ಬೆಂಗಳೂರು[ಆ.06]: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸತ್ತು ರೂಪದರ್ಶಿಯೊಬ್ಬರು, ತಮ್ಮ ಮಗಳ ಜತೆ ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜೆ.ಪಿ.ನಗರದ 7ನೇ ಹಂತದಲ್ಲಿ ಸೋಮವಾರ ನಡೆದಿದೆ.

ಎಲೈಟ್‌ ಅಪಾರ್ಟ್‌ಮೆಂಟ್‌ ನಿವಾಸಿ ಜ್ಯೋತಿ (35) ಹಾಗೂ ಅವರ ಪುತ್ರಿ ಶಗೂನ್‌ (7) ಮೃತ ದುರ್ದೈವಿಗಳು. ಕೌಟುಂಬಿಕ ವಿಚಾರವಾಗಿ ಭಾನುವಾರ ರಾತ್ರಿ ದಂಪತಿ ಮಧ್ಯೆ ಜಗಳವಾಗಿದೆ. ಇದರಿಂದ ಬೇಸತ್ತ ಜ್ಯೋತಿ, ಮಧ್ಯಾಹ್ನ 2.30 ಗಂಟೆ ಸುಮಾರಿಗೆ ಮಗಳ ಜೊತೆ ಅಪಾರ್ಟ್‌ಮೆಂಟ್‌ನ 20ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿಡಿಯೋ ಮಾಡಿಟ್ಟು ಆತ್ಮಹತ್ಯೆ:

12 ವರ್ಷಗಳ ಹಿಂದೆ ಹಾರ್ಡ್‌ವೇರ್‌ ಅಂಗಡಿ ಮಾಲೀಕ ಪಂಕಜ್‌ ಮತ್ತು ಜ್ಯೋತಿ ಪ್ರೇಮ ವಿವಾಹವಾಗಿದ್ದು, ದಂಪತಿಗೆ ಶೂಗನ್‌ ಒಬ್ಬಳೇ ಮಗಳಿದ್ದಳು. ಜ್ಯೋತಿ, ಜಾಹೀರಾತು ಹಾಗೂ ಕೆಲವು ಧಾರವಾಹಿಗಳಲ್ಲಿ ಸಹ ನಟಿಸಿದ್ದರು. ಆದರೆ, ಇತ್ತೀಚಿಗೆ ಪತ್ನಿ ಮೇಲೆ ಅನುಮಾನಗೊಂಡ ಪಂಕಜ್‌, ಇದೇ ವಿಷಯಕ್ಕೆ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಭಾನುವಾರ ರಾತ್ರಿ ಸಹ ಶೀಲ ಶಂಕಿಸಿ ಪತ್ನಿ ಜತೆ ನಡೆದಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಇದರಿಂದ ಕೋಪಗೊಂಡ ಪಂಕಜ್‌, ರಾತ್ರಿಯೇ ಮನೆಯಿಂದ ಹೊರ ಹೋಗಿದ್ದಾನೆ.

ಈ ಬೆಳವಣಿಗೆಯಿಂದ ಬೇಸತ್ತ ಜ್ಯೋತಿ, ಸೋಮವಾರ ಮಧ್ಯಾಹ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಇದರಲ್ಲಿ ನಾವು ನಿನ್ನ (ಪಂಕಜ್‌) ಬಿಟ್ಟು ಹೋಗುತ್ತಿದ್ದೇವೆ. ಯಾವಾಗಲೂ ನನ್ನ ಶೀಲ ಅನುಮಾನಿಸಿ ಗಲಾಟೆ ಮಾಡುತ್ತಿದ್ದೆ. ನೀನು ಚೆನ್ನಾಗಿರು’ ಎಂದು ಜ್ಯೋತಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.