ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ ಬೇತಮಂಗಲ-ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಮಾರ್ಗ ಸಂಚಾರಕ್ಕೆ ಮುಕ್ತವಾಗಿದೆ. ಇದರಿಂದ ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗೆ ಒಟ್ಟು 100 ಕಿ.ಮೀ ನಿರಂತರ ಸಂಚಾರ ಸಾಧ್ಯವಾಗಿದ್ದು, ಚೆನ್ನೈ, ತಿರುಪತಿ ಕಡೆಗಿನ ಪ್ರಯಾಣದ ಸಮಯ ಉಳಿತಾಯವಾಗಲಿದೆ.

ಬೆಂಗಳೂರು: ದೇಶದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ‘ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ’ (Bengaluru-Chennai Expressway) ಕಾಮಗಾರಿ ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ದಾಟಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಆಂಧ್ರಪ್ರದೇಶದ ವ್ಯಾಪ್ತಿಗೆ ಒಳಪಡುವ ಬೇತಮಂಗಲದಿಂದ ಬೈರೆಡ್ಡಿಪಲ್ಲಿ ನಡುವಿನ 25 ಕಿ.ಮೀ ಉದ್ದದ ಹೊಸ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರೊಂದಿಗೆ, ಸಿಲಿಕಾನ್ ಸಿಟಿ ಬೆಂಗಳೂರಿನಿಂದ (ಹೊಸಕೋಟೆ) ಆಂಧ್ರಪ್ರದೇಶದ ಬೈರೆಡ್ಡಿಪಲ್ಲಿಯವರೆಗೆ ಸುಮಾರು 100 ಕಿ.ಮೀ ವರೆಗೆ ಯಾವುದೇ ತಡೆಯಿಲ್ಲದೆ ನಿರಂತರವಾಗಿ ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸಲು ವಾಹನ ಸವಾರರಿಗೆ ಅವಕಾಶ ಸಿಕ್ಕಂತಾಗಿದೆ.

ಚೆನ್ನೈ, ತಿರುಪತಿ, ಚಿತ್ತೂರಿಗೆ ತೆರಳುವವರಿಗೆ ಸಮಯ ಉಳಿತಾಯ

ಈ ಹಿಂದೆ 2025ರ ಆರಂಭದಲ್ಲಿ ಕರ್ನಾಟಕ ವ್ಯಾಪ್ತಿಯ ಹೊಸಕೋಟೆಯಿಂದ ಬೇತಮಂಗಲದವರೆಗಿನ 71 ಕಿ.ಮೀ ಮಾರ್ಗವನ್ನು ಮುಕ್ತಗೊಳಿಸಲಾಗಿತ್ತು. ಈಗ ಅದರ ಮುಂದುವರಿದ ಭಾಗವಾಗಿ ಬೇತಮಂಗಲ-ಬೈರೆಡ್ಡಿಪಲ್ಲಿ (25 ಕಿ.ಮೀ) ರಸ್ತೆಯೂ ಸಿದ್ಧವಾಗಿದೆ.

ಬೆಂಗಳೂರಿನಿಂದ ಚಿತ್ತೂರು, ತಿರುಪತಿ ಹಾಗೂ ಚೆನ್ನೈ ಕಡೆಗೆ ತೆರಳುವ ವಾಹನ ಸವಾರರು ಬೈರೆಡ್ಡಿಪಲ್ಲಿಯವರೆಗೆ ಈ ಎಕ್ಸ್‌ಪ್ರೆಸ್‌ವೇ ಬಳಸಿ, ನಂತರ ಅಲ್ಲಿಂದ ಜಿಲ್ಲಾ ರಸ್ತೆಗಳ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಬಹುದಾಗಿದೆ. ಇದರಿಂದ ಪ್ರಯಾಣದ ಸಮಯ ಮತ್ತು ಇಂಧನ ಭಾರಿ ಪ್ರಮಾಣದಲ್ಲಿ ಉಳಿತಾಯವಾಗಲಿದೆ. ಸದ್ಯ ಬೈರೆಡ್ಡಿಪಲ್ಲಿ ಟೋಲ್ ಪ್ಲಾಜಾದಲ್ಲಿ ಪ್ರತಿದಿನ ಸರಾಸರಿ ₹2.2 ಲಕ್ಷ ಟೋಲ್ ಸಂಗ್ರಹವಾಗುತ್ತಿದೆ.

