ಬೆಂಗಳೂರು [ಜು.17] :  ಅಧಿಕ ವಾಹನ ದಟ್ಟಣೆಯ ಜಯದೇವ ಜಂಕ್ಷನ್‌ ಮೇಲ್ಸೇತುವೆ ಮಾರ್ಗದ ಲೂಪ್‌ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಜುಲೈ 22ರಿಂದ ತೆರವು ಕಾಮಗಾರಿ ಆರಂಭಗೊಳ್ಳಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿ) ಜು.15ರಂದು ಜಯದೇವ ಫ್ಲೈಓವರ್‌ ಲೂಪ್‌ ತೆರವುಗೊಳಿಸಲು ತೀರ್ಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಬನ್ನೇರುಘಟ್ಟದಿಂದ ಕೇಂದ್ರ ಸಿಲ್ಕ್ ಬೋರ್ಡ್‌ ಕಡೆಗೆ ಸಂಚರಿಸುವ ಫ್ಲೈಓವರ್‌ ರಸ್ತೆಯನ್ನು ಮುಚ್ಚಲು ನಿರ್ಧರಿಸಿತ್ತು. ಜತೆಗೆ ವಾಹನ ಸವಾರರಿಗೆ ಅನುಕೂಲವಾಗುವಂತೆ ಬನ್ನೇರುಘಟ್ಟ- ಕೇಂದ್ರ ಸಿಲ್ಕ್ ಬೋರ್ಡ್‌ಗೆ ಸಂಪರ್ಕಿಸುವ ಮಾರ್ಗಗಳನ್ನು ಬದಲಿಸಲಾಗಿತ್ತು. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾಫಿಕ್‌ ವ್ಯವಸ್ಥೆ ಅಧ್ಯಯನಕ್ಕಾಗಿ ತಾತ್ಕಾಲಿಕವಾಗಿ ಲೂಪ್‌ ತೆರವು ಕಾರ್ಯಾಚರಣೆಯನ್ನು ಮುಂದೂಡಿದೆ.

ಈ ಕುರಿತು ಮಾಹಿತಿ ನೀಡಿರುವ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು, ಮೇಲ್ಸೇತುವೆ ಲೂಪ್‌ ತೆರವು ಕಾರ್ಯಾರಣೆ ಆರಂಭಕ್ಕೂ ಮೊದಲು ಬನ್ನೇರುಘಟ್ಟದಿಂದ ಕೇಂದ್ರ ಸಿಲ್ಕ್ ಬೋರ್ಡ್‌ಗೆ ತೆರಳಲು ಜಯದೇವ ಜಂಕ್ಷನ್‌ ಮೇಲ್ಸೇತುವೆ ಲೂಪ್‌ ಬಳಸುವ ವಾಹನಗಳಿಗೆ ಪರಾರ‍ಯಯ ಮಾರ್ಗದ ವ್ಯವಸ್ಥೆ ಕಲ್ಪಿಸಿದ ಬಳಿಕ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ. ಆದ್ದರಿಂದ ಜುಲೈ 22ಕ್ಕೆ ಮೇಲ್ಸೇತುವೆ ಲೂಪ್‌ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಜಯದೇವ ಮೇಲ್ಸೇತುವೆ ಮುಚ್ಚುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಈ ಮಾರ್ಗವನ್ನು ಬಂದ್‌ ಮಾಡುವುದಕ್ಕೂ ಮೊದಲೇ ಪರ್ಯಾಯ ಮಾರ್ಗ ಕಂಡುಕೊಳ್ಳುವ ಅವಶ್ಯಕತೆ ಇದೆ. ದಟ್ಟಣೆ ಸಮಯ(ಪೀಕ್‌ ಅವರ್‌)ದಲ್ಲಿ ಈ ಮಾರ್ಗದಲ್ಲಿ ತೀವ್ರ ಟಾಫಿಕ್‌ ಸಮಸ್ಯೆ ಇದೆ ಎಂದು ಟ್ರಾಫಿಕ್‌ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾಹನ ದಟ್ಟಣೆಯ ಜಯದೇವ ಜಂಕ್ಷನ್‌ ಮೇಲ್ಸೇತುವೆಯ ಮರು ನಿರ್ಮಾಣ ಮತ್ತು ಮೆಟ್ರೋ ನಿಲ್ದಾಣ ರೀಚ್‌ 5(ಆರ್‌ವಿ ರಸ್ತೆ-ಬೊಮ್ಮಸಂದ್ರ) ಮತ್ತು ರೀಚ್‌ 6(ಗೊಟ್ಟಿಕೆರೆ-ನಾಗವಾರ) ಸಂಪರ್ಕ ಕಲ್ಪಿಸುವ ಕಾಮಗಾರಿ ನಡೆಯುತ್ತಿದೆ. ಇದರಿಂದ ಬಿಟಿಎಂ ಲೇಔಟ್‌, ಜಯನಗರ ಮತ್ತು ಬನ್ನೇರುಘಟ್ಟರಸ್ತೆ ವಾಹನ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ. ಈಗಾಗಲೇ ರಸ್ತೆ ಮಾರ್ಗ ಬದಲಾವಣೆಗೆ ಸಂಚಾರಿ ಪೊಲೀಸರಿಂದ ಹಸಿರು ನಿಶಾನೆ ಸಿಕ್ಕಿದೆ. ಆದ್ದರಿಂದ ಬನಶಂಕರಿಯಿಂದ ಕೇಂದ್ರ ಸಿಲ್ಕ್ ಬೋರ್ಡ್‌ ಕಡೆಗೆ ಸಂಚರಿಸುವ ವಾಹನ ಸವಾರರು ಜಯದೇವ ಅಂಡರ್‌ಪಾಸ್‌ ಮತ್ತು ಹೊರ ವರ್ತುಲ ರಸ್ತೆ ಮೇಲ್ಸೇತುವೆಯಿಂದ ಸಂಚರಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಮೆಟ್ರೋ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.