ಮೆಟ್ರೋ ರೈಲಿನೊಳಗೆ ಕುಸಿದು ಬಿದ್ದು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ ನಂತರ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಬಿಎಂಆರ್‌ಸಿಎಲ್‌ ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು (ಜು.26): ಮೆಟ್ರೋ ರೈಲಿನೊಳಗೆ ಕುಸಿದು ಬಿದ್ದು ಕೆಲವು ಗಂಟೆಗಳ ನಂತರ ಸಾವನ್ನಪ್ಪಿದ ನಂತರ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಸಿಬ್ಬಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜುಲೈ 20ರಂದು ಮೆಟ್ರೋ ರೈಲಿನಲ್ಲಿ 67 ವರ್ಷದ ವ್ಯಕ್ತಿ ಕುಸಿದು ಬಿದ್ದು, ಆಸ್ಪತ್ರೆಗೆ ತಲುಪಿದ ನಂತರ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿತ್ತು. 

ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್‌) ಸಿಬ್ಬಂದಿ ಸಕಾಲದಲ್ಲಿ ವೈದ್ಯಕೀಯ ನೆರವು ನೀಡಲು ವಿಫಲರಾದ ಕಾರಣ ತಂದೆ ತಿಮ್ಮೇಗೌಡ (67) ಮೃತಪಟ್ಟಿದ್ದಾರೆ ಎಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪುತ್ರ ಇನ್ಸ್ಪೆಕ್ಟರ್ ಮುತ್ತುರಾಜ್ ದೂರು ಸಲ್ಲಿಸಿದ್ದಾರೆ.

Bengaluru Metro:ಆಗಸ್ಟ್‌ನಿಂದ 2 ಹೊಸ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

ಜುಲೈ 20 ರಂದು ರಾತ್ರಿ 9 ಗಂಟೆ ಸುಮಾರಿಗೆ ತಿಮ್ಮೇಗೌಡ ಅವರು ಕೆಂಗೇರಿಗೆ ತೆರಳಲು ಬೈಯಪ್ಪನಹಳ್ಳಿಯಲ್ಲಿ ಮೆಟ್ರೋ ಹತ್ತಿದ್ದರು. ತವರು ಜಿಲ್ಲೆ ಚಾಮರಾಜನಗರಕ್ಕೆ ಬಸ್ ನಲ್ಲಿ ತೆರಳಲು ಯೋಜನೆ ರೂಪಿಸಿದ್ದರು. ಆದರೆ ಎಸ್‌ವಿ ರಸ್ತೆ ನಿಲ್ದಾಣದಿಂದ ಮೆಟ್ರೊ ರೈಲು ಹೊರಡುವಷ್ಟರಲ್ಲಿಯೇ ಅವರು ಕುಸಿದು ಬಿದ್ದಿದ್ದರು. 

ತಿಮ್ಮೇಗೌಡ ಅವರ ಸಹ ಪ್ರಯಾಣಿಕರು ಪದೇ ಪದೇ ತುರ್ತು ಎಚ್ಚರಿಕೆಯನ್ನು ನೀಡಲು ಪ್ರಯತ್ನಿಸಿದರೂ ಮೆಟ್ರೋ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ, ಅವರು ಮಾರ್ಗದ ಮುಂದಿನ ನಿಲ್ದಾಣವಾದ ಎಂಜಿ ರಸ್ತೆ ನಿಲ್ದಾಣದಲ್ಲಿ ತಿಮ್ಮೇಗೌಡ ಅವರನ್ನು ಇಳಿಸಲು ನಿರ್ಧರಿಸಿದರು.

ಟೆಕ್ ವೃತ್ತಿಪರರಿಗೆ ಸಂತಸದ ಸುದ್ದಿ, ವೈಟ್‌ಫೀಲ್ಡ್‌-ಚಲ್ಲಘಟ್ಟ ನಮ್ಮ ಮೆಟ್ರೋ ಸೇವೆ ಆಗಸ್ಟ್‌ನಲ್ಲಿ ಆರಂಭ

ತಿಮ್ಮೇಗೌಡ ಅವರನ್ನು ಸುಮಾರು 15-20 ನಿಮಿಷಗಳ ಕಾಲ ಯಾವುದೇ ಸಹಾಯವಿಲ್ಲದೆ ಫ್ಲಾಟ್ ಫಾರ್ಮ್ ನಲ್ಲಿ ಮಲಗಿಸಲಾಗಿತ್ತು. ಆದರೆ ಸೆಕ್ಯುರಿಟಿಗಳು ಕೂಡ ಸಹಾಯಕ್ಕೆ ಬಾರದೆ ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ತಂದೆ ಮೃತಪಟ್ಟಿದ್ದಾರೆ ಎಂದು ಪುತ್ರ ಇನ್ಸ್ಪೆಕ್ಟರ್ ಮುತ್ತುರಾಜ್ ಆರೋಪಿಸಿದ್ದಾರೆ.

ಮೆಟ್ರೋ ಅಧಿಕಾರಿಗಳು ಮತ್ತು ಸಿಬಂದಿಗಳ ನಿಷ್ಕ್ರಿಯತೆಯ ಹಿಂದಿನ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಘಟನೆಯ ಬಗ್ಗೆ ಮೆಟ್ರೋ ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಬೇಕಾಗಿದೆ. ಬೆಂಗಳೂರು ಮೆಟ್ರೋ ಅಧಿಕಾರಿಗಳ ವಿರುದ್ಧ ಐಪಿಸಿ ಸೆಕ್ಷನ್ 304ಎ (ನಿರ್ಲಕ್ಷ್ಯದಿಂದ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.