ಬೆಂಗಳೂರಿನಲ್ಲಿ ಮನೆ ಮಾಲೀಕರೊಬ್ಬರು ಬ್ಯಾಂಕಿನಲ್ಲಿ ಮನೆ ಅಡವಿಟ್ಟು ಸಾಲ ಮಾಡಿ, 7 ಮನೆಗಳನ್ನು ಭೋಗ್ಯಕ್ಕೆ ನೀಡಿ ಪರಾರಿಯಾಗಿದ್ದಾರೆ. ಇದರಿಂದ ಭೋಗ್ಯಕ್ಕೆ ಇದ್ದ 7 ಕುಟುಂಬಗಳು ಬೀದಿಗೆ ಬಿದ್ದಿದ್ದು, ಹಣವೂ ಇಲ್ಲದೆ, ಮನೆಯೂ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವರದಿ: ಸ್ವಸ್ತಿಕ್ ಕನ್ಯಾಡಿ, ಏಷ್ಯಾನೆಟ್ ನ್ಯೂಸ್, ಬೆಂಗಳೂರು
ಬೆಂಗಳೂರು (ಫೆ.21): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಅಥವಾ ಭೋಗ್ಯಕ್ಕೆ ಮನೆ ಮಾಡುವವರೇ ಎಚ್ಚರವಾಗಿದೆ. ಇಲ್ಲೊಬ್ಬ ಮಾಲೀಕ ಬ್ಯಾಂಕ್‌ನಲ್ಲಿ ಮನೆ ಅಡವಿಟ್ಟು ಭರ್ಜರಿ ಸಾಲ ಮಾಡಿಕೊಂಡು ತನ್ನ 7 ಮನೆಗಳನ್ನು ಭೋಗ್ಯಕ್ಕೆ ನೀಡಿ ಪರಾರಿ ಆಗಿದ್ದಾನೆ. ಇತ್ತ ಬ್ಯಾಂಕ್‌ನಿಂದ ಮನೆಯಲ್ಲಿದ್ದ ಎಲ್ಲ ಭೋಗ್ಯದಾರರನ್ನು ಹೊರಗೆ ಹಾಕಿದ್ದು, ಈಗ 7 ಕುಟುಂಬಗಳು ಬೀದಿಗೆ ಬಿದ್ದಿವೆ. ಇತ್ತ ಹಣವೂ ಇಲ್ಲದೆ, ಮನೆಯೂ ಇಲ್ಲದೆ ಪರದಾಡುತ್ತಿದ್ದಾರೆ.
ಹೌದು, ಮನೆ ಲೀಸ್ ಗೆ ಹಾಕಿಕೊಂಡಿರುವ ಬಾಡಿಗೆದಾರರೇ ಹುಷಾರ್. ಮನೆ ಲೀಸ್ ತೆಗೆದುಕೊಳ್ಳುವ ಮುನ್ನ ಈ ಸ್ಟೋರಿ ನೋಡಲೇ ಬೇಕು. ಮನೆ ಮಾಲಿಕನ ಸಾಲಕ್ಕೆ ಬೀದಿಗೆ ಬಿತ್ತು 7 ಕುಟುಂಬಗಳು ಬೀದಿಗೆ ಬಿದ್ದಿವೆ. ಮನೆ ಮಾಲಿಕ ಬ್ಯಾಂಕ್‌ನಲ್ಲಿ ಲಕ್ಷಾಂತರ ಹಣ ಸಾಲ ಮಾಡಿದ್ದಾನೆ. ಇದೀಗ ಬ್ಯಾಂಕ್ ನಿಂದ ಏಕಾಏಕಿ ಮನೆಯನ್ನು ಸೀಜ್ ಮಾಡಲಾಗಿದೆ. ಇದರಿಂದ, ಬಾಡಿಗೆದಾರರು ಬೀದಿಗೆ ಬಿದ್ದಿದ್ದಾರೆ. ಅಂದ್ರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಅನುಪಮ ಶಾಲೆಯ ಬಳಿ ಘಟನೆ ನಡೆದಿದೆ.
