ಬೆಂಗಳೂರು (ಫೆ.09):  ನಮ್ಮ ಬೆಂಗಳೂರು ಮೆಟ್ರೋ ಎರಡನೇ ಹಂತ 2021ರ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ಮೆಟ್ರೋ ರೈಲು ಸಂಪರ್ಕವನ್ನು 2025ರ ವೇಳೆಗೆ 300 ಕಿ.ಮೀ.ಗೆ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ವಿಧಾನಸೌಧದ ಮುಂಭಾಗ ಭಾನುವಾರ ಬಿಬಿಎಂಪಿ ಹಮ್ಮಿಕೊಂಡಿದ್ದ ‘ಸಹಾಯ 2.0 ಆ್ಯಪ್‌’ ಬಿಡುಗಡೆ, 15 ಕಸ ಗುಡಿಸುವ ವಾಹನ ಹಾಗೂ ಆರು ಬಿಬಿಎಂಪಿ ಆ್ಯಂಬುಲೆನ್ಸ್‌ಗಳಿಗೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

2023ರ ಒಳಗಾಗಿ ಹೊರವರ್ತುಲ ರಸ್ತೆ ಹಾಗೂ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ಯೋಜನೆಯನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ. 2022ರ ವೇಳೆಗೆ ಪೂರ್ವ ದಿಕ್ಕಿನ ವೈಟ್‌ಫೀಲ್ಡ್‌ ಹೊರವರ್ತುಲ ರಸ್ತೆ, ಐಟಿಪಿಎಲ್‌ ಪ್ರದೇಶದ ಐಟಿ ಹಬ್‌ ಜೊತೆಗೆ ಪಶ್ಚಿಮ ದಿಕ್ಕಿನಿಂದ ಯಶವಂತಪುರ, ಪೀಣ್ಯ ಕೈಗಾರಿಕಾ ಪ್ರದೇಶಗಳ ಹಬ್‌ಗೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ 2022ರ ವೇಳೆಗೆ ನಗರ ಪೆರಿಫೆರಲ್‌ ರಿಂಗ್‌ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ. ಈ ಮೂಲಕ ಸಂಚಾರ ದಟ್ಟಣೆ ನಿವಾರಣೆ ಜತೆಗೆ ಸಾರ್ವಜನಿಕರ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲಾಗುವುದು ಎಂದು ಹೇಳಿದರು.

ಸಂಚಾರ ದಟ್ಟಣೆಗೆ ಮೆಟ್ರೋ, ಪೆರಿಫೆರಲ್‌ ವರ್ತುಲ ರಸ್ತೆಯ ಜತೆಗೆ ಉಪನಗರ ರೈಲು ಯೋಜನೆಯನ್ನೂ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಬೆಂಗಳೂರಿಗೆ ಉಪ ನಗರ ರೈಲು ಯೋಜನೆ ಮಂಜೂರು ಮಾಡಿದ್ದು, ಮೂರು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮೊಬಿಲಿಟಿ ಕಾರ್ಡ್‌ ಅನುಷ್ಠಾನಕ್ಕೆ ನಮ್ಮ ಮೆಟ್ರೋ ಸಿದ್ಧತೆ...

ರಸ್ತೆಗಳ ಸ್ವಚ್ಛತಾ ಕಾರ್ಯ ನಿರ್ವಹಿಸಲು 15 ಯಾಂತ್ರಿಕ ಕಸ ಗುಡಿಸುವ ವಾಹನಗಳ ಸೇವೆಗೆ ಚಾಲನೆ ನೀಡಲಾಗಿದೆ. ನಗರದ ಸ್ವಚ್ಛತೆ ಹಾಗೂ ಅಭಿವೃದ್ಧಿಗೆ ಸರ್ಕಾರದ ಜತೆ ಜನರು ಕೈ ಜೋಡಿಸಬೇಕು. ರಸ್ತೆ ಗುಂಡಿ, ಕಸದ ಸಮಸ್ಯೆಯಂತಹ ಕುಂದುಕೊರತೆ ಬಗ್ಗೆ ನಾಗರಿಕರು ದೂರು ನೀಡಿ ತಕ್ಷಣ ಪರಿಹಾರ ಪಡೆಯಲು ‘ಸಹಾಯ 2.0’ ಆ್ಯಪ್‌ಗೆ ಚಾಲನೆ ನೀಡಲಾಗಿದೆ. ಸಾರ್ವಜನಿಕರು ತಮ್ಮ ದೂರುಗಳನ್ನು ಫೋಟೋ ಸಹಿತ ಅಪ್‌ಲೋಡ್‌ ಮಾಡಲು ಇದರಲ್ಲಿ ಅವಕಾಶವಿದೆ ಎಂದು ಹೇಳಿದರು.

ಇದಲ್ಲದೆ, ಬಿಬಿಎಂಪಿ ಹೆರಿಗೆ ಆಸ್ಪತ್ರೆ, ರೆಫರಲ್‌ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕ್ರಮ ಕೈಗೊಳ್ಳಲಿದೆ. ಈ ರೋಗಿಗಳಿಗೆ ತುರ್ತು ಸೇವೆ ಒದಗಿಸಲು ಅತ್ಯಾಧುನಿಕ ವ್ಯವಸ್ಥೆಯುಳ್ಳ ಆರು ಆ್ಯಂಬುಲೆನ್ಸ್‌ಗಳನ್ನೂ ಒದಗಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ವಸತಿ ಸಚಿವ ವಿ.ಸೋಮಣ್ಣ, ನೂತನ ಸಚಿವರಾದ ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌, ಕೆ.ಗೋಪಾಲಯ್ಯ, ಬಿಬಿಎಂಪಿ ಮೇಯರ್‌ ಗೌತಮ್‌ಕುಮಾರ್‌ ಜೈನ್‌, ಬಿಬಿಎಂಪಿ ಆಯುಕ್ತ ಅನಿಲ್‌ಕುಮಾರ್‌ ಹಾಜರಿದ್ದರು.