ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 5ರಿಂದ ಫೆ. 14ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟದ ಸಮಯ ಬದಲಾವಣೆಯಾಗಲಿದೆ.
ಬೆಂಗಳೂರು (ಫೆ.06): ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 5ರಿಂದ ಫೆ. 14ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಹಾರಾಟದ ಸಮಯ ಬದಲಾವಣೆಯಾಗಲಿದೆ. ಯಲಹಂಕ ವಾಯುನೆಲೆಯಲ್ಲಿ ಫೆ.10ರಿಂದ 14ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದೆ.
ಅದಕ್ಕೆ ಸಂಬಂಧಿಸಿದಂತೆ ಫೆ.5ರಿಂದಲೇ ಪೂರ್ವಾಭ್ಯಾಸ ಆರಂಭಿಸಲಾಗಿದೆ. ಹೀಗಾಗಿ ಫೆ.5ರಿಂದ 14ರವರೆಗೆ ಕೆಲ ಸಮಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿನ ವಾಯುಯಾನ ಪ್ರದೇಶವನ್ನು ಮುಚ್ಚಲಾಗುತ್ತದೆ. ಹೀಗಾಗಿ 10 ದಿನ ಪ್ರತಿದಿನ ಕೆಲ ಸಮಯ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದ್ದು, ಈಗಾಗಲೇ ನಿಗದಿಯಾಗಿರುವ ವಿಮಾನಯಾನ ಸಮಯವನ್ನು ಪರಿಷ್ಕರಿಸಲಾಗುತ್ತಿದೆ.
ಫೆ.5ರಿಂದ 8ರವರೆಗೆ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ. ಫೆ.9ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ, ಫೆ.10ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ, ಫೆ.11 ಮತ್ತು 12ರಂದು ಮಧ್ಯಾಹ್ನ 12ರಿಂದ 3ರವರೆಗೆ ಹಾಗೂ ಫೆ.13 ಮತ್ತು 14ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಾಯುಯಾನ ಪ್ರದೇಶವನ್ನು ಮುಚ್ಚಲಾಗುತ್ತದೆ.
ಟೇಕಾಫ್ ಆಗಲು ಕೆಲ ನಿಮಿಷಗಳಿದ್ದಾಗ ಇಂಡಿಗೋ ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಪ್ರಯಾಣಿಕ
ಈ ಅವಧಿಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದದಲ್ಲಿ ವಿಮಾನಯಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಹೀಗಾಗಿ ಪ್ರಯಾಣಿಕರು ತಮ್ಮ ವಿಮಾನ ಹಾರಾಟದ ಪರಿಷ್ಕೃತ ವೇಳಾಪಟ್ಟಿಯನ್ನು ವಿಮಾನಯಾನ ಸಂಸ್ಥೆ ಮೂಲಕ ಪಡೆಯುವಂತೆ ಬಿಐಎಎಲ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
