ಬೆಂಗಳೂರಿನ ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ ಮಧ್ಯೆ ನಿರ್ಮಾಣವಾಗಿರುವ ಮೆಟ್ರೋ ಹಳದಿ ಮಾರ್ಗದ ಸುರಕ್ಷತಾ ತಪಾಸಣೆ ನಡೆಯುತ್ತಿದ್ದು, ಆಗಸ್ಟ್ 15 ರೊಳಗೆ ವಾಣಿಜ್ಯ ಚಾಲನೆ ಆರಂಭವಾಗುವ ಸಾಧ್ಯತೆ ಇದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದ ಸುರಕ್ಷತೆಯನ್ನು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು (ಜು.23): ನವದೆಹಲಿಯಿಂದ ರೈಲ್ವೆ ಸುರಕ್ಷತಾ ಆಯುಕ್ತರು (Commissioner of Railway Safety) ಬೆಂಗಳೂರು ನಗರಕ್ಕೆ ಆಗಮಿಸಿದ್ದು, ಆರ್‌ವಿ ರಸ್ತೆ - ಬೊಮ್ಮಸಂದ್ರ ನಡುವಿನ ಬಹು ನಿರೀಕ್ಷಿತ ಹಳದಿ ಮೆಟ್ರೋ ರೈಲು ಮಾರ್ಗದ (Yellow Line, Namma Metro) ಸಂಪೂರ್ಣ ತಪಾಸಣೆಯನ್ನು ಕೈಗೊಂಡಿದ್ದಾರೆ. ಎಲ್ಲ ಕಾಮಗಾರಿ ಹಾಗೂ ಮಾರ್ಗ ನಿರ್ಮಾಣದಲ್ಲಿ ರೈಲು ಸಂಚಾರ ಸುರಕ್ಷಿತವಾಗಿದೆ ಎಂದು ಅನುಮತಿ ನೀಡಿದರೆ ಆ.15ರೊಳಗೆ ಈ ಮಾರ್ಗದಲ್ಲಿ ವಾಣಿಜ್ಯ ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ (ಬಿಎಂಆರ್‌ಸಿಎಲ್) ಈ ಹಿಂದೆ ನಿಗದಿಪಡಿಸಿದ್ದಂತೆಯೇ ಜೂನ್ ತಿಂಗಳಿಗೆ ಈ ಮಾರ್ಗದ ಕಾಮಗಾರಿ ಮುಕ್ತಾಯಗೊಳಿಸಿದೆ. ಆದರೆ, ಕಾಮಗಾರಿ ಪರಿಶೀಲನೆ, ಸುರಕ್ಷತಾ ಕಾರ್ಯಗಳ ಪರಿಶೀಲನೆ, ಕೇಂದ್ರದ ರೈಲ್ವೆ ಸಚಿವಾಲಯದ ಅನುಮತಿ ಸೇರಿ ಇನ್ನಿತರೆ ಕಾರಣಗಳಿಂದ ರೈಲು ಸಂಚಾರಕ್ಕೆ ಆರಂಭವಾಗುವುದು ಒಂದೂವರೆ ತಿಂಗಳಷ್ಟು ವಿಳಂಬವಾಗಿದೆ. ಇದೀಗ ಕೊನೆಗೂ ಅಂತಿಮ ಹಂತ ತಲುಪಿದೆ. ನಿನ್ನೆ (ಜು.22) ಬೆಳಗ್ಗೆಯಿಂದ ಶುರುವಾದ ತಪಾಸಣೆ ಇಂದು (ಜು.23) ಎರಡನೇ ದಿನವೂ ಮುಂದುವರಿದಿದೆ. ನಾಳೆಯೂ ಒಂದು ದಿನ (ಜು.24ರವರೆಗೆ) ಸುರಕ್ಷತಾ ತಪಾಸಣೆ ಕಾರ್ಯವನ್ನು ಮಾಡಲಿದ್ದಾರೆ. ರೈಲ್ವೆ ಸುರಕ್ಷತಾ ಆಯುಕ್ತರು ಈ ವೇಳೆ ನಿಲ್ದಾಣಗಳ ಸೌಲಭ್ಯಗಳು, ಹಳಿಗಳ ಸ್ಥಿತಿ, ಟ್ರ್ಯಾಕ್ ಜೋಡಣೆ, ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆ, ಎಮರ್ಜೆನ್ಸಿ ಪ್ರತಿಕ್ರಿಯೆಗಳ ಸಮೀಕ್ಷೆ ಮುಂತಾದವುಗಳನ್ನು ಪರಿಶೀಲನೆ ಮಾಡಲಿದ್ದಾರೆ.

