ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!
ದೀಪಾವಳಿ ಹಬ್ಬದ ನಂತರ ಬೆಂಗಳೂರಿಗೆ ಹಿಂತಿರುಗಿದ ಪ್ರಯಾಣಿಕರು ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಮೆಟ್ರೋಗೆ ಮೊರೆ ಹೋಗಿದ್ದು, ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸುಮಾರು 1 ಕಿ.ಮೀ ಉದ್ದದ ಸರತಿ ಸಾಲು ಕಂಡುಬಂದಿದೆ. ಮೆಟ್ರೋ ಮಾರ್ಗ ವಿಸ್ತರಣೆ ಮಾಡದ ರಾಜಕಾರಣಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.04): ದೀಪಾವಳಿ ಹಬ್ಬದ ನಂತರ ಬೆಂಗಳೂರಿಗೆ ಹಿಂತಿರುಗಿದ ಪ್ರಯಾಣಿಕರು ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಮೆಟ್ರೋಗೆ ಮೊರೆ ಹೋಗಿದ್ದು, ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಸುಮಾರು 1 ಕಿ.ಮೀ ಉದ್ದದ ಸರತಿ ಸಾಲು ಕಂಡುಬಂದಿದೆ. ಮೆಟ್ರೋ ಮಾರ್ಗ ವಿಸ್ತರಣೆ ಮಾಡದ ರಾಜಕಾರಣಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ 22ಕ್ಕೂ ಅದಿಕ ಉತ್ತರ ಭಾಗದ ಜಿಲ್ಲೆಗಳಿಗೆ ಹಾಗೂ ಹೊರ ರಾಜ್ಯಗಳಿಗೆ ಕಾರು, ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದ ಜನರು ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಹೆದರಿಕೊಂಡು ಮೆಟ್ರೋ ರೈಲಿನಲ್ಲಿ ಹೋಗಲು ಮುಂದಾಗಿದ್ದಾರೆ. ಬೆಂಗಳೂರು ನಗರ ಪ್ರವೇಶ ಆಗುತ್ತಿದ್ದಂತೆ ನಾಗಸಂದ್ರ, ಪೀಣ್ಯ 2ನೇ ಹಂತ, ಗೊರಗುಂಟೆಪಾಳ್ಯ, ಯಶವಂತಪುರ ಸೇರಿದಂತೆ ವಿವಿಧೆಡೆ ಉಂಟಾಗಿದ್ದ ಟ್ರಾಫಿಕ್ ಜಾಮ್‌ನಿಂದಾಗಿ ರಸ್ತೆ ಮಾರ್ಗದಲ್ಲಿ ವಾಹನಗಳಲ್ಲಿ ಹೋದರೆ ಹೆಚ್ಚು ಸಮಯ ಆಗಲಿದೆ ಎಂದು ಮೆಟ್ರೋ ಮೊರೆ ಹೋಗಿದ್ದಾರೆ. ಹೀಗಾಗಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯಾದ ಬೆಂಗಳೂರು-ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಹಸಿರು ಮಾರ್ಗದ ಮೆಟ್ರೋ ನಿಲ್ದಾಣದಲ್ಲಿ ಜನರು ಇಳಿದಿದ್ದಾರೆ.
1 ಕಿಮೀ ಸರತಿ ಸಾಲು: ಬೆಂಗಳೂರಿನ ತುಮಕೂರು ರಸ್ತೆಯಲ್ಲಿರುವ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಬರೋಬ್ಬರಿ 5-10 ಸಾವಿರ ಜನರು ಮೆಟ್ರೋ ರೈಲು ಪ್ರಯಾಣಕ್ಕೆ ಹೊರಭಾಗದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು. ಈ ಸರತಿ ಸಾಲಿನ ಉದ್ದ ಹನುಮಂತನ ಬಾಲದಂತೆ ಸುಮಾರು 1 ಕಿ.ಮೀ ಉದ್ದವಾಗಿತ್ತು. ಟ್ರಾಫಿಕ್ ರಹಿತ ಸಂಚಾರಕ್ಕೆ ಮೆಟ್ರೋ ಮೊರೆ ಹೋದ ಜನರಿಗೆ ಇಲ್ಲಿಯೂ ಕಾಯುವುದು ತಪ್ಪಲಿಲ್ಲ ಎಂಬ ಭಾರೀ ಬೇಸರ ಉಂಟಾಗಿತ್ತು. ಹೀಗಾಗಿ, ಮೆಟ್ರೋ ರೈಲು ಸಂಚಾರಕ್ಕೆ ಅನುಕೂಲ ಆಗುವಂತೆ ಇನ್ನೂ ಮೂರು ನಿಲ್ದಾಣಗಳನ್ನು ವಿಸ್ತರಣೆ ಮಾಡದ ರಾಜಕಾರಣಿಗಳು ಹಾಗೂ ಮೆಟ್ರೋ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ದೀಪಾವಳಿ ಹಬ್ಬ ಮುಗಿಸಿಕೊಂಡು ವಾಪಸ್ ಬೆಂಗ್ಳೂರಿಗೆ ಬರ್ತಿದ್ದವರಿಗೆ ಟ್ರಾಫಿಕ್ ಶಾಕ್: ವಾಹನ ಸವಾರರ ಪರದಾಟ
