ಬೆಂಗಳೂರು [ಆ.23]: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಯುವತಿ ಕೊಲೆ ಪ್ರಕರಣವನ್ನು ಬಾಗಲೂರು ಪೊಲೀಸರು ಬಯಲು ಮಾಡಿದ್ದಾರೆ.

ಕೊಲೆ ಆರೋಪಿ ನಾಗೇಶ್ [22] ಎನ್ನುವಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಬಂಧಿತ ಆರೋಪಿ ಕ್ಯಾಬ್ ಚಾಲಕ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಜುಲೈ 31ರಂದು ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಕಾಡಯರಪ್ಪನಹಳ್ಳಿಯ ಕಾಲು ದಾರಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಬಾಗಲೂರು ಪೊಲೀಸರು, ಇದೀಗ ಯುವತಿಯ ಗುರುತು ಹಾಗೂ ಆಕೆಯ ಹಿನ್ನೆಲೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ಮಾಡಿ ಚಿನ್ನ ದೋಚಿದ, ಕೊನೆಗೆ ತಾನೇ ಪ್ರಾಣ ಬಿಟ್ಟ..!

ಕೊಲ್ಕತ್ತಾ ಮೂಲದ ಮಾಡೆಲಿಂಗ್ ಪೂಜಾ ಎಂದು ಗುರುತಿಸಿದ್ದು, ಈಕೆ ಮಾಡೆಲಿಂಗ್‌ ಕ್ಷೇತ್ರದ ಕಾರ್ಯಕ್ರಮಗಳ ಆಯೋಜಕಿಯಾಗಿದ್ದಳು ಎನ್ನುವ ಸಂಗತಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಸುಳಿವು ಕೊಟ್ಟ ಟವರ್ ಸಿಗ್ನಲ್
ಈ ಯುವತಿ ಕೊಲೆಯಾದ ಘಟನಾ ಸ್ಥಳದಲ್ಲಿ ಯಾವುದೇ ರೀತಿಯ ಸಾಕ್ಷ್ಯ ಅಥವಾ ಸುಳಿವು ಆಗಲಿ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ತನಿಖೆ ನಡೆಸಲು ಪೊಲೀಸರು ಹರಸಾಹಸವೇ ಪಟ್ಟಿದ್ದಾರೆ. 

ಕೊನೆಗೆ ಈ ಪ್ರಕರಣದ ತನಿಖೆಯ ಜಾಡುಹಿಡಿದು ಹೊರಟ ಪೊಲೀಸರು, ಕೊಲೆಯಾದ ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಕೊಲೆಯಾದ ಯುವತಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ ಪತ್ತೆಯಾಗಿದೆ.

ಇದೇ ಸುಳಿವು ಅಧರಿಸಿ ತನಿಖೆ ಚುರುಕುಗೊಳಿಸಿದಾಗ, ಆಕೆ ಕೊಲ್ಕತ್ತಾ ಮೂಲದವಳಾಗಿದ್ದು,  ಮಾಡೆಲಿಂಗ್‌ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಆಯೋಜನೆ ಮಾಡುವ ಕೆಲಸ ನಿರ್ವಹಿಸುತ್ತಿದ್ದರು ಎಂದು ಮಾಹಿತಿ ಸಿಕ್ಕಿದೆ. 

ಘಟನೆ ವಿವರ
ಮಾಡೆಲಿಂಗ್‌ ಕಾರ್ಯಕ್ರಮ ನಿಮಿತ್ತ ಕೊಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸಿದ್ದು, ವಿಮಾನ ನಿಲ್ದಾಣದಿಂದ ಕ್ಯಾಬ್ ನಲ್ಲಿ ಹೋಗುವಾಗ ಜುಲೈ 31 ಮುಂಜಾನೆ 5.30ಕ್ಕೆ ಕಲ್ಕತ್ತಾಗೆ ಪ್ಲೈಟ್ ಇರತ್ತೆ ಪಿಕ್ ಮಾಡಲು ಬನ್ನಿ ಎಂದು ಕ್ಯಾಬ್ ಚಾಲಕ ನಾಗೇಶನಿಗೆ ಹೇಳಿರುತ್ತಾಳೆ.

 ಹೀಗಾಗಿ ಆರೋಪಿ ನಾಗೇಶ್  ಆಕೆಯ ಬಳಿ ಹಣ ದೋಚುವ ಪ್ಲಾನ್ ಮಾಡಿದ್ದ. ಪ್ಲಾನ್ ನಂತೆ ಹಣ ದೋಚಲು ಮುಂದಾದ ವೇಳೆ ವಿರೋಧಿಸಿದ ಪೂಜಾಳನ್ನ ಜಾಕ್ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ.ಆ ವೇಳೆ ಡ್ರೈವರ್ ಕೈಗೆ ಸಿಕ್ಕಿದ್ದು ಕೇವಲ 500 ರು. ಮಾತ್ರ ಎಂದು ಈಶಾನ್ಯ ವಿಭಾಗ ಡಿಸಿಪಿ ಭೀಮಾಶಂಕರ್‌ ಎಸ್‌.ಗುಳೇದ್‌ ಮಾಹಿತಿ ನೀಡಿದರು.