ಮನೆಯ ಮಾಲೀಕ ತಿಮ್ಮರಾಜು ಎನ್ನುವವರು ನಮ್ಮ ಮನೆ ಮೇಲೆ ಡಿಸಿಬಿ ಬ್ಯಾಂಕ್‌ನಲ್ಲಿ ಸಾಲವನ್ನು ಮಾಡಿದ್ದಾರೆ. ಇದಾದ ನಂತರ ತಾನು ಕಟ್ಟಿದ್ದ ಕಟ್ಟಡದ 7 ಮನೆಗಳನ್ನು ಭೋಗ್ಯಕ್ಕೆ ನೀಡಿದ್ದಾರೆ. ಇದಾದ ನಂತರ ಮನೆಯಿಂದ ಯಾರ ಸಂಪರ್ಕಕ್ಕೂ ಸಿಗದೇ ಪರಾರಿ ಆಗಿದ್ದಾರೆ. ಬ್ಯಾಂಕ್‌ನಿಂದ ಆತನಿಗೆ ಕರೆ ಮಾಡಿದ್ದು, ಸಾಲ ಕಟ್ಟಲು ನೋಟೀಸ್ ಕೂಡ ನೀಡಿದ್ದಾರೆ. ಆದರೆ, ಇದಕ್ಕೆ ಉತ್ತರ ಬಾರದಿದ್ದಾಗ ತಿಮ್ಮರಾಜು ಮನೆಯುನ್ನು ಜಪ್ತಿ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರಿನ ಸಂಪರ್ಕ ಪ್ರಕ್ರಿಯೆ ಮತ್ತಷ್ಟು ಸರಳ; ರಾಮ್ ಪ್ರಸಾತ್ ಮನೋಹರ್!
ಹಲವು ನೋಟೀಸ್‌ಗಳನ್ನು ನೀಡಿದರೂ ಉತ್ತರ ಬಾರದಿದ್ದಾಗ ಡಿಸಿಬಿ ಬ್ಯಾಂಕ್ ಸಿಬ್ಬಂದಿ ಶುಕ್ರವಾರ ಬಂದು ಏಕಾಏಕಿ ಮನೆಯನ್ನು ಜಪ್ಯಿ ಮಾಡಿದೆ. ಈ ವೇಳೆ ಮನೆಯಲ್ಲಿ ಭೋಗ್ಯಕ್ಕೆ ಹಾಗೂ ಬಾಡಿಗೆಗೆ ಇದ್ದವರು ಅಲ್ಲಿಂದ ಬೇರೆಡೆ ಹೋಗಲೂ ಅವಕಾಶ ಕೊಡದೇ ಮನೆಗೆ ಬೀಗ ಜಡಿದಿದ್ದಾರೆ. ಇದರಿಂದ ಮನೆಯ ಭೋಗ್ಯದಾರರು ಇದೀಗ ಬ್ಯಾಂಕ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮನೆ ಮಾಲೀಕನಿಂದ ನೀವು ಹಣ ವಸೂಲಿ ಮಾಡಿ, ನಾವು ಹಣ ಕೊಟ್ಟು ಇಲ್ಲಿದ್ದೇವೆ ಎಂದು ವಾಗ್ದಾಳಿ ಮಾಡಿದ್ದಾರೆ. ಇನ್ನು ಮನೆಯ ಮುಂದೇ ಎಲ್ಲ ಕುಟುಂಬಗಳು ಧರಣಿ ಕುಳಿತು ಬ್ಯಾಂಕ್‌ನ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ತಿಮ್ಮರಾಜು ತನ್ನ ಪ್ರತಿ ಮನೆಗೂ 5 ಲಕ್ಷ ರೂ.ನಿಂದ 7 ಲಕ್ಷ ರೂ.ವರೆಗೆ ಹಣ ಪಡೆದು ಭೋಗ್ಯಕ್ಕೆ ಪಡೆದಿದ್ದಾರೆ. ಇದೀಗ ಬ್ಯಾಂಕ್‌ನಲ್ಲಿಯೂ ಸಾಲ ಮಾಡಿ ಪರಾರಿ ಆಗಿದ್ದು, ಬೋಗ್ಯಕ್ಕೆ ಹಣ ಕೊಟ್ಟು ಮನೆಗೆ ಸೇರಿಕೊಂಡವರು ಬೀದಿಗೆ ಬಂದಿದ್ದಾರೆ.