ಕಾಮಗಾರಿಯ ಪ್ರಸ್ತುತ ಸ್ಥಿತಿಗತಿ: ಡಿಸೆಂಬರ್ 2026ಕ್ಕೆ ಇಡೀ ರಸ್ತೆ ಮುಕ್ತ!

ಒಟ್ಟು 262 ಕಿ.ಮೀ ಉದ್ದದ ಈ ಇಡೀ ಎಕ್ಸ್‌ಪ್ರೆಸ್‌ವೇ 2026ರ ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ.

  • ಆಂಧ್ರಪ್ರದೇಶ ವ್ಯಾಪ್ತಿಯಲ್ಲಿ ಬರುವ 85 ಕಿ.ಮೀ ಎಕ್ಸ್‌ಪ್ರೆಸ್‌ವೇ ರಸ್ತೆಯನ್ನು ಮೂರು ಪ್ಯಾಕೇಜ್‌ಗಳಾಗಿ ನಿರ್ಮಿಸಲಾಗುತ್ತಿದೆ:
  • ಬೇತಮಂಗಲದಿಂದ ಬೈರೆಡ್ಡಿಪಲ್ಲಿ (25 ಕಿ.ಮೀ): ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಿದೆ.
  • ಬಂಗಾರಪಾಳೆಂನಿಂದ ಗುಡಿಪಾಲ (29 ಕಿ.ಮೀ): ಈ ಕಾಮಗಾರಿಯೂ ಪೂರ್ಣಗೊಂಡಿದೆ.

ಬೈರೆಡ್ಡಿಪಲ್ಲಿಯಿಂದ ಬಂಗಾರಪಾಳೆಂ (31 ಕಿ.ಮೀ): ಈ ಮಾರ್ಗದಲ್ಲಿ ಅರಣ್ಯ ಇಲಾಖೆಯ ಅನುಮತಿ ವಿಳಂಬವಾಗಿದ್ದರಿಂದ 11 ಕಿ.ಮೀ ಕಾಮಗಾರಿ ಬಾಕಿ ಉಳಿದಿದೆ. ಇಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕಾಗಿ ಅತ್ಯಾಧುನಿಕ ಅಂಡರ್‌ಪಾಸ್ (Eco-ducts/Underpass) ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗಿನ ಟೋಲ್ ದರ ಪಟ್ಟಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸಕೋಟೆಯಿಂದ ಬೈರೆಡ್ಡಿಪಲ್ಲಿವರೆಗಿನ ಅಧಿಕೃತ ಟೋಲ್ ದರಗಳನ್ನು ಪ್ರಕಟಿಸಿದೆ. ಮುಖ್ಯ ಎಕ್ಸ್‌ಪ್ರೆಸ್‌ವೇ ಮಾರ್ಗವನ್ನು ಬಳಸುವ ವಾಹನಗಳಿಗೆ ಮಾತ್ರ ಟೋಲ್ ಅನ್ವಯವಾಗಲಿದ್ದು, ಪ್ರವೇಶ (Entry) ಮತ್ತು ನಿರ್ಗಮನ (Exit) ರ್ಯಾಂಪ್‌ಗಳನ್ನು ಬಳಸುವ ವಾಹನಗಳಿಗೆ ಯಾವುದೇ ಟೋಲ್ ಇರುವುದಿಲ್ಲ ಎಂದು NHAI ಸ್ಪಷ್ಟಪಡಿಸಿದೆ.

