ಬೆಂಗಳೂರು-ನೆಲಮಂಗಲ ಮತ್ತಷ್ಟು ಹತ್ತಿರ; ನಾಳೆಯಿಂದ ರೇಷ್ಮೆಸಂಸ್ಥೆ- ಮಾದಾವರ ಮೆಟ್ರೋ ಸಂಚಾರ!
ನಾಗಸಂದ್ರದಿಂದ ಮಾದಾವರ (BIEC) ವರೆಗಿನ ಮೆಟ್ರೋ ಮಾರ್ಗ ವಿಸ್ತರಣೆಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ತೇಜಸ್ವಿ ಸೂರ್ಯ ಪರಿಶೀಲಿಸಿದರು. ನಾಳೆಯಿಂದಲೇ ಪ್ರಯಾಣಿಕರ ಸಂಚಾರ ಆರಂಭವಾಗಲಿದ್ದು, ರೇಷ್ಮೆ ಸಂಸ್ಥೆಯಿಂದ ಮಾದಾವರದವರೆಗೆ ಮೆಟ್ರೋ ಸಂಚರಿಸಲಿದೆ.
ಬೆಂಗಳೂರು (ನ.06): ಸಿಲಿಕಾನ್ ಸಿಟಿ ಜನರ ಟ್ರಾಫಿಕ್ ರಹಿತ ಸಂಚಾರಕ್ಕೆ ಅನುಕೂಲ ಆಗಿರುವ ನಮ್ಮ ಮೆಟ್ರೋ ರೈಲು ಇದೀಗ ಬೆಂಗಳೂರು-ನೆಲಮಂಗಲ ಅಂತರವನ್ನು ಮತ್ತಷ್ಟು ಕುಗ್ಗಿಸಿದೆ. ನಮ್ಮ ಮೆಟ್ರೋ ಹಸಿರು ಮಾರ್ಗವನ್ನು ನಾಗಸಂದ್ರದಿಂದ ಮಾದಾವರವರೆಗೆ ವಿಸ್ತರಣೆ ಮಾಡಲಾಗಿದ್ದು, ನಾಳೆಯಿಂದಲೇ ರೇಷ್ಮೆಸಂಸ್ಥೆ-ಮಾದಾವರ ವರೆಗೆ ಮೆಟ್ರೋ ರೈಲು ಸಂಚಾರ ಮಾಡಲಿವೆ.
ಬೆಂಗಳೂರಿನಲ್ಲಿ ಟ್ರಾಫಿಕ್ ಮುಕ್ತ ಸಂಚಾರಕ್ಕೆ ಅನುಕೂಲವಾಗಿರುವ ಮೆಟ್ರೋ ರೈಲು ಸಂಚಾರಕ್ಕೆ ಪ್ರಯಾಣಿಕರು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ 1 ಕಿ.ಮೀ. ಕ್ಯೂ ನಿಂತಿದ್ದರು. ಈ ವೇಳೆ ನಾಗದಂಸ್ರದಿಂದ ಮಾದಾವರ (ಬಿಐಇಸಿ)ವರೆಗೆ ಮೆಟ್ರೋ ಮಾರ್ಗ ವಿಸ್ತರಣೆ ಮಾಡುವಂತೆ ಜನರು ಆಗ್ರಹಿಸಿದ್ದರು. ಕೆಲವರು ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕಿದ್ದರು. ಇದರ ಬೆನ್ನಲ್ಲಿಯೇ ಎಚ್ಚೆತ್ತುಕೊಂಡ ಜನಪ್ರತಿನಿಧಿಗಳು ಬುಧವಾರ ನಾಗಸಂದ್ರದಿಂದ ಮಾದಾವರವರೆಗೆ ಸಂಚಾರ ಮಾಡಿ ಚಾಲನೆ ನೀಡಿದರು. ನಾಳೆಯಿಂದಲೇ ಮೆಟ್ರೋ ಹಸಿರು ಮಾರ್ಗದ ಮೆಟ್ರೋ ರೈಲುಗಳು ರೇಷ್ಮೆ ಸಂಸ್ಥೆಯಿಂದ - ಮಾದಾವರವರೆಗೆ ಸಂಚಾರ ಮಾಡಲಿವೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ ಅವರು ಯಶವಂತಪುರದಿಂದ ಮಾದಾವರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರು. ನಾಗವಾರದಿಂದ ಮಾದಾವರ (BIEC) ವರೆಗಿನ ಮೂರು ನಿಲ್ದಾಣಗಳ 3.14 ಕಿ.ಮೀ ರೀಚ್-3 ವಿಸ್ತರಣೆ ಮಾರ್ಗವನ್ನು ಪರಿಶೀಲಿಸಿದರು. ಇನ್ನು ಮೆಟ್ರೋ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಯಾಣಿಕರ ಸಂಚಾರಕ್ಕೆ ಸಿದ್ಧವಿದ್ದರೆ ನಾಳೆಯಿಂದಲೇ ಪ್ರಯಾಣ ಆರಂಭಿಸುವಂತೆ ತಿಳಿಸಿದರು.
