ಬೆಂಗಳೂರು : ಕೊನೆಗೂ ಜಯನಗರದ ನಾಲ್ಕನೇ ಬ್ಲಾಕ್‌ನ ನೂತನ ವ್ಯಾಪಾರಿ ಸಂಕೀರ್ಣಕ್ಕೆ ಮಂಗಳವಾರ ವ್ಯಾಪಾರಿಗಳು ಸ್ಥಳಾಂತರಗೊಂಡಿದ್ದಾರೆ.  ಕಳೆದ ನಾಲ್ಕು ವರ್ಷದ ಹಿಂದೆ ಉದ್ಘಾಟನೆ ಮಾಡಲಾಗಿದ್ದ ವ್ಯಾಪಾರಿ ಸಂಕೀರ್ಣಕ್ಕೆ ವ್ಯಾಪಾರಿಗಳು ಹೋಗುವುದಕ್ಕೆ ನಿರಾಕರಿಸಿದ್ದರು. ವ್ಯಾಪಾರಿ ಸಂಕೀರ್ಣ ಮಳಿಗೆಗಳ ಹಂಚಿಕೆ ಸೇರಿದಂತೆ ಇನ್ನಿತರ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿ ವ್ಯಾಪಾರಿಗಳು ಸ್ಥಳಾಂತರ ಮಾಡಿರಲಿಲ್ಲ. ಈಗ ಬಿಬಿಎಂಪಿ ಅಧಿಕಾರಿಗಳು ವ್ಯಾಪಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದ್ದಾರೆ.

ವ್ಯಾಪಾರಿಗಳು ಹಳೆಯ ವ್ಯಾಪಾರಿ ಸಂಕೀರ್ಣವನ್ನು ಸಂಪೂರ್ಣವಾಗಿ ಬಂದ್‌ ಮಾಡಬೇಕು. ಇಲ್ಲವಾದರೆ, ಗ್ರಾಹಕರು ಹೊಸ ಸಂಕೀರ್ಣಕ್ಕೆ ಬರುವುದಿಲ್ಲ ಎಂಬ ಷರತ್ತು ವಿಧಿಸಿದ್ದರು. ಅದರಂತೆ ಮಂಗಳವಾರ ಹಳೆಯ ಸಂಕೀರ್ಣವನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದ್ದು, ವ್ಯಾಪಾರಿಗಳು ಹೊಸ ಕಟ್ಟಡಕ್ಕೆ ಹೋಗುತ್ತಿದ್ದಾರೆ.

ಬಿಡಿಎ ವತಿಯಿಂದ .56 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಿ ಬಿಬಿಎಂಪಿ ಹಸ್ತಾಂತರ ಮಾಡಲಾಗಿತ್ತು. ಒಟ್ಟು 174 ಮಳಿಗೆಗಳಿವೆ. ಹಳೆಯ ಕಟ್ಟಡ ನವೀಕರಣಕ್ಕೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಕಟ್ಟಡ ನವೀಕರಣದ ಬಳಿಕ ಇದೀಗ ಸ್ಥಳಾಂತರಗೊಂಡಿರುವ ಎಲ್ಲ ವ್ಯಾಪಾರಿಗಳು ವಾಪಾಸ್‌ ಬರಲಿದ್ದಾರೆ ಎಂದು ದಕ್ಷಿಣ ವಲಯ ಜಂಟಿ ಆಯುಕ್ತ ನಕುಲ್‌ ತಿಳಿಸಿದ್ದಾರೆ.

1973ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ್‌ ಅರಸು ಅವರು ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿ 1975ರಲ್ಲಿ ಉದ್ಘಾಟನೆ ಮಾಡಿದರು. ಆಗ ಜಯನಗರದ ಮಾರುಕಟ್ಟೆ ಏಷ್ಯಾದಲ್ಲಿ ಸುಸಜ್ಜಿತ ಮಾರುಕಟ್ಟೆಎಂಬ ಪ್ರಖ್ಯಾತಿ ಪಡೆದಿತ್ತು.