ಪ್ರಯಾಣಿಕರ ಗಮನಕ್ಕೆ: ಮೆಟ್ರೋ ಸಂಚಾರದ ಸಮಯ ಬದಲಾವಣೆ
ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ ಮಾಡಲಾಗಿದೆ. ರಾತ್ರಿ ಕೆಲಸ ಮುಗಿಸಿ ಮೆಟ್ರೋ ನಂಬಿ ಓಡಾಡ್ತಿದ್ದ ಪ್ರಯಾಣಿಕರಿಕರಿಗೆ ಅನುಕೂಲವಾಗಲಿದೆ.
ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಆ.6): ಸಿಲಿಕಾನ್ ಸಿಟಿ ಅಂದ ತಕ್ಷಣ ನೆನಪಾಗೋದು ಟ್ರಾಫಿಕ್ ಜಂಜಾಟ. ಈ ಟ್ರಾಫಿಕ್ ಕಡಿಮೆ ಮಾಡಲೆಂದೇ ನಮ್ಮ ಮೆಟ್ರೋ ಪರಿಚಯಿಸಲಾಯ್ತು. ಆಗಿನಿಂದಲೂ ಜನ ತಮ್ಮ ಸ್ವಂತ ವಾಹನಗಳಿಗೆ ಗುಡ್ ಬೈ ಹೇಳಿ ಮೆಟ್ರೋ ಅವಲಂಬಿಸಿದ್ರು. ಈಗಲೂ ಜನ ಬಿಎಂಟಿಸಿ ಬಿಟ್ಟು ಮೆಟ್ರೋದಲ್ಲಿ ತಮ್ಮ ಕೆಲಸಗಳಿಗೆ ತೆರಳ್ತಾರೆ. ಹೀಗಾಗಿಯೇ ಉದ್ಯಾನಗರಿಯಲ್ಲಿ ಕೊಂಚ ಟ್ರಾಫಿಕ್‌ಗೆ ಬ್ರೇಕ್ ಬಿದ್ದಿದೆ.
ಇದೀಗ ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಮೆಟ್ರೋ ಸಂಚಾರದಲ್ಲಿ ಸಮಯ ಬದಲಾವಣೆ ಮಾಡಿದೆ. ಇನ್ಮುಂದೆ ಪ್ರತಿದಿನ ಮುಂಜಾನೆ ಹಾಗೂ ರಾತ್ರಿ 15ನಿಮಿಷಕ್ಕೊಮ್ಮೆ ಮೆಟ್ರೊ ಸಂಚರಿಸಲಿದ್ದು ಪ್ರಯಾಣಿಕರ ಸಮಸ್ಯೆಗೆ BMRCL ಬ್ರೇಕ್ ಹಾಕಿದೆ. ಆಗಸ್ಟ್ 8 ಸೋಮವಾರದಿಂದ ಬೆಳಿಗ್ಗೆ 5 ಗಂಟೆಯಿಂದ 6 ರವರೆಗೆ ಹಾಗೂ ರಾತ್ರಿ10 ರಿಂದ 11 ಗಂಟೆವರೆಗೆ 15ನಿಮಿಷಕ್ಕೊಮ್ಮೆ ಮೆಟ್ರೊ ಸಂಚರಿಸಲಿದೆ.
ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ
ಇದುವರೆಗೂ ಪ್ರತಿ 20 ನಿಮಿಷಕ್ಕೊಂದು ಮೆಟ್ರೋ ಸಂಚರಿಸುತ್ತಿತ್ತು. ಇದರಿಂದ ಬೆಳಿಗ್ಗೆ, ರಾತ್ರಿ ಕೆಲಸ ಮುಗಿಸಿ ಮೆಟ್ರೋ ನಂಬಿ ಓಡಾಡ್ತಿದ್ದ ಪ್ರಯಾಣಿಕರಿಕರಿಗೆ ತೊಂದರೆಯಾಗಿತ್ತು. ಅಲ್ಲದೆ ಪ್ರಯಾಣಿಕರು ದೂರು ನೀಡಿದ್ರು. ಹೀಗಾಗಿ ಪ್ರಯಾಣಿಕರ ಅನುಕೂಲಕ್ಕಾಗಿ 15 ನಿಮಿಷಗಳ ಮಧ್ಯಂತರದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ ಎಂದು ನಮ್ಮಮೆಟ್ರೋ ನಿಗಮ ಸ್ಪಷ್ಟಪಡಿಸಿದೆ.
