ಬೆಂಗಳೂರು (ನ.26): ಇಂದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಮುಷ್ಕರ ನಡೆಯುತ್ತಿದ್ದು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾವ್ಯಾಪಿ  ಪ್ರತಿಭಟನೆ ನಡೆಸಲಾಗುತ್ತಿದೆ. 

ಆದರೆ ಮೆಜೆಸ್ಟಿಕ್ ಬಳಿ ಎಂದಿನಂತೆ ಆಟೋ ಟ್ಯಾಕ್ಸಿ ಓಲಾ ಹಾಗೂ ಊಬರ್ ಕ್ಯಾಬ್‌ಗಳು ರಸ್ತೆಗೆ ಇಳಿದಿವೆ. ಎಂದಿನಂತೆ ಆಟೋ, ಟ್ಯಾಕ್ಸಿಗಳಲ್ಲಿ ಜನರ ಸಂಚಾರ ಇದೆ. 

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಬಿಎಂಟಿಸಿ ಹಾಗೂ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ ಆನಂದ್ ಸರ್ಕಲ್ ಬಳಿ ಎಂದಿನಂತೆ ಸಂಚಾರ ನಡೆಯುತ್ತಿದೆ.

ಬೆಳಗ್ಗೆ 9 ಗಂಟೆ ನಂತರ ಆಟೋ, ಟ್ಯಾಕ್ಸಿ ಸಂಚಾರ ಇಳಿಕೆ ಸಾಧ್ಯತೆ  ಇದ್ದು, ಆಟೋ ಚಾಲಕರಿಗೆ ಮುಷ್ಕರದ ಬಗ್ಗೆ ಮಾಹಿತಿ ಇಲ್ಲ. ಇವತ್ತು ಮುಷ್ಕರ ಅಂತ ನಮಗೆ ಯಾರು ಹೇಳಿಲ್ಲ .  ಅದಕ್ಕೆ ನಾವು ರಸ್ತೆಗೆ ನಮ್ಮ ವಾಹನಗಳನ್ನ ಇಳಿಸಿದ್ದೇವೆ ಎಂದು ಆಟೋ ಚಾಲಕರು ಹೇಳಿದ್ದಾರೆ. 

ಬೇಡಿಕೆಗಳೇನು..?

ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ನಿಂದ ಪ್ರೀಡಂಪಾರ್ಕ್ ವರೆಗೆ ರ್ಯಾಲಿ ನಡೆಯಲಿದ್ದು  ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. 

ಆಟೋ ಹಾಗೂ ಟ್ಯಾಕ್ಸಿ ಚಾಲಕರ ಪ್ರಮುಖ ಬೇಡಿಕೆಗಳು : 

