ಬೆಂಗಳೂರು[ಸೆ.29]: ನಿನ್ನೆ ತಡ ರಾತ್ರಿ ಸಿಸಿಬಿ ಪೊಲೀಸರು ಅನಧಿಕೃತ ಪಬ್, ಬಾರ್ ಆಂಡ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿ, ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ್ದಾರೆ.

ನಗರದ ಮೆಜೆಸ್ಟಿಕ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಇಂದಿರಾನಗರದಲ್ಲಿ ದಾಳಿ ನಡೆಸಲಾಗಿದೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದಲ್ಲಿ ಒಟ್ಟು 100 ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿದ್ದರು. ಒಟ್ಟು 20 ಕ್ಕೂ ಹೆಚ್ಚು ಕಡೆ ನಡೆದ ದಾಳಿಯಲ್ಲಿ ಕೆಲವೆಡೆ ಯುವತಿಯರನ್ನು ಅಕ್ರಮವಾಗಿ ಕೂಡಿಟ್ಟುಕೊಂಡು ಬಾರ್ ಗರ್ಲ್ಸ್ ಆಗಿ ಕೆಲಸ ಮಾಡಿಸುತ್ತಿರುವುದು ಕಂಡು ಬಂದಿದೆ.

ದಾಳಿ ವೇಳೆ ಅಕ್ರಮವಾಗಿ ಪಬ್ ಗಳನ್ನು ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಪಬ್ ಗಳ‌ ಹೆಸರಿನಲ್ಲಿ ‌ಮಾಂಸದಂಧೆ ನಡೆಸುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆಯಾ ಪಬ್ ಗಳ ಸಿಬ್ಬಂದಿಯನ್ನು ವಶಕ್ಕೆ ಪಡೆದು, ‌ವಿಚಾರಣೆ ನಡೆಸಲಾಗುತ್ತಿದೆ. ಕೆಲ ಯುವತಿಯರನ್ನು ರಕ್ಷಿಸಿ ಅವರಿಂದಲೂ ಸಿಸಿಬಿ ಪೊಲೀಸರು ಹೇಳಿಕೆ ಪಡೆಯುತ್ತಿದ್ದಾರೆ. ಅಕ್ರಮವೆಸಗಿದ ಆಯಾ ಪಬ್ ಗಳು ಹಾಗೂ‌ ಬಾರ್ ಆಂಡ್ ರೆಸ್ಟೋರೆಂಟ್ ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

(ಸಾಂದರ್ಭಿಕ ಚಿತ್ರ)