ಬೆಂಗಳೂರಿನಲ್ಲಿ, ತನ್ನ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಪವನ್ ಎಂಬ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿ ಬಳಿ ಆತನ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಸಂಭ್ರಮದ ಮನೆಯಲ್ಲಿ ಶೋಕ ಆವರಿಸಿದೆ.

ಬೆಂಗಳೂರು: ನಗರದಲ್ಲಿ ಮನಕಲಕುವ ಅಪಘಾತವೊಂದು ಸಂಭವಿಸಿದ್ದು, ಹುಟ್ಟುಹಬ್ಬದ ದಿನವೇ ಯುವಕನೊಬ್ಬ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಈ ದುರ್ಘಟನೆ ಕುಟುಂಬಸ್ಥರು ಹಾಗೂ ಸ್ನೇಹಿತರಲ್ಲಿ ತೀವ್ರ ನೋವು ತಂದಿದೆ. ಮೃತ ಯುವಕನನ್ನು ಪವನ್ (24) ಎಂದು ಗುರುತಿಸಲಾಗಿದ್ದು, ಆತ ಬೆಂಗಳೂರು ಉತ್ತರ ಭಾಗದ ತೋಟದಗುಡ್ಡದಹಳ್ಳಿ ನಿವಾಸಿಯಾಗಿದ್ದಾನೆ. ಫೆಬ್ರವರಿ 17ರ ಸಂಜೆ ತನ್ನ ಹುಟ್ಟುಹಬ್ಬವನ್ನು ಸ್ನೇಹಿತರೊಂದಿಗೆ ಸಂಭ್ರಮದಿಂದ ಆಚರಿಸಿದ ಬಳಿಕ, ಮನೆಗೆ ತೆರಳುವ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೈಕ್–ಗೂಡ್ಸ್ ವಾಹನ ಮುಖಾಮುಖಿ ಡಿಕ್ಕಿ

ಸೋಲದೇವನಹಳ್ಳಿ ವ್ಯಾಪ್ತಿಯ ಐವರಕಂಡಪುರ ಬಳಿ ಪವನ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಅತಿವೇಗದಲ್ಲಿ ಬರುತ್ತಿದ್ದ ಅಶೋಕ್ ಲೈಲಾಂಡ್‌ ಗೂಡ್ಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಪವನ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸಣ್ಣ ವಯಸ್ಸಿನಲ್ಲಿ, ಅದೂ ತನ್ನ ಹುಟ್ಟುಹಬ್ಬದ ದಿನವೇ ಪವನ್ ಮೃತಪಟ್ಟಿರುವ ಸುದ್ದಿ ಕುಟುಂಬಸ್ಥರನ್ನು ಆಘಾತಕ್ಕೀಡುಮಾಡಿದೆ. ಸಂಭ್ರಮದ ಮನೆ ಕ್ಷಣಾರ್ಧದಲ್ಲೇ ಶೋಕದ ಮನೆಗೆ ಮಾರ್ಪಟ್ಟಿದೆ. ಈ ಸಂಬಂಧ ಚಿಕ್ಕಬಾಣಾವರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ಕಾರಣಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ.