ಬೆಂಗಳೂರು [ಜು.29]: ಅಪರಾಧ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಡಿ ನಗರ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 500 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, 500ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು, ಕಾನೂನು ಸುವ್ಯವಸ್ಥೆ ಹಾಗೂ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಜಂಟಿಯಾಗಿ ಶನಿವಾರ ರಾತ್ರಿಯಿಡಿ ವಿಶೇಷ ಕಾರ್ಯಾಚರಣೆ ನಡೆಸಿದರು.

ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಅವರ ನೇತೃತ್ವದಲ್ಲಿ ಎಲ್ಲ ವಲಯದ ಡಿಸಿಪಿಗಳು ಹಾಗೂ ಸಿಸಿಬಿ ಡಿಸಿಪಿ ಗಿರೀಶ್‌ ಸೇರಿದಂತೆ ಎಲ್ಲಾ ಠಾಣೆಯ ಇನ್‌ಸ್ಪೆಕ್ಟರ್‌ಗಳು ಬೆಳಗಿನ ಜಾವ ನಾಲ್ಕು ಗಂಟೆವರೆಗೆ ಕಾರ್ಯಾಚರಣೆಯಲ್ಲಿ ನಡೆಸಿದ್ದಾರೆ.

ಈ ಬಾರಿ ನಗರದೆಲ್ಲೆಡೆ ಸುಮಾರು 120ಕ್ಕೂ ಹೆಚ್ಚು ಪ್ರಮುಖ ಪ್ರದೇಶಗಳಲ್ಲಿ ನಾಕಾಬಂದಿ ಹಾಕಿ ತಪಾಸಣೆ ನಡೆಸಲಾಯಿತು. ವಿಶೇಷವಾಗಿ ಹೊಂಡಾ ಆಕ್ವೀವಾ, ಪಲ್ಸರ್‌ ಬೈಕ್‌ಗಳನ್ನು ತಡೆದು ತಪಾಸಣೆ ನಡೆಸಿದರು. ಈ ವೇಳೆ ಅನುಮಾನಾಸ್ಪದವಾಗಿ ವರ್ತಿಸಿದ ವ್ಯಕ್ತಿಗಳು ಹಾಗೂ ಅವರ ವಾಹನಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ಯಲಾಯಿತು. ನಂತರ ಅವರ ಪೂರ್ವಾಪರ ವಿಚಾರಣೆ ನಡೆಸಿ, ವಾಹನಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಬಿಡುಗಡೆ ಮಾಡಿದರು.