ಇದನ್ನೂ ಓದಿ: 7 ವರ್ಷಗಳ ನಂತರ ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ; 15 ರೂ. ಕನಿಷ್ಠ ದರ
ಇದಕ್ಕೆ ಮೆಟ್ರೋ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ ಬೆನ್ನಲ್ಲಿಯೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಸಾರ್ವಜನಿಕರ ಅನುಕೂಲಕ್ಕಾಗಿ ನಾಳೆಯಿಂದ ಈ ವಿಸ್ತರಣಾ ಮಾರ್ಗವನ್ನು ತೆರೆಯಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಔಪಚಾರಿಕ ಉದ್ಘಾಟನೆ ಮಾಡಲಾಗುವುದು ಎಂದು ಹೇಳಿದರು. ನ.7ರ ಗುರುವಾರ ಬೆಳಗ್ಗೆ 05.00 ಗಂಟೆಗೆ ಮಾದಾವರದಿಂದ ಮೊದಲ ವಾಣಿಜ್ಯ ಸೇವೆ ಪ್ರಾರಂಭವಾಗಲಿದೆ. ಇನ್ನು ದಿನದ ಕೊನೆಯ ರೈಲು ರಾತ್ರಿ 11.00 ಗಂಟೆಗೆ ಹೋರಡಲಿದೆ. ಪ್ರತಿ 10 ನಿಮಿಷಗಳ ಅವಧಿಯಲ್ಲಿ ರೈಲುಗಳ ಸಂಚಾರವು ಈ ಮಾರ್ಗದಲ್ಲಿ (ಮಾದಾವರ ಮತ್ತು ರೇಷ್ಮೆಸಂಸ್ಥೆ) ನಡೆಸಲಾಗುವುದು. ಹಸಿರು ಮಾರ್ಗದ ಇತರ ಮಾರ್ಗದಲ್ಲಿ ರೈಲು ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಹಾಗೂ ಎಂದಿನಂತೆ ವೇಳಾಪಟ್ಟಿಯ ಪ್ರಕಾರ ಚಲಿಸುತ್ತದೆ. ಕನಿಷ್ಠ ದರ ರೂ. 10 (ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ) ಮತ್ತು ಗರಿಷ್ಠ ದರ ರೂ 60. (ಮಾದಾವರದಿಂದ ರೇಷ್ಮೆ ಸಂಸ್ಥೆ) ಆಗಿದೆ.
ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!
ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ನಾಗಸಂದ್ರದಿಂದ ಮಾದಾವರ ಮೆಟ್ರೋ ನಿಲ್ದಾಣದವರೆಗಿನ ವಿಸ್ತರಿತ 3.14 ಕಿಮೀ ಮಾರ್ಗವನ್ನು ಇಂದು ಪರಿಶೀಲನೆ ನಡೆಸಿದೆ. ನಾಗರಿಕರನ್ನು ಹೆಚ್ಚು ಕಾಯಿಸುವುದು ಸರಿಯಲ್ಲ ಎನ್ನುವ ಕಾರಣಕ್ಕೆ ಈಗಲೇ ಹೊಸ ಮಾರ್ಗದ ಸೇವೆಯನ್ನು ಆರಂಭಿಸಲಾಗಿದ್ದು, ಸದ್ಯದಲ್ಲೇ ಅಧಿಕೃತವಾಗಿ ಉದ್ಘಾಟಿಸಲಾಗುವುದು. ಇಡೀ ದೇಶದಲ್ಲೇ ಅತಿ ಹೆಚ್ಚು ಮೆಟ್ರೋ ಪ್ರಯಾಣಿಕರನ್ನು ಬೆಂಗಳೂರು ಹೊಂದಿದೆ. ವಿಸ್ತರಿತ 3.14 ಕಿ.ಮೀ ಸೇರಿ ಬೆಂಗಳೂರು ಮೆಟ್ರೋ 76.95 ಕಿಮೀ ವ್ಯಾಪ್ತಿಯನ್ನು ಹೊಂದಿದೆ.
ಮೆಟ್ರೋ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತಿದ್ದು, ಮುಂದಿನ ವರ್ಷಕ್ಕೆ ಇನ್ನೂ 30 ಕಿ.ಮೀ ಸೇರ್ಪಡೆಯಾಗಲಿದೆ. 2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ ಎಂದು ತಿಳಿಸಿದರು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ನೆಲಮಂಗಲ ಶಾಸಕ ಎಂ.ಶ್ರೀನಿವಾಸ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಉಪಸ್ಥಿತರಿದ್ದರು.