‘ಯುದ್ಧ ಸನ್ನದ್ಧ’ ಡ್ರೋನ್ ಪಡೆ: ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಹಿರಂಗ ತಾಲೀಮು!
ಮೈನವಿರೇಳಿಸಿದ ‘ಯುದ್ಧ ಸನ್ನದ್ಧ’ ಡ್ರೋನ್ ಸಮೂಹ| ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಹಿರಂಗ ತಾಲೀಮು
ನವದೆಹಲಿ(ಜ.16): ಹಕ್ಕಿಗಳ ಗುಂಪಿನಂತೆ ಆಗಸದಲ್ಲಿ ಒಂದಾಗಿ ಹಾರುತ್ತಾ ಶತ್ರುಪಡೆಗಳ ಮೇಲೆ ನಾನಾ ರೀತಿಯ ದಾಳಿ ನಡೆಸುವ ಶಕ್ತಿ ಹೊಂದಿರುವ 15 ಯುದ್ಧ ಡ್ರೋನ್‌ಗಳ ಪಡೆಯನ್ನು ಭಾರತೀಯ ಸೇನೆ ಶುಕ್ರವಾರ ಇಲ್ಲಿ ಪ್ರದರ್ಶಿಸಿತು. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಳಿ ಸಾಮರ್ಥ್ಯದ ಈ ಡ್ರೋನ್‌ಗಳನ್ನು ಪ್ರದರ್ಶಿಸಲಾಯಿತು.
ಆಗಸದಲ್ಲಿ ಸಂಚಾರದ ವೇಳೆ ನೋಡುಗರಿಗೆ ಹಕ್ಕಿಗಳ ಗುಂಪಿನಂತೆ ಕಾಣುವ ಈ ಡ್ರೋನ್‌ಗಳು ಯಾವುದೇ ಸಮಸ್ಯೆ ಇಲ್ಲದೇ ಶತ್ರುಪಾಳಯದಲ್ಲಿ 50 ಕಿ.ಮೀ ಒಳಗಿನವರೆಗೂ ಪ್ರವೇಶಿಸಬಲ್ಲವು. ಇವುಗಳ ನಿರ್ವಹಣೆ ಮಾಡುವವರು ತೆರೆಮರೆಯಲ್ಲಿ ನಿಂತೇ ಇರುವ ಕಾರಣ ಅವರಿಗೂ ಅಪಾಯ ಇರದು.
ಹಕ್ಕಿಗಳಂತೆ ಧ್ವನಿ ಮಾಡುವ ಕಾರಣ ಶತ್ರುಗಳ ಕಣ್ಣಿಗೆ ಸಿಕ್ಕಿಬೀಳುವ ಸಾಧ್ಯತೆಯೂ ಕಡಿಮೆ. ವಿಶ್ವದ ಹಲವು ದೇಶಗಳ ಇಂಥ ಹೊಸ ಮಾದರಿಯ ಭವಿಷ್ಯದ ಶಸ್ತ್ರಾಸ್ತ್ರ ಮತ್ತು ಯುದ್ಧ ತಂತ್ರಗಳನ್ನು ಬಳಸಿಕೊಳ್ಳುತ್ತಿದ್ದು, ಇದೀಗ ಭಾರತೀಯ ಸೇನೆ ಕೂಡಾ ಆ ಸಾಲಿಗೆ ಸೇರಿದೆ.