ಬೆಂಗಳೂರು [ಜೂ.19] :  ಸತತವಾಗಿ ನಷ್ಟ ಅನುಭವಿಸುತ್ತಾ ಬಂದಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ಈ ಬಾಬ್ತಿನಲ್ಲಿ ಇದೀಗ ಹ್ಯಾಟ್ರಿಕ್ ಸಾಧನೆ ತೋರಿದೆ! ಅಷ್ಟೇ ಅಲ್ಲ, ತನ್ನ ಇತಿಹಾಸದಲ್ಲೇ ಅತಿ ಹೆಚ್ಚಿನ ನಷ್ಟವನ್ನು 2018 - 19 ನೇ ಸಾಲಿನಲ್ಲಿ ದಾಖಲಿಸಿದ್ದು, ಬರೋಬ್ಬರಿ 300 ಕೋಟಿ ರು. ನಷ್ಟ ಅನುಭವಿಸಿದೆ. 

ಕಳೆದ ಮೂರು ವರ್ಷಗಳಿಂದ ನಷ್ಟ ಅನುಭವಿಸುತ್ತಿದ್ದು, ಚೇತರಿಸಿಕೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ. ಈ ಹ್ಯಾಟ್ರಿಕ್ ಆದಾಯ ನಷ್ಟ ಒಂದೆಡೆಯಾದರೆ ನಿಗಮದ ಸಾಲದ ಮೊತ್ತ ಒಂದು ಸಾವಿರ ಕೋಟಿ ರು. ದಾಟಿದೆ! ಪರಿಣಾಮವಾಗಿ ಸರ್ಕಾರದ ನೆರವು ಯಾಚಿಸಲು ಬಿಎಂಟಿಸಿ ಮುಂದಾಗಿದೆ. 

ವರ್ಷದಿಂದ ವರ್ಷಕ್ಕೆ ಆದಾಯ ನಷ್ಟದ ಪ್ರಮಾಣ ಹೆಚ್ಚಾಗುತ್ತಿರುವುದು ನಿಗಮದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ನೌಕರರ ವೇತನ, ಪಿಂಚಣಿ, ಡೀಸೆಲ್, ಬಸ್‌ಗಳ ನಿರ್ವಹಣೆ, ಸಾಲ ಮರು ಪಾವತಿ, ಬಡ್ಡಿ ಸೇರಿದಂತೆ ಪ್ರತಿ ತಿಂಗಳು ಸುಮಾರು 200 ಕೋಟಿ ರು.ಗೂ ಅಧಿಕ ಹಣ ವೆಚ್ಚವಾಗುತ್ತಿದೆ. ಬಸ್‌ಗಳ ಕಾರ್ಯಾಚರಣೆ, ವಾಣಿಜ್ಯ ಮಳಿಗೆಗಳ ಬಾಡಿಗೆ, ಬಸ್ ಪಾಸ್ ಸೇರಿದಂತೆ ಎಲ್ಲಾ ಮೂಲಗಳಿಂದ ಪ್ರತಿ ತಿಂಗಳು 170 ಕೋಟಿ ರು. ಮಾತ್ರ ಆದಾಯ ಬರುತ್ತಿದೆ. ಇಲ್ಲಿ ಆದಾಯಕ್ಕಿಂತ 30 ಕೋಟಿ ರು. ಗೂ ಅಧಿಕ ಹೆಚ್ಚುವರಿ ವೆಚ್ಚವಾಗುತ್ತಿದೆ.

ಇದರಿಂದ ವರ್ಷದಿಂದ ವರ್ಷಕ್ಕೆ ನಿಗಮದ ಆರ್ಥಿಕ ಸ್ಥಿತಿ ಬಿಗಡಾಯಿಸುತ್ತಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ನಷ್ಟಕ್ಕೆ ಕಾರಣ: ಬಿಎಂಟಿಸಿ ನಷ್ಟಕ್ಕೆ ಹಲವಾರು ಕಾರಣ ಗಳಿವೆ. ಪ್ರಮುಖವಾಗಿ ಬಸ್‌ಗಳ ಕಾರ್ಯಾಚರಣೆ ವೆಚ್ಚ ಅಧಿಕವಾಗಿದೆ. ಕೆಲವು ಆಯ್ದ ಮಾರ್ಗಗಳನ್ನು ಹೊರತು ಪಡಿಸಿದರೆ ಬಹುತೇಕ ಮಾರ್ಗಗಳಲ್ಲಿ ಆದಾಯಕ್ಕಿಂತ ಕಾರ್ಯಾಚರಣೆ ವೆಚ್ಚವೇ ಹೆಚ್ಚಿದೆ. 