ಮೊದಲ ಹಂತದ ಮೆಟ್ರೋ ಮಾರ್ಗದಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಪ್ರತಿ 5 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚರಿಸುತ್ತಿದೆ. ಆದ್ರೆ ಬೆಳಿಗ್ಗೆ 5 ರಿಂದ 6 ಹಾಗೂ ರಾತ್ರಿ 10 ರಿಂದ 11ರ ಗಂಟೆಯೊಳಗೆ ಪ್ರತಿ 20 ನಿಮಿಷಕ್ಕೊಮ್ಮೆ ಒಂದು ಮೆಟ್ರೋ ರೈಲು ಸಂಚಾರ ಮಾಡ್ತಿತ್ತು. ಇದರಿಂದ ಮೆಟ್ರೋ ಪ್ರಯಾಣಿಕರಿಗೆ ಭಾರೀ ತೊಂದರೆಯಾಗ್ತಿತ್ತು. ರಾತ್ರಿ ದೂರದ ಊರುಗಳಿಂದ ಮೆಟ್ರೋ ನಂಬಿ ಬರುತ್ತಿದ್ದ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಮೆಟ್ರೋ ಸಿಗದೆ ಪರದಾಡುವಂತಾಗಿತ್ತು. ಹೀಗಾಗಿ ಮೆಟ್ರೋ ಪ್ರಯಾಣಿಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ರು. ಹೀಗಾಗಿ ಮೆಟ್ರೋ ಸಂಚಾರದಲ್ಲಿ ಅವಧಿ ಬದಲಾವಣೆ ಮಾಡಲಾಗಿದೆ.
2ನೇ ಹಂತದ ಮೆಟ್ರೋ ಇನ್ನೂ ಸೂಪರ್ ಫಾಸ್ಟ್
ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಎರಡು ನಿಮಿಷಕ್ಕೊಂದು ಟ್ರೈನ್ ಓಡಿಸಲು ಬಿಎಂಆರ್ಸಿಎಲ್ ತೀರ್ಮಾನಿಸಿದೆ. ನಮ್ಮ ಮೆಟ್ರೋ ಬೆಂಗಳೂರಲ್ಲಿ ಕಾರ್ಯಾಚರಣೆ ಶುರುಮಾಡಿದ ಬಳಿಕ ಸಿಲಿಕಾನ್ ಸಿಟಿ ಮಂದಿ ಟ್ರಾಫಿಕ್ ಜಂಜಾಟದಿಂದ ಹೊರಬಂದಿದ್ದಾರೆ. ತಮ್ಮ ಸ್ವಂತ ವಾಹನಕ್ಕೆ ಬ್ರೇಕ್ ಹಾಕಿ ಬಿಂದಾಸ್ ಆಗಿ ಮೆಟ್ರೋ ಪ್ರಯಾಣ ಶುರುಮಾಡಿದ್ದಾರೆ.
ಮೆಟ್ರೋಗೆ ಎಷ್ಟೆ ಪ್ರಯಾಣಿಕರು ಬಂದ್ರೂ ಕೂಡ 5 ನಿಮಿಷ ಮೆಟ್ರೋಗಾಗಿ ಕಾಯಬೇಕಿತ್ತು. ಜನಜಂಗುಳಿ ಜಾಸ್ತಿಯಾದ್ರೂ ಮೆಟ್ರೋ ಸಮಯ ಬದಲಾವಣೆ ಮಾತ್ರ bmrcl ನಿಂದ ಸಾಧ್ಯವಾಗಿಲ್ಲ. ಹೀಗಾಗಿ ಎರಡನೇ ಹಂತದಲ್ಲಿ ಈ ನ್ಯೂನತೆಯನ್ನ ಸರಿಪಡಿಸಿಕೊಳ್ಳಲು ಬಿಎಂಆರ್ಸಿಎಲ್ ಮುಂದಾಗಿದೆ. ಎರಡನೇ ಹಂತದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗ. ಸಿಲ್ಕ್ ಬೋರ್ಡ್ ಟು ಕೆಆರ್ ಪುರಂ ಮಾರ್ಗ, ಹಾಗೂ ವೈಟ್ ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ಓಡಲಿದೆ. ಇಲ್ಲೆಲ್ಲಾ ಐಟಿ ಬಿಟಿ ಕಂಪನಿಗಳು ಹೆಚ್ಚಿದ್ದು ಪೀಕ್ ಟೈಮಲ್ಲಿ ಹೆಚ್ಚಿನ ಜನದಟ್ಟಣೆ ಆಗಲಿದೆ ಎಂದು ತಜ್ಞರು ಎಚ್ಚರಿಸಿದ್ರು. ಹೀಗಾಗಿ ಇನ್ನೂ ಸೂಪರ್ ಫಾಸ್ಟ್ ಆಗಲಿದೆ ನಮ್ಮ ಮೆಟ್ರೋ.