ಹೊಸ ಮೂರು ನಿಲ್ದಾಣಗಳ ಸೇರ್ಪಡೆ ಮಾಡಿ: ಬೆಂಗಳೂರು ಮೆಟ್ರೋ ಹಸಿರು ಮಾರ್ಗದಲ್ಲಿ ಸದ್ಯಕ್ಕೆ ತುಮಕೂರು ರಸ್ತೆಯ ನಾಗಸಂದ್ರದಿಂದ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆವರೆಗೆ ಒಟ್ಟು 29 ನಿಲ್ದಾಣಗಳಿಗೆ ರೈಲು ಸೇವೆ ಕಲ್ಪಿಸಲಾಗಿದೆ. ಆದರೆ, ಇದೀಗ ಈ ಹಸಿರು ಮಾರ್ಗದಲ್ಲಿ ನಾಗಸಂದ್ರದಿಂದ ಮಂಜುನಾಥನಗರ, ಚಿಕ್ಕ ಬಿದರಕಲ್ಲು ಹಾಗೂ ಮಾದವಾರ ಮೂರು ನಿಲ್ದಾಣಗಳಿಗೆ ವಿಸ್ತರಣೆ ಮಾರ್ಗವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ರೈಲ್ವೆ ಪರೀಕ್ಷೆಗಳನ್ನು ಕೂಡ ನಡೆಸಲಾಗಿದೆ. ಆದರೂ ಈ ವಿಸ್ತರಿತ ಮಾರ್ಗವನ್ನು ರಾಜಕಾರಣಿಗಳು ಉದ್ಘಾಟನೆ ಮಾಡದೇ ರಾಜಕಾರಣ ಮಾಡುತ್ತಾ ವಿಳಂಬ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಬೆಂಗಳೂರಿನಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಸಂಸದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಹಾಗೂ ಡಾ.ಸಿ.ಎನ್. ಮಂಜುನಾಥ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ಜನರ ಪೈಕಿ ಅತಿಹೆಚ್ಚು ಉತ್ತರ ಕರ್ನಾಟಕದ ಜಿಲ್ಲೆಗಳ ಜನರು, ಕೆಲವು ಕರಾವಳಿ ಜಿಲ್ಲೆಗಳ ಜನರು ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಜನರಿದ್ದಾರೆ. ಇವರೆಲ್ಲರೂ ಊರಿಗೆ ಹೋಗಿ ಬಂದರೆ ಟ್ರಾಫಿಕ್ ರಹಿತ ಸಂಚಾರಕ್ಕೆ ಮೆಟ್ರೋಗಾಗಿ ನಾಗಸಂದ್ರದಲ್ಲಿ ಇಳಿಯುತ್ತಾರೆ. ಇನ್ನು ನಾಗಸಂದ್ರದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯೂ ವಾಸವಾಗಿರುವುದರಿಂದ ಇಲ್ಲಿ ಮೆಟ್ರೋಗೆ ಊರಿನಿಂದ ಬಂದ ಪ್ರಯಾಣಿಕರ ಜೊತೆಗೆ ಸ್ಥಳೀಯ ಪ್ರಯಾಣಿಕರೂ ಸೇರಿಕೊಂಡು ಮೆಟ್ರೋ ನಿಲ್ದಾಣ ತುಂಬಾ ರಶ್ ಆಗುತ್ತದೆ. ಹೀಗಾಗಿ, ಮೆಟ್ರೋ ರೈಲಿಗೆ ಹೋಗಲು ಸುಮಾರು 500 ಮೀ.ನಿಂದ 1 ಕಿ.ಮೀ.ವರೆಗೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ.
ನಾಗಸಂದ್ರ-ಮಾದವಾರ ಉದ್ಘಾಟನೆ ಯಾವಾಗ?
ನಾಗಸಂದ್ರದಿಂದ ಬೆಂಗಳೂರಿನ ಹೊರಭಾಗದಲ್ಲಿರುವ ಮಾದವಾರವರೆಗೆ ಮೆಟ್ರೋ ವಿಸ್ತರಣೆ ಮಾಡಿದರೆ, ಅಲ್ಲಿ ಸ್ಥಳೀಯ ಜನರಿಲ್ಲದೇ ಪ್ರಯಾಣಿಕರು ಕಡಿಮೆ ಜನಸಂದಣಿ ಮೂಲಕ ಮೆಟ್ರೋಗೆ ಹೋಗಬಹುದು ಎಂಬುದು ಅವರ ನಿರೀಕ್ಷೆಯಾಗಿದೆ. ಈ ವಿಸ್ತರಿತ ಮಾರ್ಗದ ಉದ್ಘಾಟನೆಗೆ ಕೆಲವು ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ತಾಂತ್ರಿಕ ಪರೀಕ್ಷೆಗಳು ಹಾಗೂ ಕೇಂದ್ರ ಸಚಿವಾಲಯದ ಅನುಮತಿ ಬೇಕಿದೆ. ರಾಜ್ಯ ಸರ್ಕಾರದ ಮಂತ್ರಿಗಳು ಹಾಗೂ ಸ್ಥಳೀಯ ಸಂಸದರು ಒತ್ತಡ ಹಾಕಿ ಶೀಘ್ರ ವಿಸ್ತರಿತ ಮಾರ್ಗ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.