ಏಕಮುಖ ಪ್ರಯಾಣ ದರ

  • ಕಾರು, ಜೀಪ್, ವ್ಯಾನ್ : 195 ರೂ
  • ಲಘು ವಾಣಿಜ್ಯ ವಾಹನಗಳು (LCV) / ಮಿನಿಬಸ್ : 315 ರೂ
  • ಟ್ರಕ್ ಮತ್ತು ಬಸ್ : 655 ರೂ

ದ್ವಿಮುಖ ಪ್ರಯಾಣ ದರ

  • ಕಾರು, ಜೀಪ್, ವ್ಯಾನ್ : 290 ರೂ
  • ಲಘು ವಾಣಿಜ್ಯ ವಾಹನಗಳು (LCV) / ಮಿನಿಬಸ್ : 470 ರೂ
  • ಟ್ರಕ್ ಮತ್ತು ಬಸ್ : 985 ರೂ

ನಿಯಮಿತವಾಗಿ ಸಂಚರಿಸುವವರಿಗಾಗಿ ತಿಂಗಳಿಗೆ 50 ಏಕಮುಖ ಸಂಚಾರಕ್ಕೆ ಅನ್ವಯವಾಗುವಂತೆ ₹6,465 ದರದ ವಿಶೇಷ ಪಾಸ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಬೆಂಗಳೂರು ಮತ್ತು ಕರ್ನಾಟಕಕ್ಕೆ ಆಗುವ ಲಾಭಗಳೇನು?

  • ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಳ್ಳುವುದರಿಂದ ಕರ್ನಾಟಕದ ಕೈಗಾರಿಕಾ ಮತ್ತು ಆರ್ಥಿಕ ವಲಯಕ್ಕೆ ಭಾರಿ ಉತ್ತೇಜನ ಸಿಗಲಿದೆ:
  • ಪ್ರಬೆಂಗಳೂರು ಮತ್ತು ಚೆನ್ನೈ ನಡುವಿನ ಒಟ್ಟು ಪ್ರಯಾಣದ ಅವಧಿ ಬರೋಬ್ಬರಿ 2 ರಿಂದ 3 ಗಂಟೆಗಳಷ್ಟು ತಗ್ಗಲಿದೆ.
  • ಚೆನ್ನೈ ಬಂದರಿಗೆ (Port) ಸಂಪರ್ಕ ಸುಲಭ ಮತ್ತು ವೇಗವಾಗುವುದರಿಂದ ಬೆಂಗಳೂರಿನ ಕೈಗಾರಿಕೆಗಳ ರಫ್ತು ಮತ್ತು ಆಮದು ಚಟುವಟಿಕೆಗಳು ಚುರುಕುಗೊಳ್ಳಲಿವೆ.
  • ಸರಕು ಸಾಗಣೆ ಸಮಯ ಮತ್ತು ಇಂಧನ ವೆಚ್ಚ ಗಣನೀಯವಾಗಿ ಕಡಿಮೆಯಾಗುವುದರಿಂದ ಗ್ರಾಹಕರಿಗೂ ಅನುಕೂಲವಾಗಲಿದೆ.

ಹೂಡಿಕೆಗೆ ಆಕರ್ಷಕ ಕಾರಿಡಾರ್: ಹೊಸಕೋಟೆ-ಬೆಂಗಳೂರು ಕಾರಿಡಾರ್‌ನಲ್ಲಿ ಹೊಸ ಕೈಗಾರಿಕೆಗಳು, ಬೃಹತ್ ಗೋದಾಮುಗಳು (Warehouses) ಮತ್ತು ಲಾಜಿಸ್ಟಿಕ್ಸ್ ಪಾರ್ಕ್‌ಗಳ ಸ್ಥಾಪನೆಗೆ ಹೂಡಿಕೆದಾರರು ಮುಗಿಬೀಳುತ್ತಿದ್ದಾರೆ. ಇದು ಐಟಿ, ಉತ್ಪಾದನಾ (Manufacturing) ಹಾಗೂ ಇ-ಕಾಮರ್ಸ್ ವಲಯಗಳ ವಿಸ್ತರಣೆಗೆ ಹೊಸ ದಾರಿ ತೆರೆದಿದೆ.