Asianet Suvarna News Asianet Suvarna News

ಆರ್‌ಆರ್‌ನಗರ ಬೈಎಲೆಕ್ಷನ್‌: 'ಮತದಾನಕ್ಕೆ ಕೊರೋನಾ ಸೋಂಕಿತರ ನಿರಾಸಕ್ತಿ'

ಸುರಕ್ಷಿತ ಕ್ರಮ ಕೈಗೊಂಡರೂ ಬರಲೊಪ್ಪುತ್ತಿಲ್ಲ| ಜೀವ ಉಳಿದರೆ ಸಾಕು ಎನ್ನುತ್ತಿರುವ ಸೋಂಕಿತರು| ಚುನಾವಣಾ ಆಯುಕ್ತರ ಬೇಸರ|ಮುನ್ನೆಚ್ಚರಿಕೆ ಕ್ರಮವಾಗಿ ರೌಡಿಶೀಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ|

Bengaluru District Electorate N Manjunath Prasad Talks Over RR Nagar Byelection grg
Author
Bengaluru, First Published Nov 2, 2020, 7:10 AM IST

ಬೆಂಗಳೂರು(ನ.02): ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1,500 ಕೊರೋನಾ ಸೋಂಕಿತರಿದ್ದಾರೆ. ನ.3ರಂದು ನಡೆಯಲಿರುವ ಮತದಾನಕ್ಕೆ ಆ್ಯಂಬುಲೆನ್ಸ್‌, ಪಿಪಿಇ ಕಿಟ್‌ ಸೇರಿದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಮತದಾನ ಮಾಡಲು ಸೋಂಕಿತರು ನಿರಾಸಕ್ತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಭಾನುವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಿದ್ಧತೆ ಕುರಿತು ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಕೊರೋನಾ ಸೋಂಕಿತರು ಮತ್ತು ಶಂಕಿತರಿಗೆ 90 ಆ್ಯಂಬುಲೆನ್ಸ್‌, ಸೋಂಕಿತರಿಗೆ, ಮತಗಟ್ಟೆಅಧಿಕಾರಿ, ಸಿಬ್ಬಂದಿಗೆ ಪಿಪಿಇ ಕಿಟ್‌ ಸೇರಿದಂತೆ ಎಲ್ಲರೀತಿಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರಿಗೆ ವಾಹನ ವ್ಯವಸ್ಥೆ ಮಾಡುವುದಕ್ಕೆ ಕರೆ ಮಾಡಿದರೆ ಮತದಾನಕ್ಕೆ ಆಸಕ್ತಿ ತೋರುತ್ತಿಲ್ಲ. ಸೋಂಕಿನಿಂದ ಗುಣಮುಖರಾಗಿ ಜೀವ ಉಳಿದರೆ ಸಾಕು ಎಂದು ಹೇಳುತ್ತಿದ್ದಾರೆ ಎಂದರು.

148 ಸೋಂಕಿತ ಮತದಾರರು:

ಮತದಾನ ಚೀಟಿ ನೀಡುವ ಸಂದರ್ಭದಲ್ಲಿಯೂ ಸೋಂಕಿತರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಈವರೆಗೆ ಆರ್‌ಆರ್‌ ನಗರ ಕ್ಷೇತ್ರದಲ್ಲಿ ಕೊರೋನಾ ಸೋಂಕು ದೃಢಪಟ್ಟವರ ಪೈಕಿ 148 ಸೋಂಕಿತ ಮತದಾರರನ್ನು ಗುರುತಿಸಲಾಗಿದೆ. ಆದರೆ, ಅವರು ಮತದಾನ ಮಾಡುವ ಬಗ್ಗೆ ದೃಢಪಡಿಸಿಲ್ಲ. 678 ಮತಗಟ್ಟೆಗಳಲ್ಲಿ ಕೊರೋನಾ ಸೋಂಕಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತಲಾ ಒಬ್ಬ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುವುದು. ಚುನಾವಣೆಗೆ 175 ಬಿಎಂಟಿಸಿ ಬಸ್‌ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

RR ನಗರ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದ ದರ್ಶನ್ ವಿರುದ್ಧ ಕೇಸ್ ಬುಕ್..!

