ಬೆಂಗಳೂರು, (ಆ.30): ಅಕ್ರಮ ಮತ್ತು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದ್ದ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ರೈಲ್ವೆ ಸ್ಟೇಷನ್‌ಗೆ ಹೋಗುವ ಪಾದಚಾರಿ ಸುರಂಗಮಾರ್ಗ ಇದೀಗ ಫುಲ್ ಕ್ಲೀನ್ ಆಗಿದೆ.

ಕಳೆದ ಒಂದು ವಾರದಲ್ಲಿ ಪಾದಚಾರಿ ರಸ್ತೆಯಲ್ಲಿ ಅಕ್ರಮವಾಗಿ ಅಂಗಡಿ ಇಟ್ಟುಕೊಂಡಿದ್ದ ವ್ಯಾಪಾರ ಮಳಿಗೆಗಳನ್ನು ಬಿಬಿಎಂಪಿ ತೆರವು ಮಾಡಿದೆ. 

ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ  ಹೂಡಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಕಾರಣಕ್ಕೆ ದಶಕಗಳ ಕಾಲದ ಅಸಹ್ಯ ಮತ್ತು ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ರವಿಕುಮಾರ್ ಅವರ ಕಾರ್ಯಕ್ಕೆ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ.

 ಅಂಡರ್‌ ಪಾಸ್‌ನಲ್ಲಿ ಹೋಗುತ್ತಿರುವವರಿಗೆ ವ್ಯಾಪಾರಿಗಳು ಹಾಗೂ ತೃತೀಯ ಲಿಂಗಿಗಳು ಪ್ರಯಾಣಿಕರಿಗೆ ಕಿರಿ-ಕಿರಿ ನೀಡುತ್ತಿದ್ದರು. ಇದನ್ನು ಪೊಲೀಸರ ಕಣ್ಣಿಗೆ ಕಂಡರು ಹಗಲು ಕುರುಡರಂತೆ ಇದ್ದರು. 

ಅಷ್ಟೇ ಅಲ್ಲದೇ ಅಕ್ರಮ ವ್ಯಾಪಾರಿಗಳಿಂದ ಮಾಮೂಲಿ ತೆಗೆದುಕೊಂಡು ತೆಪ್ಪಗೆ ಕುಳಿತ್ತಿದ್ದರು. ಆದ್ರೆ ಇದೀಗ ಖುದ್ದು ಹೈಕೋರ್ಟ್‌ ಸೂಚನೆ ನೀಡಿರುವುದರಿಂದ ಬಿಬಿಎಂಪಿ ಅಕ್ರಮ ಮಳಿಗೆಗಳನ್ನು ತೆರುವುಗೊಳಿಸಿದ್ದು, ಇದೀಗ ಅಂಡರ್‌ ಪಾಸ್ ಸುಂದರವಾಗಿ ಕಾಣುತ್ತಿದೆ. ಜತೆಗೆ ಪ್ರಯಾಣಿಕರಿಗೆ ಕಿರಿ-ಕಿರಿ ತಪ್ಪಿದಂತಾಗಿದೆ.

ರವಿಕುಮಾರ್ ಕಂಚನಹಳ್ಳಿ ಅವರು ಈ ಕಾರ್ಯಕ್ಕೆ ಲಂಚ ಮುಕ್ತ ಕರ್ನಾಟಕ ವೇದಿಕೆ ಮುಖಂಡ, ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.