ಒಟ್ಟಾರೆಯಾಗಿ 15 ಕಿಲೋಮೀಟರ್‌ ಉದ್ದದ ಈ ಹಳದಿ ಮಾರ್ಗವು ನಗರದ ಪ್ರಮುಖ ಬಿಸಿನೆಸ್ ಹಬ್‌ಗಳು ಮತ್ತು ವಸತಿ ಪ್ರದೇಶಗಳನ್ನು ಸಂಪರ್ಕಿಸುವ ಯೋಜನೆಯಾಗಿದೆ. ಇದರಿಂದ ಎಲೆಕ್ಟ್ರಾನಿಕ್ ಸಿಟಿ, ಹೂಸೂರಿನ ಹತ್ತಿರದ ಉದ್ಯಮ ಪ್ರದೇಶಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಪ್ರಸ್ತುತ ಆಗ್ನೇಯ ಬೆಂಗಳೂರು ಭಾಗದಲ್ಲಿ ಸಂಚಾರ ಸುಲಭಗೊಳಿಸುವಲ್ಲಿ ಇದು ಮಹತ್ವಪೂರ್ಣ ಪಾತ್ರವಹಿಸಲಿದೆ. ದಿನಂಪ್ರತಿ ಸಾವಿರಾರು ಪ್ರಯಾಣಿಕರಿಗೆ ಲಾಭವಾಗಲಿದೆ. ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತಿದ್ದ ಲಕ್ಷಾಂತರ ಪ್ರಯಾಣಿಕರಿಗೆ ಈ ಮೆಟ್ರೋ ಮಾರ್ಗ ಭಾರೀ ಅನುಕೂಲ ಆಗಲಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಶೀಘ್ರದಲ್ಲೇ ಸಾರ್ವಜನಿಕ ಬಳಕೆಗಾಗಿ ಲಭ್ಯವಾಗುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಎಲ್ಲಾ ತಾಂತ್ರಿಕ ಮಾನದಂಡಗಳನ್ನು ಪೂರೈಸಿದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ದೊರೆತ ತಕ್ಷಣವೇ ಈ ಹಳದಿ ಮಾರ್ಗದಲ್ಲಿ ವಾಣಿಜ್ಯ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ' ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇನ್ನು ನಮ್ಮ ಮೆಟ್ರೋ ಮೂಲಗಳ ಪ್ರಕಾರ, ಅಗತ್ಯ ಅನುಮತಿ ದೊರಕಿದರೆ, ಮುಂದಿನ ತಿಂಗಳು (ಆಗಸ್ಟ್) 15ರ ಒಳಗೆ ವಾಣಿಜ್ಯ ಸಂಚಾರ ಆರಂಭ ಮಾಡುವುದಾಗಿ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ, ಆರಂಭಿಕ ದಿನಗಳಲ್ಲಿ ಪ್ರಯೋಗಿಕ ಚಾಲನೆ, ಸಿಬ್ಬಂದಿ ತರಬೇತಿ ಮತ್ತು ಆಪರೇಷನ್ ಸುಧಾರಣೆ ಕಾರ್ಯಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

ಉದ್ಘಾಟನೆಗೆ ಮೋದಿ ಬರುವ ಸಾಧ್ಯತೆ

ಹಳದಿ ಮಾರ್ಗವು ರಾಷ್ಟ್ರೀಯ ಮಹತ್ವದ ಯೋಜನೆ ಎಂದು ಹೇಳಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಮಾರ್ಗವನ್ನು ಉದ್ಘಾಟನೆ ಮಾಡುವ ಸಾಧ್ಯತೆ ಇದೆ ಎಂಬ ಸುದ್ದಿ ಬರುತ್ತಿದೆ. ಬೆಂಗಳೂರಿನ ಎಲ್ಲ ಸಂಸದರು ಏರಿ ಪ್ರಧಾನಿ ಮೋದಿ ಅವರನ್ನು ಈ ಮೆಟ್ರೋ ರೈಲು ಉದ್ಘಾಟನೆಗೆ ಕರೆತರುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಮತ್ತು ಮೆಟ್ರೋ ಅಧಿಕಾರಿಗಳು ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಲಿರುವ ಹಳದಿ ಮಾರ್ಗದ ಉದ್ಘಾಟನೆಯೊಂದಿಗೇ ನಗರದ ಮೆಟ್ರೋ ನೆಟ್‌ವರ್ಕ್ ಹೊಸ ಹಂತ ಪ್ರವೇಶಿಸಲಿದೆ.