ಸಾಮಾನ್ಯ ಬಸ್‌ಗಳಲ್ಲಿ ಕಾರ್ಯಾಚರಣೆ ವೆಚ್ಚ ಪ್ರತಿ ಕಿ.ಮೀ.ಗೆ 5 ರಿಂದ 10 ಇದ್ದರೆ, ಹವಾನಿಯಂತ್ರ ಬಸ್‌ಗಳಲ್ಲಿ ಪ್ರತಿ .ಕಿ.ಮೀ.ಗೆ 35 ಗಳಿಗೂ ಅಧಿಕವಾಗಿದೆ. ಇನ್ನು ಆಗಾಗ ಡಿಸೇಲ್ ದರ ಹೆಚ್ಚಳವೂ ನಿಗಮದ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ.

ಕನಿಷ್ಠ 50 ಪೈಸೆ ಹೆಚ್ಚಳವಾದರೂ ಪ್ರತಿ ತಿಂಗಳು ನಿಗಮಕ್ಕೆ ಲಕ್ಷಾಂತರ ರು. ಹೆಚ್ಚುವರಿ ಹೊರೆಯಾಗುತ್ತದೆ ಎಂದು ತಿಳಿಸಿದರು. ಮೆಟ್ರೋ ಹೊಡೆತ: ನಗರದಲ್ಲಿ ಮೆಟ್ರೋ ರೈಲು ಸೇವೆ ಆರಂಭವಾದ ಬಳಿಕ ಬಿಎಂಟಿಸಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಮೆಟ್ರೋ ಸೇವೆ ಆರಂಭದ ಪೂರ್ವದಲ್ಲಿ ಪ್ರತಿ ದಿನ ಬಿಎಂಟಿಸಿ ಬಸ್‌ಗಳಲ್ಲಿ 55 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಪ್ರಸ್ತುತ 45 ಲಕ್ಷಕ್ಕೆ ಪ್ರಯಾಣಿಕರಿಗೆ ಕುಸಿದಿದೆ.

