ಬೆಂಗಳೂರಿನಲ್ಲಿ ಮೊಬೈಲ್ ಬಳಕೆಗೆ ಬೈದಿದ್ದಕ್ಕೆ 13 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂಗಿಯ ಮುಂದೆಯೇ ಉಡದಾರದಿಂದ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೊಬೈಲ್ ಇಲ್ಲದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ.

ಬೆಂಗಳೂರು (ಜ.29): ಮನೆಯಲ್ಲಿ ನೀನು ಓದುವುದಕ್ಕಿಂತ ಹೆಚ್ಚಾಗಿ ಮೊಬೈಲ್ ನೋಡುತ್ತೀಯ. ಇದು ಅಭ್ಯಾಸ ಮಾಡುವ ಮಕ್ಕಳಿಗೆ ಒಳ್ಳೆಯದಲ್ಲ ಎಂದು ಬೈದು ಬುದ್ಧಿ ಹೇಳಿದ್ದಕ್ಕೆ ಮನನೊಂದ 13 ವರ್ಷದ ಬಾಲಕ ತಂಗಿ ಮುಂದೆಯೇ ತನ್ನ ಉಡದಾರದಿಂದ (ಸೊಂಟಕ್ಕೆ ಕಟ್ಟುವ ದಾರ) ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಮಕ್ಕಳ ಮನಸ್ಥಿತಿ ಹೇಗಿರುತ್ತದೆಯೋ ಗೊತ್ತಿರುವುದಿಲ್ಲ. ಹೀಗಾಗಿ, ಪಾಲಕರು ಮಕ್ಕಳನ್ನು ತುಂಬಾ ಸೂಕ್ಷ್ಮವಾಗಿ ಕಾಳಜಿ ಮಾಡಬೇಕಾಗುತ್ತದೆ. ಇಲ್ಲವೆಂದರೆ ಮಕ್ಕಳು ನಮ್ಮ ಕಣ್ಣ ಮುಂದೆಯೇ ದುರಂತಕ್ಕೆ ಬಲಿಯಾಗುತ್ತವೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಗೊಲ್ಲರಹಟ್ಟಿಯ ರತ್ನ‌ನಗರದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕನನ್ನು ಧ್ರುವ (13) ಎಂದು ಗುರುತಿಸಲಾಗುದೆ. ತನ್ನ 3 ತರಗತಿ ತಂಗಿ ಮುಂದೆಯೇ ಅಣ್ಣ ಅಳುತ್ತಲೇ ಸೊಂಟಕ್ಕೆ ಕಟ್ಟಿದ್ದ ಎರಡು ಜೋಡಿಯ ಉಡದಾರವನ್ನು ಬಿಚ್ಚಿಕೊಂಡು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಅಣ್ಣ ಏನು ಮಾಡಿಕೊಳ್ಳುತ್ತಿದ್ದಾನೆ ಎಂದು ಅವನ ತಂಗಿ ನೋಡುತ್ತಿದ್ದಂತೆಯೇ ಆಕೆಯ ಕಣ್ಣ ಮುಂದೆ ಸತ್ತೇ ಹೋಗಿದ್ದಾನೆ.

ಮನೆಯಲ್ಲಿ ಹೆಚ್ಚಾಗಿ ಮೊಬೈಲ್ ನೋಡುತ್ತಿದ್ದ ಈ ಬಾಲಕ ಧ್ರುವನಿಗೆ ಬೈದು ಬುದ್ಧಿ ಹೇಳಿದ್ದರು. ಆದರೂ, ಮನೆಯವರ ಮಾತು ಕೇಳದೆ ಅತಿ ಹೆಚ್ಚಾಗಿ ಮೊಬೈಲ್ ಬಳಸುತ್ತಿದ್ದನು. ಹೀಗಾಗಿ, ಮನೆಯಲ್ಲಿ ಮೊಬೈಲ್ ಇಡದೇ ನಿನ್ನೆ ಬಾಲಕನ ತಂದೆ, ತಾಯಿ ತಮ್ಮೊಂದಿಗೆ ಮೊಬೈಲ್ ತೆಗೆದುಕೊಂಡು ಕೆಲಸಕ್ಕೆ ಹೋಗಿದ್ದರು. ಆಗ ಶಾಲೆ ಮುಗಿಸಿ ಬಂದಿದ್ದ ಅಣ್ಣ ಹಾಗೂ ತಂಗಿ ಇಬ್ಬರೇ ಮನೆಯಲ್ಲಿದ್ದರು. ಮೊಬೈಲ್ ಇಲ್ಲದ್ದರಿಂದ ಕುಪಿತಗೊಂಡ ಬಾಲಕ ಪ್ಯಾಂಟ್ ತೆಗೆದು ಸೊಂಟದಲ್ಲಿದ್ದ ಉಡದಾರವನ್ನು ಬಿಚ್ಚಿಕೊಂಡು ಫ್ಯಾನ್‌ಗೆ ಕಟ್ಟಿದ್ದಾನೆ. ನಂತರ ಅದನ್ನು ಕುತ್ತಿಗೆಗೆ ಬಿಗಿದುಕೊಂಡು ಒದ್ದಾಡಿದ್ದಾನೆ. ಆದರೆ, ತಂಗಿಗೆ ಅವನನ್ನು ರಕ್ಷಣೆ ಮಾಡುವುದು ಗೊತ್ತಾಗದೇ ಸುಮ್ಮನೇ ನೋಡುತ್ತಾ ನಿಂತಿದ್ದಾಳೆ.

ಇದನ್ನೂ ಓದಿ: ಗಲ್ಲಿ ಕ್ರಿಕೆಟ್ ಮಕ್ಕಳ ಜಗಳದಲ್ಲಿ 13 ವರ್ಷದ ಬಾಲಕ ದುರಂತ ಅಂತ್ಯ

ಸಂಜೆ 7 ಗಂಟೆ ಸುಮಾರಿಗೆ ಅವರ ತಾಯಿ ಬಂದಿದ್ದಾರೆ. ಆಗ ಫ್ಯಾನ್‌ಗೆ ಉಡದಾರ ಬಿಗಿದುಕೊಂಡು ಅರೆಜೀವ ಸ್ಥಿತಿಯಲ್ಲಿದ್ದ ಬಾಲಕನ ಭಾರ ತಾಳದೇ ಉಡುದಾರ ತುಂಡಾಗಿ ಬಿದ್ದಿದ್ದಾನೆ. ಕೂಡಲೇ ತಾಯಿ ಗಾಬರಿಗೊಂಡು ಬಾಲಕನ್ನು ಸ್ಥಳೀಯರ ಸಹಾರದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಬಾಲಕನನ್ನು ಪರೀಕ್ಷಿಸಿದ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಬಾಲಕನ ತಂದೆ ಬಸವರಾಜ್ ಬೇಕರಿ ಕೆಲಸ ಮಾಡುತ್ತಿದ್ದರೆ, ತಾಯಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಬಾಲಕ ಆತ್ಮಹತ್ಯೆಗೆ ಮಾಡಿಕೊಂಡಿರುವುದಕ್ಕೆ ಬೇರೆ ಏನಾದರೂ ಕಾರಣ ಇದೆಯೇ ಎಂದು ಪೊಲೀಸರು ಅನುಮಾನವಾಗಿದೆ.