ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಆರೋಪದ ಮೇಲೆ, ಈ ಹಿಂದೆ ಪ್ರೊಫೆಸರ್ ಹಾಗೂ ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ಎಂದು ಗುರುತಿಸಿಕೊಂಡಿದ್ದ ಹನಿಯೂರು ಚಂದ್ರೇಗೌಡನನ್ನು ಬಂಧಿಸಲಾಗಿದೆ. ಆತ ಆರ್‌ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದ ಪ್ರಕರಣವೂ ಬೆಳಕಿಗೆ ಬಂದಿದ್ದು, ಇದೊಂದು ಸಂಘಟಿತ ಜಾಲವಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು ನಗರದಲ್ಲಿ ಹಲವಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಬಂಧಿತರಾಗಿರುವ ಹನಿಯೂರು ಚಂದ್ರೇಗೌಡ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿಂದೆ ಸಾರ್ವಜನಿಕ ಜೀವನದಲ್ಲಿ ವಿವಿಧ ರೀತಿಯ ಗುರುತುಗಳನ್ನು ಕಟ್ಟಿಕೊಂಡು ಹೆಸರು ಮಾಡಿದ್ದ ಚಂದ್ರೇಗೌಡನ ನಿಜಸ್ವರೂಪ ಇದೀಗ ಬಹಿರಂಗವಾಗುತ್ತಿರುವುದು ಗಮನಾರ್ಹ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನಿಯೂರು ಚಂದ್ರೇಗೌಡ, ತಾನು ಕನ್ನಡ ಅಸೋಸಿಯೇಟ್ ಪ್ರೊಫೆಸರ್, ಬುಡಕಟ್ಟು ಜನಪದ ಸಂಶೋಧಕ, ಕಿರುತೆರೆ ನಟ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ ಎಂದು ಹೇಳಿಕೊಂಡು ಮತದಾರರ ಮುಂದೆ ತನ್ನನ್ನು ಪರಿಚಯಿಸಿಕೊಂಡಿದ್ದ. ಹಣಬಲ ಮತ್ತು ತೋಳ್ಬಲದ ವಿರುದ್ಧ ವಿದ್ಯಾಬಲಕ್ಕೆ ಮತ ನೀಡಿ ಎಂಬ ಘೋಷಣೆಯೊಂದಿಗೆ ಪ್ರಚಾರ ನಡೆಸಿದ್ದ ಆತ, ತನ್ನನ್ನು ನಿಮ್ಮ ನಾಯಿ ಎಂದು ಬಿಂಬಿಸುವ ರೀತಿಯ ಪೋಸ್ಟ್‌ಗಳ ಮೂಲಕವೂ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದನು.

ಆದರೆ ಈಗ ಹಲವು ಮಹಿಳೆಯರೊಂದಿಗೆ ಆತ್ಮೀಯತೆ ಬೆಳೆಸಿ, ಅವರನ್ನು ದೈಹಿಕವಾಗಿ ದುರುಪಯೋಗಪಡಿಸಿಕೊಂಡು ಖಾಸಗಿ ಫೋಟೋ ಹಾಗೂ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನೆಂಬ ಗಂಭೀರ ಆರೋಪಗಳಡಿ ಆತ ಬಂಧನಕ್ಕೊಳಗಾಗಿದ್ದಾನೆ. ಈ ಪ್ರಕರಣದ ತನಿಖೆ ಮುಂದುವರಿದಂತೆ, ಅವನ ವಿರುದ್ಧ ಇನ್ನಷ್ಟು ಅಚ್ಚರಿ ಮೂಡಿಸುವ ಮಾಹಿತಿ ಹೊರಬರುತ್ತಿದೆ.

ಚಂದ್ರೇಗೌಡ ವಿರುದ್ಧ ಬೆದರಿಕೆ ಪ್ರಕರಣ

ಇದಕ್ಕೂ ಮೊದಲು ಚಂದ್ರೇಗೌಡ ವಿರುದ್ಧ ಬೆದರಿಕೆ ಪ್ರಕರಣವೂ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆ ಪ್ರಕರಣದಲ್ಲಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಅವರಿಗೆ ಆತ ಬೆದರಿಕೆ ಹಾಕಿದ್ದನೆಂದು ಆರೋಪಿಸಲಾಗಿದೆ.

