Asianet Suvarna News Asianet Suvarna News

ಕೆನಡಾದಿಂದ ತರಿಸಿ ಇದನ್ನ ಅಕ್ರಮವಾಗಿ ಆನ್‌ಲೈನ್‌ನಲ್ಲಿ ಮಾರ್ತಾರೆ!

ವಿದೇಶಗಳಿಂದ ಇದನ್ನ ತರಿಸಿ ಅಕ್ರಮವಾಗಿ ಆನ್ ಲೈನ್ ನಲ್ಲಿ ಮಾರಾಟ ಮಾಡ್ತಾರೆ. ಉಂತಹ ಬೃಹತ್ ಜಾಲ ಒಂದನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. 

Bengaluru police bust international drug racket
Author
Bengaluru, First Published Nov 30, 2019, 9:02 AM IST

ಬೆಂಗಳೂರು [ನ.30]:  ಆನ್‌ಲೈನ್‌ ಮೂಲಕ ಸಾರ್ವಜನಿಕರಿಗೆ ದುಬಾರಿ ಮೌಲ್ಯದ ‘ವಿದೇಶಿ ಬ್ರ್ಯಾಂಡ್‌’ ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಷ್ಟ್ರೀಯ ಡ್ರಗ್ಸ್‌ ಜಾಲದ ಪೂರೈಕೆದಾರ ಸೇರಿ ಇಬ್ಬರನ್ನು ಸೆರೆಹಿಡಿದ ಸಿಸಿಬಿ ಪೊಲೀಸರು, 1 ಕೋಟಿ ರು. ಮೌಲ್ಯದ ವಸ್ತು ಜಪ್ತಿ ಮಾಡಿದ್ದಾರೆ.

ಸದ್ದುಗುಂಟೆಪಾಳ್ಯ ಸಮೀಪದ ತಾವರೆಕೆರೆ ರಸ್ತೆಯ ನಿವಾಸಿ ಅತೀಫ್‌ ಸಲೀಂ ಹಾಗೂ ರೋಹಿತ್‌ ದಾಸ್‌ ಬಂಧಿತರಾಗಿದ್ದು, ಆರೋಪಿಗಳಿಂದ .1 ಕೋಟಿ ಮೌಲ್ಯದ 2.75 ಕೆ.ಜಿ. ಹೈಡ್ರೋ ಗಾಂಜಾ, ಸ್ಕೋಡಾ ಕಾರು ಹಾಗೂ ಕೆಟಿಎಂ ಬೈಕ್‌ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆ್ಯಪ್‌ ಮೂಲಕವೇ ವ್ಯವಹಾರ:  ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾತಕ ಲೋಕದ ಸಂಪರ್ಕ ಸೇತುವೆ ಎಂಬ ಕುಖ್ಯಾತಿ ಪಡೆದಿರುವ ‘ಡಾರ್ಕ್’ ನೆಟ್‌ನಲ್ಲಿ ಸಲೀಂ, ಡ್ರಗ್ಸ್‌ ಜಾಲದ ಹುಡುಕಾಟ ನಡೆಸಿದಾಗ ಕೆನಡಾ ದೇಶದ ಪೂರೈಕೆದಾರನ ಪರಿಚಯವಾಗಿದೆ. ಕ್ರಮೇಣ ಅವರ ನಡುವೆ ವ್ಯವಹಾರಿಕ ಸಂಬಂಧ ಬೆಳೆದಿದೆ. ನಂತರ ಆ್ಯಪ್‌ ಮುಖಾಂತರ ಪರಸ್ಪರ ಸಂಪರ್ಕ ಇಟ್ಟುಕೊಂಡು ಗಾಂಜಾ ಮಾರಾಟವನ್ನು ಆರೋಪಿಗಳು ಆರಂಭಿಸಿದ್ದಾರೆ. ಅದರಂತೆ ಹೈಡ್ರೋ ಗಾಂಜಾ, ಗಾಂಜಾ ಚಾಕೋಲೆಟ್‌ ಹಾಗೂ ಆಶಿಷ್‌ ಆಯಿಲ್‌ಗಳಿರುವ ಇ-ಸಿಗರೆಟ್‌ ಟ್ಯೂಬ್‌ಗಳನ್ನು ಕೆನಾಡದಿಂದ ಭಾರತಕ್ಕೆ ತರಿಸಿಕೊಂಡು ಸಲೀಂ, ಅವುಗಳನ್ನು ಕೆನಡಾ ದೇಶದ ವ್ಯಕ್ತಿ ಸೂಚನೆ ಮೇರೆಗೆ ಗ್ರಾಹಕರಿಗೆ ಪೂರೈಕೆ ಮಾಡುತ್ತಿದ್ದ ಎಂದು ಆಯುಕ್ತರು ತಿಳಿಸಿದರು.