ನ.3ರ ಮಧ್ಯರಾತ್ರಿವರೆಗೆ ಮದ್ಯ ನಿಷೇಧ

ಕ್ಷೇತ್ರದ ವ್ಯಾಪ್ತಿಯಲ್ಲಿ ನ.1ರ ಸಂಜೆ 5ರಿಂದ ನ.3ರ ಮಧ್ಯರಾತ್ರಿ 12ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ನ.2ರಂದು ಮನೆ ಮನೆ ಪ್ರಚಾರಕ್ಕೆ ಅವಕಾಶವಿದೆ. ಐದು ಜನರಿಗಿಂತ ಹೆಚ್ಚು ಮಂದಿ ಮನೆ ಪ್ರಚಾರದಲ್ಲಿ ಭಾಗವಹಿಸುವಂತಿಲ್ಲ. ನ.1ರ ಸಂಜೆ 6ರ ನಂತರ ಬೇರೆ ಕ್ಷೇತ್ರದ ಮುಖಂಡರು ಕ್ಷೇತ್ರದಲ್ಲಿ ವಾಸ್ತವ್ಯವಿದ್ದರೆ ಪ್ರಕರಣ ದಾಖಲಿಸಲಾಗುವುದು ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.
ನ.2ರ ಬೆಳಗ್ಗೆ ಮಸ್ಟರಿಂಗ್‌ ಸೆಂಟರ್‌ ತೆರೆಯಲಿದ್ದು, ಚುನಾವಣಾ ಸಿಬ್ಬಂದಿಗೆ ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಮತ ಯಂತ್ರ ವಿತರಿಸಲಾಗುವುದು. ಬುಧವಾರ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಗಲಿದೆ ಎಂದು ತಿಳಿಸಿದರು.

82 ಸೂಕ್ಷ್ಮ ಮತಗಟ್ಟೆ

ನಗರ ಪೊಲೀಸ್‌ ಆಯುಕ್ತ ಕಮಲ್‌ಪಂತ್‌ ಮಾತನಾಡಿ, 678 ಮತಗಟ್ಟೆಯ ಪೈಕಿ 82 ಸೂಕ್ಷ್ಮ ಮತಗಟ್ಟೆಗಳಾಗಿವೆ. ಚುನಾವಣೆಗಾಗಿ ಒಟ್ಟು 2,563 ಪೊಲೀಸ್‌ ಅಧಿಕಾರಿ ಸಿಬ್ಬಂದಿ ನಿಯೋಜಿಸಲಾಗಿದೆ. 8 ಎಸಿಪಿ, 30 ಪಿಐ, 94 ಪಿಎಸ್‌ಐ, 185 ಎಎಸ್‌ಐ, 1,547 ಪೊಲೀಸ್‌ ಕಾನ್‌ಸ್ಟೇಬಲ್‌, 699 ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸಲಾಗಿದೆ. 40 ಫ್ಲೈಯಿಂಗ್‌ ಸ್ಕ್ವಾಡ್‌, 9 ಚೆಕ್‌ಫೋಸ್ಟ್‌, 19 ಕೆಎಸ್‌ಆರ್‌ಪಿ ತುಕಡಿ, 32 ಹೊಯ್ಸಳಗಳನ್ನು ನಿಯೋಜಿಸಲಾಗಿದೆ. ಈವರೆಗೆ 304 ಬಂದೂಕುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೌಡಿಶೀಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು. ಈವರೆಗೆ 8 ಪ್ರಕರಣ ದಾಖಲಿಸಲಾಗಿದೆ. 16 ದೂರಗಳು ಬಂದಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

410 ಅಂಚೆ ಮತದಾನ

ಸೋಂಕಿನ ಹಿನ್ನೆಲೆಯಲ್ಲಿ 80 ವರ್ಷ ಮೇಲ್ಪಟ್ಟ 5,560 ಹಿರಿಯ ನಾಗರಿಕರಿಗೆ, 690 ಅಂಗವಿಕರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಈ ಪೈಕಿ 388 ಹಿರಿಯ ನಾಗರಿಕರು ಹಾಗೂ 22 ಅಂಗವಿಕಲರು ಈಗಾಗಲೇ ಮತದಾನ ಮಾಡಿದ್ದಾರೆ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

ಸಹಾಯವಾಣಿ ಸಂಖ್ಯೆ

ಸೋಂಕಿತರ ಜೊತೆಗೆ ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು ಹಾಗೂ ಕೊರೋನಾ ಸೋಂಕಿನ ಲಕ್ಷಣ ಹೊಂದಿರುವವರು, ಸೋಂಕು ಪರೀಕ್ಷೆಗೆ ಒಳಗಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವವರಿಗೆ ಆ್ಯಂಬುಲೆನ್ಸ್‌ ವ್ಯವಸ್ಥೆಗಾಗಿ ಸಹಾಯವಾಣಿ ಸಂಖ್ಯೆ 080-28600954/28604331/28601050, ಮೊಬೈಲ್‌ ಸಂಖ್ಯೆ 9482224474ಗೆ ಸಂಪರ್ಕಿಸಬಹುದಾಗಿದೆ.
 

Follow Us:
Download App:
  • android
  • ios