ಈ ಕುರಿತು ಪ್ರತಾಪ್ ನೀಡಿರುವ ಹೇಳಿಕೆಯಲ್ಲಿ, ಕಳೆದ ಆರು-ಏಳು ತಿಂಗಳಿಂದ ಚಂದ್ರೇಗೌಡ ಆರ್‌ಟಿಐ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಅಧಿಕಾರಿಗಳನ್ನು ಬೆದರಿಸುತ್ತಿದ್ದನೆಂದು ತಿಳಿಸಿದ್ದಾರೆ. “ಆರ್‌ಟಿಐ ಅರ್ಜಿಗಳನ್ನು ಹಾಕಿ ನಂತರ ಬೆದರಿಕೆ ಹಾಕುವುದು ಅವನ ಚಟುವಟಿಕೆಯಾಗಿತ್ತು. ನನ್ನ ಸ್ನೇಹಿತರ ಮೂಲಕ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದನು. ನಂತರ ನೇರವಾಗಿ ಮೆಸೇಜ್ ಕಳುಹಿಸಿ ‘ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ, ನಿನ್ನ ನೇಮಕಾತಿ ಸರಿಯಿಲ್ಲ, ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ’ ಎಂದು ಬೆದರಿಕೆ ಹಾಕಿದನು” ಎಂದು ಪ್ರತಾಪ್ ವಿವರಿಸಿದ್ದಾರೆ.

ಇತರರಿಗೂ ಇದೇ ರೀತಿಯಲ್ಲಿ ಬೆದರಿಕೆ

ಅಷ್ಟೇ ಅಲ್ಲದೆ, ಅವನ ವರ್ತನೆ ಕ್ರಮೇಣ ಅತಿರೇಕಕ್ಕೆ ಹೋಗಿದ್ದು, ಕಚೇರಿ ಬಳಿ ಬಂದು ಅಧಿಕಾರಿಗಳನ್ನು ಬೆದರಿಸಲು ಆರಂಭಿಸಿದ್ದಾನೆ. ಈ ಹಿನ್ನೆಲೆ ಪ್ರತಾಪ್ ಅವರು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಚಂದ್ರೇಗೌಡ ಇತರರಿಗೂ ಇದೇ ರೀತಿಯಲ್ಲಿ ಬೆದರಿಕೆ ಹಾಕಿದ್ದಾನೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ಈಗ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತನಾಗಿರುವ ಹಿನ್ನೆಲೆಯಲ್ಲಿ, ಅವನ ಎಲ್ಲಾ ಚಟುವಟಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪ್ರತಾಪ್ ಒತ್ತಾಯಿಸಿದ್ದಾರೆ. ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆಯುವುದು ಅವನ ಪ್ರಮುಖ ಉದ್ದೇಶವಾಗಿದ್ದು, ಇದರ ಹಿಂದೆ ಒಂದು ತಂಡವೂ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆ ಇದೆ. ಲ್ಯಾಪ್‌ಟಾಪ್ ಹಾಗೂ ಇತರ ಸಾಧನಗಳಲ್ಲಿ ಇರುವ ಡೇಟಾವನ್ನು ಪರಿಶೀಲಿಸಬೇಕು. ಕೆಲವರು ಹಣ ನೀಡಿ ಅವನ ಮೂಲಕ ಕೆಲಸ ಮಾಡಿಸಿಕೊಂಡಿರಬಹುದು” ಎಂದು ಅವರು ಹೇಳಿದ್ದಾರೆ.

ಒಟ್ಟಿನಲ್ಲಿ, ಹನಿಯೂರು ಚಂದ್ರೇಗೌಡ ಪ್ರಕರಣವು ಸಾಮಾನ್ಯ ಅಪರಾಧ ಪ್ರಕರಣಕ್ಕಿಂತ ಹೆಚ್ಚಾಗಿ ಸಂಘಟಿತ ವಂಚನೆ ಮತ್ತು ಬ್ಲ್ಯಾಕ್‌ಮೇಲ್ ಜಾಲದ ಸುಳಿವು ನೀಡುತ್ತಿರುವುದರಿಂದ, ಪೊಲೀಸರು ಈ ದಿಕ್ಕಿನಲ್ಲಿ ತೀವ್ರ ತನಿಖೆ ಮುಂದುವರಿಸಿದ್ದಾರೆ.