ಅಲ್ಲದೆ, ಮೆಟ್ರೋ ಮಾರ್ಗದಲ್ಲಿ ನಿಗಮದ ಬಸ್ ಗಳಿಗೆ ಪ್ರಯಾಣಿಕರ ಕೊರತೆ ಉಂಟಾದ್ದರಿಂದ ಆ ಮಾರ್ಗಗಳಲ್ಲಿ ಹಲವು ಬಸ್‌ಗಳ ಕಾರ್ಯಾಚರಣೆ ಕಡಿತ ಮಾಡಲಾಗಿದೆ. ಇದರಿಂದ ನಿಗಮದ ದಿನದ ಆದಾಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭವಿಷ್ಯದಲ್ಲಿ ಮೆಟ್ರೋ ಸೇವೆ ನಗರದ ಹಲವು ಮಾರ್ಗಗಳಿಗೆ ವಿಸ್ತರಿಣೆಯಾಗುವುದರಿಂದ ಬಸ್ ಗಳಿಗೆ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ವೇತನ- ಡೀಸೆಲ್‌ಗೆ ಹೆಚ್ಚು ವೆಚ್ಚ: ಬಿಎಂಟಿಸಿಯಲ್ಲಿ  ಚಾಲಕ, ನಿರ್ವಾಹಕ ಸೇರಿದಂತೆ ವಿವಿಧ ವೃಂದದ 34 ಸಾವಿರ ನೌಕರರಿದ್ದಾರೆ. ನಿಗಮದ ಒಟ್ಟು ಆದಾಯದಲ್ಲಿ ಶೇ. 54 ರಷ್ಟು ನೌಕರರ ವೇತನಕ್ಕೆ ಹೋಗುತ್ತದೆ. ಶೇ.27 ರಷ್ಟು ಡೀಸೆಲ್‌ಗೆ ವ್ಯಯವಾಗುತ್ತದೆ. ಉಳಿದ ಮೊತ್ತ ಮೋಟಾರು ತೆರಿಗೆ, ನಿಗಮದ ನಿರ್ವಹಣೆ, ಬಿಡಿಭಾಗಗಳ ಖರೀದಿ, ನೌಕರರ ಪಿಎಫ್, ಪಿಂಚಣಿ, ಸಾಲದ ಬಡ್ಡಿ ಮೊದಲಾದವುಗಳಿಗೆ ಸರಿದೂಗುತ್ತಿದೆ. ಈ ನಡುವೆ ಬಸ್‌ಗಳ ಖರೀದಿ, ಬಸ್ ನಿಲ್ದಾಣ ನಿರ್ಮಾಣ, ನೂತನ ಸಿಬ್ಬಂದಿ ನೇಮಕಾತಿ ಇವೆಲ್ಲವೂ ಹೆಚ್ಚುವರಿ ಹೊರೆಯಾಗುತ್ತಿವೆ. ಸರ್ಕಾರ ಸಣ್ಣ ಪ್ರಮಾಣದಲ್ಲಿ ತೆರಿಗೆ ವಿನಾಯಿತಿ, ಸಹಾಯಧನ ನೀಡುತ್ತಿದ್ದರೂ ಯಾವುದಕ್ಕೂ ಸಾಲುತ್ತಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯ: ಬಿಎಂಟಿಸಿ ಇಂದಿನ ಪರಿಸ್ಥಿತಿಗೆ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನಿರ್ಲ ಕ್ಷ್ಯವೂ ಕಾರಣ. ನೂರಾರು ಕೋಟಿ ರು. ವೆಚ್ಚದಲ್ಲಿ ನಿರ್ಮಿಸಿರುವ ಟಿಟಿಎಂಸಿಗಳಲ್ಲಿ ಹತ್ತಾರು ಮಳಿಗೆ ಗಳು ಹಲವು ವರ್ಷಗಳಿಂದ ಖಾಲಿ ಉಳಿದಿವೆ. ಇದರಿಂದ ನಿಗಮಕ್ಕೆ ಲಕ್ಷಾಂತರ ರು. ಆದಾಯ ನಷ್ಟವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ. ಇನ್ನು ನಿಗಮದ ಡಿಪೋಗಳಲ್ಲಿ ಡೀಸೆಲ್ ಕಳವು, ಬಸ್‌ಗಳ ಬಿಡಿಭಾಗ ಖರೀದಿಯಲ್ಲಿ ಭ್ರಷ್ಟಾಚಾರವೂ ನಡೆಯುತ್ತಿದೆ. ಅವ್ಯವಹಾರಗಳಿಗೆ ಕೆಲ ಭ್ರಷ್ಟ ಅಧಿಕಾರಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ.

ದೂರದೃಷ್ಟಿಯ ಯೋಜನೆಗಳಿಲ್ಲ: ಬಿಎಂಟಿಸಿ ಈ ಹಿಂದೆ ಹಲವು ಸವಾಲುಗಳ ನಡುವೆ ಲಾಭ ಗಳಿಸಿದ್ದ ನಿದರ್ಶನಗಳೂ ಇವೆ. ಇತ್ತೀಚಿನ ವರ್ಷಗಳಲ್ಲಿ ನಿಗ ಮ ನಷ್ಟದ ಹಳಿಯಲ್ಲಿ ತೆವಳುತ್ತಿದ್ದರೂ ನಷ್ಟದಿಂದ ಮೇಲೆತ್ತುವ ಯೋಜನೆ ರೂಪಿಸಿಲ್ಲ. ಆಡಳಿತ ವರ್ಗದ ಮಟ್ಟದಲ್ಲಿನ ದುಂದು ವೆಚ್ಚಗಳಿಗೆ ಕಡಿವಾಣ ಹಾಕುತ್ತಿಲ್ಲ. ಬಿಎಂಟಿಸಿಯು ನಗರದ ಪ್ರಮುಖ ಸ್ಥಳಗಳಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಆಸ್ತಿ ಹೊಂದಿದೆ. ಈ ಆಸ್ತಿಯನ್ನು ಸದ್ಭಳಕೆ ಮಾಡುವಲ್ಲಿ ಯೂ ಆಡಳಿತ ವರ್ಗ ವಿಫಲವಾಗಿದೆ.

ವರದಿ : ಮೋಹನ್ ಹಡ್ರಂಗಿ