ಅಮೆಜಾನ್‌ ಪೊಟ್ಟಣಗಳಲ್ಲಿ ಡ್ರಗ್ಸ್‌:  ವಿದೇಶದಿಂದ ಬಂದಿಳಿದ ಡ್ರಗ್ಸ್‌ಅನ್ನು ಸಲೀಂ, ತರುವಾಯ ಅಮೆಜಾನ್‌ ಪೊಟ್ಟಣಗಳಲ್ಲಿ ತುಂಬಿ ಡಿಟಿಡಿಸಿ ಕೊರಿಯರ್‌ ಮುಖಾಂತರ ಗ್ರಾಹಕರಿಗೆ ಪೂರೈಸುತ್ತಿದ್ದ. ಈ ವ್ಯವಹಾರದಲ್ಲಿ ಸಲೀಂಗೆ ಶೇ.25ರಷ್ಟುಕಮಿಷನ್‌ ರೂಪದಲ್ಲಿ ಗಾಂಜಾ ಲಭಿಸಿತ್ತು. ಆ ಗಾಂಜಾವನ್ನು ಆತ, ಪ್ರತ್ಯೇಕ ಆ್ಯಪ್‌ ಮೂಲಕ ತನ್ನ ಗ್ರಾಹಕರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಹೈಡ್ರೋ ಗಾಂಜಾವು ಪ್ರತಿ ಗ್ರಾಂಗೆ .3 ಸಾವಿರದಿಂದ .4 ಸಾವಿರ ಮೌಲ್ಯವಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಹಾಲಿನ ಪೌಡರ್‌ನಲ್ಲಿ ಗಾಂಜಾ ಆಮದು

ಕೆನಡಾ ದೇಶದಿಂದ ಭದ್ರತಾ ಪಡೆಗಳ ಕಣ್ತಪ್ಪಿಸಿ ಸಲೀಂ, ಭಾರತಕ್ಕೆ ಕೋಟ್ಯಂತರ ಮೌಲ್ಯದ ಗಾಂಜಾವನ್ನು ತರಿಸಿಕೊಳ್ಳುತ್ತಿದ್ದ. ಕೆನಡಾದ ದೇಶದ ಗಾಂಜಾ ಪೂರೈಕೆದಾರ, ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್‌ ಅಧಿಕಾರಿಗಳಿಗೆ ಗೊತ್ತಾಗದಂತೆ ಗಾಂಜಾವನ್ನು ವ್ಯಾಕ್ಯೂಂ ಪೊಟ್ಟಣದಲ್ಲಿ ತುಂಬಿ ಅದನ್ನು ಹಾಲು ಮತ್ತು ಚಾಕೋಲೆಟ್‌ ಪೌಡರ್‌ಗಳ ಡಬ್ಬದಲ್ಲಿ ಹುದುಗಿಸಿಟ್ಟು ಕೊರಿಯರ್‌ ಮಾಡುತ್ತಿದ್ದ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ದಾಳಿ ವೇಳೆ ಸಲೀಂ ಮನೆಯಲ್ಲಿ ಹಾಲಿನ ಡಬ್ಬಿಗಳಲ್ಲಿ ಅಡಗಿಸಿಟ್ಟಿದ್ದ 14 ಗಾಂಜಾ ಪ್ಯಾಕೇಟ್‌ಗಳಲ್ಲಿ 2.75 ಕೆ.ಜಿ., 12 ಗಾಂಜಾ ಚಾಕೋಲೆಟ್‌, ಇ.ಸಿಗರೆಟ್‌ನಲ್ಲಿ ಉಪಯೋಗಿಸುವ ಹ್ಯಾಶಿಸ್‌ ಆಯಿಲ್‌ಗಳನ್ನು ಒಳಗೊಂಡ ವೀಡ್‌ ಫ್ಲೆವರ್‌ನ 100 ಸಿಗರೆಟ್‌ಗಳ ಟ್ಯೂಬ್‌ಗಳನ್ನು ಜಪ್ತಿ ಮಾಡಲಾಗಿದೆ.

