ಬೆಂಗಳೂರಿನ ರೆಸಾರ್ಟ್‌ವೊಂದರಲ್ಲಿ ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯವರಾದ ಬಸವರಾಜ್ ಎಂಬುವವರು ಮೃತರು.

ಬೆಂಗಳೂರು/ರಾಯಚೂರು (ಜು.13): ಬೆಂಗಳೂರಿನಲ್ಲಿ ರೆಸಾರ್ಟ್‌ಗೆ ಹೋಗಿದ್ದಾಗ ಸಿನಿಮಾ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ. ಈ ಘಟನೆ ಸಾರ್ವಜನಿಕರಲ್ಲಿ ಆಘಾತ ಉಂಟುಮಾಡಿದೆ.

ಮೃತ ವ್ಯಕ್ತಿ ಬಸವರಾಜ್ (46), ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸರ್ಜಾಪುರ ಗ್ರಾಮದ ನಿವಾಸಿಯಾಗಿದ್ದು, ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಘಟನೆಯ ವಿವರ:

ನಿನ್ನೆ ರಾತ್ರಿ ಬಸವರಾಜ್ ತಮ್ಮ ಕಂಪನಿಯ ಸ್ನೇಹಿತರೊಂದಿಗೆ ನಗರದ ಹೊರವಲಯದಲ್ಲಿರುವ ರೆಸಾರ್ಟ್‌ಗೆ ತೆರಳಿದ್ದರು. ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ಸಂತೋಷದಿಂದ ಸಮಯ ಕಳೆಯುತ್ತಿದ್ದರು. ಈ ವೇಳೆ ಒಂದು ಜನಪ್ರಿಯ ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದ ಬಸವರಾಜ್, ಏಕಾಏಕಿ ನೆಲಕ್ಕುರುಳಿದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರೂ, ವೈದ್ಯರು ಅವರನ್ನು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ಕುಟುಂಬದ ಹಿನ್ನೆಲೆ:

ಬಸವರಾಜ್ ಅವರ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸಿಸುತ್ತಿದ್ದರು. ದುರ್ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಈಗಾಗಲೇ ಮೃತದೇಹವನ್ನು ಬೆಂಗಳೂರಿನಿಂದ ಲಿಂಗಸುಗೂರಿನ ಸರ್ಜಾಪುರಕ್ಕೆ ರವಾನಿಸಲಾಗಿದೆ. ಗ್ರಾಮದಲ್ಲಿ ಶೋಕಾಚರಣೆಯ ವಾತಾವರಣವಿದ್ದು, ಹಲವರು ಅಂತಿಮ ದರ್ಶನಕ್ಕಾಗಿ ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸುತ್ತಿದ್ದಾರೆ.