಟು ಮಾಡದೇ ಅಭಿವೃದ್ಧಿ ಸಾಧಿಸುವ ಸವಾಲು ನಮ್ಮ ಮುಂದಿದೆ
ಬೆಂಗಳೂರು(ಏ.30): ಬೆಂಗಳೂರು(Bengaluru) ನಗರದ ಜನಸಂಖ್ಯೆ(Population) ಕಳೆದ ಹತ್ತು ವರ್ಷದಲ್ಲಿ 50 ಲಕ್ಷ ಹೆಚ್ಚಾಗಿದೆ. ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆಯುವ ನಗರವಾಗಿ ಬೆಂಗಳೂರು ರೂಪುಗೊಂಡಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಅತ್ಯವಶ್ಯಕ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ(Gaurav Gupta) ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಸಿ ಸ್ಟೆಪ್, ಕ್ಯಾಫ್ಸ್, ಬ್ಲೂಂಬಗ್‌ರ್ ಫಿಲಾಂಥ್ರೋಪಿಸ್ ಮತ್ತು ಶಕ್ತಿ ಸುಸ್ಥಿರ ಇಂಧನ ಪ್ರತಿಷ್ಠಾನ ಆಯೋಜಿಸಿದ್ದ ದತ್ತಾಂಶ ಪ್ರಸರಣ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊರಮಾವು, ದೊಡ್ಡಬಿದಿರಕಲ್ಲು, ಬೆಳ್ಳಂದೂರು ಮುಂತಾದ ಪ್ರದೇಶಗಳು ಅತಿ ವೇಗವಾಗಿ ಬೆಳೆಯುತ್ತಿದೆ. ಉದ್ಯಮಗಳನ್ನು ಸೆಳೆಯಲು ದಕ್ಷಿಣ ಭಾರತದ(Soth India) ನಗರಗಳ ಮಧ್ಯೆ ಪೈಪೋಟಿ ಇದ್ದರೂ ಬೆಂಗಳೂರಿಗೆ ಬಂದವರು ಇಲ್ಲೇ ನೆಲೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡದೇ ಅಭಿವೃದ್ಧಿ ಸಾಧಿಸುವ ಸವಾಲು ನಮ್ಮ ಮುಂದಿದೆ ಎಂದು ಹೇಳಿದರು.
ದೇಶದಲ್ಲಿ ಜನಸಂಖ್ಯೆ ಸ್ಪೋಟ ಮುಂದುವರಿದಿದೆ: ಥಾವರ್ ಚಂದ್ ಗೆಹ್ಲೋಟ್
ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಇನ್ನಷ್ಟೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಬೇಕಿದೆ. ಇದರೊಂದಿಗೆ ತಂತ್ರಜ್ಞಾನದ ಪ್ರಗತಿಯೊಂದಿಗೆ ಹವಾ ನಿಯಂತ್ರಣ ವ್ಯವಸ್ಥೆ, ರೆಫ್ರಿಜರೇಟರ್ ಮತ್ತು ಹೊಸ ವಾಹನಗಳಿಂದಾಗುವ ಮಾಲಿನ್ಯ ಕಡಿಮೆ ಆಗುತ್ತಿದೆ. ರಸ್ತೆ ಸ್ವಚ್ಛಗೊಳಿಸಲು ವ್ಯಾಕ್ಯೂಮ್ ಸ್ವೀಪರ್‌ನ ಬಳಕೆ ಹೆಚ್ಚಬೇಕು ಎಂದು ಹೇಳಿದರು.
ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಜಯ್ ಮೋಹನ್ ರಾಜ್ ಮಾತನಾಡಿ, ನಾಗರಿಕರು ಇಂಗಾಲ ತಟಸ್ಥರಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು. ವಾಯು ಮಾಲಿನ್ಯ(Air pollution) ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗುವ ನಮ್ಮ ವರ್ತನೆಗಳ ಬಗ್ಗೆ ತಪ್ಪಿತಸ್ಥ ಭಾವನೆ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ಶಾಂತ್ ಎ. ತಿಮ್ಮಯ್ಯ, ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಸಿ ಸ್ಟೆಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜೈ ಅಸುಂಡಿ, ಹಿರಿಯ ವಿಜ್ಞಾನಿ ಡಾ. ಪ್ರತಿಮಾ ಸಿಂಗ್, ಬ್ಲೂಂಬಗ್‌ರ್ ಫಿಲಾಂಥ್ರೋಪಿಸ್‌ನ ಪೂಜಾ ತಿವಾರಿ ಪಾಲ್ಗೊಂಡಿದ್ದರು.