ಆಟೋ ಚಾಲಕರಿಗೆ 1 ಲಕ್ಷ & ಟ್ಯಾಕ್ಸಿ ಚಾಲಕರಿಗೆ 2 ಲಕ್ಷದವರೆಗೂ ಸಾಲ

ಜಾತಿವಾರು ನಿಗಮದಿಂದ ನೇರ ಸಾಲ ಯೋಜನೆಯಡಿಯಲ್ಲಿ ಸಾಲ

ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ‌ ಸ್ಥಾಪನೆ

ಕಂತುಗಳ ಮೇಲೆ ಹೆಚ್ಚು ಬಡ್ಡಿ ವಸೂಲಿ ನಿಲ್ಲಿಸಬೇಕು

ಬಡ್ಡಿ ವಜಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು

ಆಟೋ, ಟ್ಯಾಕ್ಸಿ ಚಾಲಕರಿಗೆ ಗೃಹ ಮಂಡಳಿಯಿಂದ ಮನೆ ಕಟ್ಟಿಸಿಕೊಡಬೇಕು

ಹೊಸ ಆಟೋ ರಿಕ್ಷಾ ಮಾರಾಟ ತೆರಿಗೆ ಶೇ.17 ರಿಂದ 5ಕ್ಕೆ ಇಳಿಸಬೇಕು

ಇ-ಪರ್ಮಿಟ್ ಆಧಾರ್ ಲಿಂಕ್ ಕಡ್ಡಾಯಗೊಳಿಸಬೇಕು

15 ವರ್ಷದ ಹಳೆ ವಾಹನಗಳ FC ಕಡ್ಡಾಯ ರದ್ದು ಮಾಡಬೇಕು

ಕೊರೊನಾದಿಂದ ಮೃತಪಟ್ಟ ಚಾಲಕರಿಗೆ 25 ಲಕ್ಷ ಪರಿಹಾರ

ಓಲಾ, ಊಬರ್ ಮಾದರಿಯಲ್ಲಿ ಸರ್ಕಾರ ಆ್ಯಪ್ ಆಧಾರಿತ ಸಂಸ್ಥೆ ಸ್ಥಾಪಿಸಬೇಕು

ನಾಳೆ 500 ಕ್ಕೂ ಹೆಚ್ಚು ಕಾರ್ಮಿಕ, ರೈತ ಸಂಘಟನೆ ಗಳಿಂದ ಮುಷ್ಕರಕ್ಕೆ ಕರೆ

 ಟ್ರಾಫಿಕ್ ಬಿಸಿ :  ಇನ್ನು ಬಂದ್ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಮಂದಿಗೆ ಟ್ರಾಫಿಕ್ ಬಿಸಿ ಸಾಧ್ಯತೆ ಇದ್ದು, ಕಾರ್ಮಿಕ, ರೈತ, ವಿದ್ಯಾರ್ಥಿ, ಮಹಿಳಾ ಸಂಘಟನೆ ಗಳಿಂದ ಮುಷ್ಕರ ನಡೆಸಲಾಗುತ್ತಿದೆ.  AITUC, CITU, ಕಿಸಾನ್ ಸಂಘರ್ಷ ಸಮಿತಿ, AICCTU, ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಸೇರಿ ವಿವಿಧ ಸಂಘಟನೆ ಗಳಿಂದ ಮುಷ್ಕರಕ್ಕೆ ಕರೆ ನೀಡಿದ್ದಾರೆ. 

ಗಾರ್ಮೆಂಟ್ಸ್‌ಗಳಿಂದಲೂ ಬೆಂಬಲ :  ಇಂದು ಗಾರ್ಮೆಂಟ್ಸ್ ಕಾರ್ಮಿಕರು ಬೀದಿಗಿಳಿಯಲಿದ್ದಾರೆ. ಈಗಾಗಲೇ ಗಾರ್ಮೆಂಟ್ಸ್ ಗಳಿಗೆ ನೋಟಿಸ್ ನೀಡಲಾಗಿದ್ದು,  ಕೆಲವು ಗಾರ್ಮೆಂಟ್ಸ್ ಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ.  ಲಾಕ್ ಡೌನ್ ಯಿಂದಾಗಿ ಸಮಸ್ಯೆ ಆಗಿದೆ ಮತ್ತೆ ಮುಷ್ಕರ ಕೂಡ ಬೇಡ ಅಂತ ಹೇಳಿವೆ.  ಆದರೆ ಬಹುತೇಕ ಗಾರ್ಮೆಂಟ್ಸ್ ಕಾರ್ಮಿಕರು ಈ ನಡುವೆಯೂ ರ್ಯಾಲಿಯಲ್ಲಿ ಭಾಗಿ ಆಗಲಿದ್ದಾರೆ ಎಂದು ಸುವರ್ಣ ನ್ಯೂಸ್. ಕಾಂ ಗೆ ಗಾರ್ಮೆಂಟ್ಸ್ ಲೇಬರ್ ಯೂನಿಯನ್ ಅಧ್ಯಕ್ಷೆ ರುಕ್ಮಿಣಿ  ಮಾಹಿತಿ ನೀಡಿದ್ದಾರೆ.