ಇಂಟರ್‌ನೆಟ್‌ ಕಾಲ್‌ ಬಳಕೆ

ಗಾಂಜಾ ದಂಧೆಯನ್ನು ಸಲೀಂ ಇಂಟರ್‌ನೆಟ್‌ ಮೂಲಕವೇ ವ್ಯವಹರಿಸಿದ್ದಾನೆ. ಪೂರೈಕೆ ಮತ್ತು ಖರೀದಿಯನ್ನು ಆನ್‌ಲೈನ್‌ ಮುಖಾಂತರವೇ ನಡೆಸಿರುವ ಆತ, ತನ್ನ ಗ್ರಾಹಕರ ಜೊತೆ ಇಂಟರ್‌ನೆಟ್‌ ಕಾಲ್‌ನಲ್ಲೇ ಮಾತುಕತೆ ನಡೆಸಿದ್ದಾನೆ. ಹೀಗಾಗಿ ಆತನ ಸಂಪರ್ಕದಲ್ಲಿದ್ದ ಸ್ಥಳೀಯರ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹೊಸಬರಿಗೆ ಚಾಕೋಲೆಟ್‌ ಫ್ಲೆವರ್‌:  ಹೊಸ ಗ್ರಾಹಕರಿಗೆ ಗಾಂಜಾ ರುಚಿ ಹಚ್ಚಿಸಲು ವಿವಿಧ ಫ್ಲೆವರ್‌ನ ಚಾಕೋಲೆಟ್‌ಗಳನ್ನು ಸಲೀಂ ಪೂರೈಸುತ್ತಿದ್ದ.

ಚಹಾ ಮಾರಾಟಗಾರ ದಂಧೆಕೋರ:  ಆರೋಪಿ ಸಲೀಂ ಮೂಲತಃ ಕೊಲ್ಕತ್ತಾದವನಾಗಿದ್ದು, ಐದು ತಿಂಗಳಿಂದ ಸದ್ದುಗುಂಟೆಪಾಳ್ಯದಲ್ಲಿ ನೆಲೆಸಿದ್ದ. 2017ರಲ್ಲಿ ಗಾಂಜಾ ಮಾರಾಟ ಕೃತ್ಯದಲ್ಲಿ ಕೊಲ್ಕತ್ತಾ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರ ಬಂದ ಆತ, ತನ್ನ ಕಾರ್ಯ ಕ್ಷೇತ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಹಾ ಪುಡಿ ಮಾರಾಟಗಾರರಾಗಿದ್ದ ಸಲೀಂ ತಂದೆ ಅವರಿಗೆ ವ್ಯಾಪಾರದಲ್ಲಿ ನಷ್ಟವಾಯಿತು. ಆಗ ತಾನು ಹಣ ಸಂಪಾದನೆಗೆ ಬೇರೆ ವ್ಯವಹಾರ ನಡೆಸುವುದಾಗಿ ತಂದೆಗೆ ಹೇಳಿದ ಆರೋಪಿ, ಶ್ರೀಮಂತನಾಗಲು ಗಾಂಜಾ ದಂಧೆ ಆರಂಭಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಕ್ಕಳಿಗೆ ಬುದ್ಧಿವಂತಿಕೆ ವೃದ್ಧಿಸುತ್ತದೆ ಎಂದು ಹೇಳಿ ಪೋಷಕರಿಗೆ ಆರೋಪಿಗಳು ಚಾಕೋಲೆಟ್‌ ಗಾಂಜಾ ಮಾರುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಕೊರಿಯರ್‌ ಸಂಸ್ಥೆಗಳಿಗೂ ಸಹ ಸಾಗಾಣಿಕೆ ವಸ್ತುಗಳ ಮೇಲೆ ನಿಗಾವಹಿಸುವಂತೆ ಸೂಚಿಸುತ್ತೇವೆ.

-ಭಾಸ್ಕರ್‌ ರಾವ್‌, ಪೊಲೀಸ್‌ ಆಯುಕ್ತ, ಬೆಂಗಳೂರು.

ನವೆಂಬರ್ 30ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Follow Us:
Download App:
  • android
  • ios