ಬೆಂಗಳೂರಿನ ಈ ಪ್ರದೇಶದಲ್ಲಿ ಮಾಂಸ ಮಾರಾಟ ಹಾಗೂ ಮಾಂಸಾಹಾರಕ್ಕೆ ನಿಷೇಧ ವಿಧಿಸಲಾಗಿದೆ. ಯಾವ ಪ್ರದೇಶದಲ್ಲಿ ನಿಷೇಧವಿದೆ ..?

ಬೆಂಗಳೂರು (ಜ.16) :  ಯಲಹಂಕ ವಾಯುನೆಲೆಯಲ್ಲಿ ‘ಏರೋ ಇಂಡಿಯಾ -2021’ ವೈಮಾನಿಕ ಪ್ರದರ್ಶನ ಹಿನ್ನೆಲೆಯಲ್ಲಿ ಜ.17ರಿಂದ ಫೆ.9ರವರೆಗೆ ವಾಯುನೆಲೆ ವ್ಯಾಪ್ತಿಯಲ್ಲಿ ಮಾಂಸಾಹಾರ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ.

ಈ ನಿಷೇಧ ನಿಯಮ ಉಲ್ಲಂಘಿಸಿದರೆ ಕೆಎಂಸಿ ಕಾಯ್ದೆ 1976 ಕಲಂ 2(22) ಹಾಗೂ ಕಲಂ 353(5) ಅಡಿ ಮತ್ತು ಭಾರತೀಯ ಏರ್‌ಕ್ರಾಫ್ಟ್‌ ನಿಯಮ 1937ರ ರೂಲ್‌ 91 ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಯಲಹಂಕ ವಲಯದ ಬಿಬಿಎಂಪಿ ಜಂಟಿ ಆಯುಕ್ತ ಅಶೋಕ್‌ ಹಾಗೂ ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಲಕ್ಷ್ಮೇನಾರಾಯಣ ಅವರು ಜಂಟಿ ಪ್ರಕಟಣೆ ಹೊರಡಿಸಿದ್ದಾರೆ.

‘ಯುದ್ಧ ಸನ್ನದ್ಧ’ ಡ್ರೋನ್ ಪಡೆ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಹಿರಂಗ ತಾಲೀಮು! ...

ಪ್ರಸಕ್ತ ವರ್ಷದ ‘ಏರ್‌ಶೋ’ ಅನ್ನು ಯಲಹಂಕ ವಾಯುನೆಲೆಯಲ್ಲಿ ಫೆ.3ರಿಂದ 7ರವರೆಗೆ ಮೂರು ದಿನ ಹಮ್ಮಿಕೊಳ್ಳಲಾಗಿದೆ. ‘ಏರ್‌ಶೋ’ ಕಾರ್ಯಕ್ರಮ ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ಸರ್ಕಾರ ಜ.17ರಿಂದ ಫೆ. 9ರವರೆಗೆ ವಾಯುನೆಲೆ ವ್ಯಾಪ್ತಿಯ 10 ಕಿ.ಮೀ ಪ್ರದೇಶದಲ್ಲಿ ಇರುವ ಮಾಂಸ ಮಾರಾಟದ ಉದ್ದಿಮೆಗಳು ಹಾಗೂ ಮಾಂಸಾಹಾರ ತಯಾರಿಸುವ ಹೋಟೆಲ್‌, ಡಾಬಾಗಳನ್ನು ತೆರೆಯದಂತೆ ಸೂಚಿಸಲಾಗಿದೆ.

ಈ ಮೂಲಕ ಒಟ್ಟು 24 ದಿನಗಳವರೆಗೆ ವಾಯುನೆಲೆ ವ್ಯಾಪ್ತಿಯಲ್ಲಿ ಮಾಂಸ ಸಂಬಂಧಿ ವ್ಯಾಪಾರ, ವ್ಯವಹಾರ ಮಾಡುವಂತಿಲ್ಲ. ಒಂದು ವೇಳೆ ಸರ್ಕಾರದ ನಿಯಮ ಉಲ್ಲಂಘಿಸಿದವರು ಶಿಕ್ಷೆಗೆ ಒಳಪಡುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.